ಜಲೀಲ್ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಬಂಧನ: ಸುರತ್ಕಲ್‌ನಲ್ಲಿ ನಿಯಮ ಸಡಿಲಿಕೆ
ಮಂಗಳೂರು, ಡಿಸೆಂಬರ್ 27: ಮಂಗಳೂರು ನಗರದ ಕೃಷ್ಣಾಪುರ ನಿವಾಸಿ ಜಲೀಲ್ ಹತ್ಯೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ ನಾಲ್ಕಕ್ಕೇರಿದೆ.
ಸುರತ್ಕಲ್ ಬಳಿಯ ಕಾಟಿಪಳ್ಳ ಕೃಷ್ಣಾಪುರ ನಾಲ್ಕನೇ ಬ್ಲಾಕ್ ನಿವಾಸಿ ಲಕ್ಷ್ಮೀಶ ದೇವಾಡಿಗ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈ ಹಿಂದೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಲಕ್ಷ್ಮೀಶ ದೇವಾಡಿಗನನ್ನು ಕೊಲೆ ಕೃತ್ಯಕ್ಕೆ ಸಹಕರಿಸಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತರಲ್ಲಿ ಇಬ್ಬರು ಜಲೀಲ್ ಅವರನ್ನು ಫ್ಯಾನ್ಸಿ ಅಂಗಡಿಗೆ ನುಗ್ಗಿ ಚೂರಿಯಿಂದ ಇರಿದು ಕೊಲೆಗೈದಿದ್ದರು. ಮತ್ತೋರ್ವನು ಕೊಲೆ ಆರೋಪಿಗಳನ್ನು ಬೈಕ್‌ನಲ್ಲಿ ಪರಾರಿ ಮಾಡಿಸಲು ಸಹಕರಿಸಿದ್ದನು ಎನ್ನಲಾಗಿದೆ. ಪೊಲೀಸ್ ತನಿಖಾ ತಂಡ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಭಾನುವಾರ ರಾತ್ರಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಮತ್ತೋರ್ವ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದೆ.
ಕೃಷ್ಣಾಪುರ ನೈತಂಗಡಿ ನಿವಾಸಿ ಶೈಲೇಶ್ ಅಲಿಯಾಸ್ ಶೈಲೇಶ್ ಪೂಜಾರಿ(21), ಉಡುಪಿಯ ಹೆಜಮಾಡಿ ನಿವಾಸಿ ಸವಿನ್ ಕಾಂಚನ್ ಅಲಿಯಾಸ್ ಮುನ್ನ (24) ಹೆಜಮಾಡಿ ಉಡುಪಿ, ಕೃಷ್ಣಾಪುರ 3ನೇ ಬ್ಲಾಕ್ ನಿವಾಸಿ ಪವನ್ ಅಲಿಯಾಸ್ ಪಚ್ಚು (23) ಎಂಬ ಮೂವರು ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು.

ಇನ್ನು ಹತ್ಯೆ ಬಳಿಕ ಬಿಗುವಿನ ವಾತಾವರಣ ನಿರ್ಮಾವಾಗಿದ್ದ ಸುರತ್ಕಲ್ ಮಂಗಳವಾರ ಸಹಜ ಸ್ಥಿತಿಗೆ ಬಂದಿರುವ ಕಾರಣ ಬಿಗಿ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಕಾವೂರು, ಬಜ್ಪೆ, ಸುರತ್ಕಲ್, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ಮದ್ಯ ಮಾರಾಟ ನಿಷೇಧ ಆದೇಶವನ್ನು ಹಿಂಪಡೆಯಲಾಗಿದೆ.
ಡಿಸೆಂಬರ್ 29 ರವರೆಗೆ ವಿಧಿಸಲಾಗಿದ್ದ ಮದ್ಯ ನಿಷೇಧ ಆದೇಶವನ್ನು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹಿಂಪಡೆದಿದ್ದಾರೆ. 144 ಸೆಕ್ಷನ್ ನಿಷೇಧಾಜ್ಞೆ ಯಲ್ಲೂ ನಿಯಮ ಸಡಿಲಿಕೆ ಮಾಡಲಾಗಿದೆ. ನಿಷೇಧಿತ ಪ್ರದೇಶದಲ್ಲಿ ಜನ ಗುಂಪು ಸೇರುವುದು. ಮಾರಕಾಯುಧಗಳನ್ನು ತೆಗೆದುಕೊಂಡು ಓಡಾಡುವುದನ್ನು ನಿಷೇಧ ಮಾಡಲಾಗಿದೆ.












Click it and Unblock the Notifications