ಪುತ್ತೂರು ಕಂಬಳದಲ್ಲಿ ನಟಿ ಸಾನ್ಯ ಐಯರ್ ವಿವಾದ: ಮಹಾಲಿಂಗೇಶ್ವರನ ಮೊರೆ ಹೋದ ಸಮಿತಿ
ನಟಿ ಸಾನ್ಯ ಐಯರ್ ವಿವಾದದ ಬಳಿಕ ಪುತ್ತೂರು ಜೋಡುಕೆರೆ ಕಂಬಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದವರ ವಿರುದ್ಧ ಕಂಬಳ ಸಮಿತಿ ದೇವರ ಮೊರೆ ಹೋಗಿದೆ. ನಿಂದಿಸಿದವರನ್ನು ನೀನೇ ನೋಡಿಕೋ ಎಂದು ಮಹಾಲಿಂಗೇಶ್ವರ ನ ಬಳಿ ಕಂಬಳ ಸಮಿತಿ ಪ್ರಾರ್ಥನೆ ಮಾಡಿದೆ.
ಮಂಗಳೂರು, ಫೆಬ್ರವರಿ 2: ಪುತ್ತೂರಿನಲ್ಲಿ ನಡೆದ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳದಲ್ಲಿ ನಟಿ ಸಾನ್ಯ ಐಯರ್‌ಗೆ ಕಿರುಕುಳ ವಿಚಾರವಾಗಿ ಅನಾವಶ್ಯಕವಾಗಿ ಕಂಬಳ ಸಮಿತಿಯನ್ನು ಗುರಿಮಾಡಲಾಗುತ್ತಿದೆ ಎಂದು ಪುತ್ತೂರು ಕಂಬಳ ಸಮಿತಿ, ಪುತ್ತೂರು ಸೀಮೆಯ ಹತ್ತೂರಿನ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಮೊರೆ ಹೋಗಿದ್ದಾರೆ.
ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸೇರಿದಂತೆ ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿ ಮಹಾಲಿಂಗೇಶ್ವರ ದೇವರ ಮೊರೆ ಹೋಗಿದೆ. ನಟಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಘಟನೆಗೆ ಕಂಬಳ ಸಮಿತಿಯನ್ನು ತಪ್ಪಿತಸ್ಥರನ್ನಾಗಿ ಮಾಡಲಾಗುತ್ತಿದೆ. ಘಟನೆಗೂ, ಸಮಿತಿಗೂ ಯಾವುದೇ ಸಂಬಂಧವಿಲ್ಲ. ಆದರೂ ಕಂಬಳ ಸಮಿತಿಯನ್ನು ದೂರಲಾಗಿದೆ. ಕೆಟ್ಟ ಶಬ್ಧಗಳಿಂದ ಕಂಬಳ ಸಮಿತಿಯನ್ನು ನಿಂದಿಸಲಾಗಿದೆ. ನಿಂದಿಸಿದವರನ್ನು ನೀನೇ ನೋಡಿಕೋ ಎಂದು ಮಹಾಲಿಂಗೇಶ್ವರ ನ ಬಳಿ ಕಂಬಳ ಸಮಿತಿ ಪ್ರಾರ್ಥನೆ ಮಾಡಿದೆ.
ಪ್ರಾರ್ಥನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, "ನಟಿ ಸಾನ್ಯ ಕಂಬಳಕ್ಕೆ ಅತಿಥಿಯಾಗಿ ಬಂದಿದ್ದರು. ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಆಕೆ ಹಿಂದಿರುಗಿದ್ದಾರೆ. ಆದರೆ ಆಕೆ ಮತ್ತೆ ಕಂಬಳ ಗದ್ದೆಗೆ ಬಂದ ವಿಚಾರ ಸಮಿತಿಯ ಗಮನಕ್ಕೆ ಬಂದಿಲ್ಲ. ಯಾರೋ ಅವರೊಂದಿಗೆ ಅಸಭ್ಯವಾಗಿ ವರ್ತಿಸಿರುವುದಕ್ಕೆ ಕಂಬಳ ಸಮಿತಿಯನ್ನು ಗುರಿ ಮಾಡೋದು ತಪ್ಪು. ಈ ಕಾರಣಕ್ಕಾಗಿ ದೇವರ ಮುಂದೆಯೇ ನ್ಯಾಯ ಕೇಳಲು ಬಂದಿದ್ದೇವೆ" ಎಂದಿದ್ದಾರೆ.

ಘಟನೆಯ ಬಗ್ಗೆ ಸಾನ್ಯ ಪೊಲೀಸ್ ದೂರು ನೀಡಲಿ. ಅವರಿಗೆ ಬೇಕಾದ ಎಲ್ಲಾ ಸಹಾಯ ನಾವು ಮಾಡುತ್ತೇವೆ. ಇದೇ ಘಟನೆಯನ್ನು ಮುಂದಿಟ್ಟು ಕಂಬಳ ಸಮಿತಿಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ಕೆಲವು ಶಕ್ತಿಗಳು ಕೆಲಸ ಮಾಡುತ್ತಿದೆ. ಹಿಂದೂ,ಮುಸ್ಲಿಂ ರೂಪವನ್ನೂ ನೀಡಲಾಗುತ್ತಿದೆ. ಹೀಗೆ ಅಪಪ್ರಚಾರ ಮಾಡುವವರನ್ನು ದೇವರೇ ನೋಡಿಕೊಳ್ಳುತ್ತಾರೆ ಎಂದು ಶಕುಂತಲಾ ಶೆಟ್ಟಿ ಹೇಳಿದ್ದಾರೆ.

ಮಾತು ಮುಂದುವರಿಸಿದ ಶಂಕುತಲಾ ಶೆಟ್ಟಿ , "ಕಂಬಳ ನಡೆಯುವ ದೇವಮಾರು ಗದ್ದೆಯಲ್ಲಿ ಯಾರೂ ಯಾವ ಅನ್ಯಾಯವನ್ನೂ ಮಾಡಬಾರದು. ಅನ್ಯಾಯ ಮಾಡಿದವರಿಗೆ ಮಹಾಲಿಂಗೇಶ್ವರ ಕ್ಷೇಮ ನೀಡದ ಹಲವು ಜಲ್ವಂತ ಸಾಕ್ಷಿಗಳು ನಮ್ಮಲ್ಲಿ ಇವೆ. ಆದರೂ ಅಹಿತಕರ ಘಟನೆ ನಡೆಸಲು ಹುನ್ನಾರ ಎಬ್ಬಿಸಲಾಗಿದೆ. ಕಂಬಳ ಐತಿಹಾಸಿಕವಾಗಿ ಯಶಸ್ಸು ಕಂಡಿರುವುದನ್ನು ಸಹಿಸಲಾಗದೇ ಕೆಲವರು ಪುಕಾರು ಎಬ್ಬಿಸುತ್ತಿದ್ದಾರೆ" ಎಂದು ದೂರಿದ್ದಾರೆ.












Click it and Unblock the Notifications