ಫೆಬ್ರವರಿ 11 ರಂದು ಪುತ್ತೂರಿಗೆ ಆಗಮಿಸಲಿರುವ ಅಮಿತ್ ಶಾ; ಸಿದ್ಧತೆ ಹೇಗಿದೆ?, ಇಲ್ಲಿದೆ ವಿವರ
ಫೆಬ್ರವರಿ 11ರಂದು ಪುತ್ತೂರಿಗೆ ಅಮಿತ್ ಶಾ ಆಗಮಿಸಲಿದ್ದು, ವೇದಿಕೆ ಸಿದ್ಧತೆ ಕಾರ್ಯ ಭರದಿಂದ ಸಾಗಿದೆ.
ಮಂಗಳೂರು, ಫೆಬ್ರವರಿ, 03: ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆಬ್ರವರಿ 11ರಂದು ಭೇಟಿ ನೀಡಲಿದ್ದಾರೆ. ಪುತ್ತೂರಿನಲ್ಲಿ ಅಮಿತ್ ಶಾ ಭೇಟಿ ಸಂಚಲನ ಸೃಷ್ಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ರವಿ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಟೆ ವಿಕ್ರಮ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ.
ಪುತ್ತೂರಿನಲ್ಲಿ ಅಮಿತ್ ಶಾ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ವರ್ಷಾಚರಣೆಗೆ ಚಾಲನೆ ನೀಡಲಿದ್ದಾರೆ. ಬಳಿಕ ತೆಂಕಿಲದ ವಿವೇಕಾನಂದ ಶಾಲಾ ಮೈದಾನದಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ವೇದಿಕೆ, ಆಗಮನ, ನಿರ್ಗಮನ ಹೇಗಿರಬೇಕೆಂದು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವಿವೇಕಾನಂದ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಎರಡು ದಿನ ರಜೆ ನೀಡುವ ಬಗ್ಗೆ ಚರ್ಚೆಯಾಗಿದೆ. ವೇದಿಕೆ ನಿರ್ಮಾಣ ಕಾಮಗಾರಿಗೆ ನೆಲದ ಸಮತ್ತಟ್ಟು ಕಾರ್ಯ ನಡೆಯುತ್ತಿದ್ದು, ಕ್ರಿಮಿನಲ್ ಹಿನ್ನಲೆಯುಳ್ಳ ಕೆಲಸಗಾರರನ್ನು ಬಳಸದಂತೆ ವೇದಿಕೆ ಕಾಮಗಾರಿ ವಹಿಸಿಕೊಂಡ ಕಾಂಟ್ರಾಕ್ಟರ್‌ಗೆ ಎಸ್‌ಪಿ ಸೂಚನೆ ನೀಡಿದ್ದಾರೆ.

4 ಹೆಕ್ಟೇರ್‌ನಲ್ಲಿ ವೇದಿಕೆ ಸಿದ್ಧತೆ
ಸುಮಾರು 4 ಹೆಕ್ಟೇರ್ ವ್ಯಾಪ್ತಿಯ ಶಾಲಾ ಮೈದಾನ ಇದಾಗಿದ್ದು, ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಅಮಿತ್ ಶಾ ಕೇರಳದ ಕಣ್ಣೂರಿನಿಂದ ಮಂಗಳೂರಿಗೆ ಬರಲಿದ್ದು, ಬಳಿಕ ಸೇನಾ ಹೆಲಿಕಾಪ್ಟರ್ ಮೂಲಕ ಪುತ್ತೂರು ಫಿಲೋಮಿನಾ ಕಾಲೇಜು ಮೈದಾನದಲ್ಲಿ ಲ್ಯಾಂಡ್ ಆಗಲಿದ್ದಾರೆ. ಈಗಾಗಲೇ ಹೆಲಿಕಾಪ್ಟರ್ ಲ್ಯಾಂಡ್ ಆಗುವ ಪ್ರದೇಶಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರ ವಿವರ
ತೆಂಕಿಲದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಭಾಗಗಳಿಂದ ಕಾರ್ಯಕರ್ತರು ಬರುವ ನಿರೀಕ್ಷೆಗಳಿವೆ. ಕಾರ್ಯಕರ್ತರ ಜೊತೆಗೆ ರೈತರು, ಸಹಕಾರಿಗಳು ಭಾಗವಹಿಸಲಿದ್ದಾರೆ. ಪುತ್ತೂರಿನ ಈ ಕಾರ್ಯಕ್ರಮವನ್ನು ಚಾರಿತ್ರಿಕಗೊಳಿಸಲು ಬಿಜೆಪಿ ನಾಯಕರು ಎಲ್ಲಾ ಕ್ರಮವನ್ನು ಕೈಗೊಂಡಿದ್ದಾರೆ.












Click it and Unblock the Notifications