ಆಗ ಗುಹೆಯೊಳಗೆ, ಈಗ ನೀರೊಳಗೆ, ಮುಂದೆ ಚಂದ್ರನ ಮೇಲೆ: ಮೋದಿ ವಿರುದ್ಧ ಪ್ರಕಾಶ್ ರೈ ವಾಗ್ದಾಳಿ
ಮಂಗಳೂರು, ಫೆಬ್ರವರಿ 28: ಮಂಗಳೂರು ನಗರದ ತೊಕ್ಕೊಟ್ಟಿನ ಯುನಿಟಿ ಮೈದಾನದಲ್ಲಿ ನಡೆದ ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಬಹುಭಾಷಾ ನಟ ಪ್ರಕಾಶ್ ರೈ ಇಡೀ ಭಾಷಣದುದ್ದಕ್ಕೂ ಹೆಸರೆತ್ತದೆ ಪರೋಕ್ಷವಾಗಿ ಪ್ರಧಾನಿ ಮೋದಿಯವರ ವಿರುದ್ಧ ಏಕವಚನದಲ್ಲಿಯೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಿಂದೆ ಸ್ವಾತಂತ್ರ್ಯಕ್ಕಾಗಿ ಉಪವಾಸ ಮಾಡುವ ನಾಯಕರಿದ್ದರು. ಆದರೆ ಈಗ ದೇವಸ್ಥಾನದ ಉದ್ಘಾಟನೆಗೆ ಉಪವಾಸ ಮಾಡುವ ನಾಯಕನಿದ್ದಾನೆ. ನಮ್ಮ ದೇಶದಲ್ಲಿ ಎಂಥಹ ನಾಯಕನಿದ್ದಾನೆ. ಆತ ದೇಶವನ್ನು ಹೇಗೆ ಮಂಗ ಮಾಡುತ್ತಿದ್ದಾನೆ ಅಂದರೆ 2019ರಲ್ಲಿ ಗುಹೆ ಸೇರಿಕೊಂಡ. ಈಗ ಕ್ಯಾಮರಾ ಹಿಡಿದುಕೊಂಡು ನೀರೊಳಗೆ ಸೇರಿದ್ದಾನೆ.

ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ. ದಿನಕ್ಕೆ ಐದು ಕಾಸ್ಟ್ಯೂಮ್ ಚೇಂಜ್ ಮಾಡುತ್ತಾನೆ. ಕರ್ಕಶವಾದ ಲೌಡ್ ಸ್ಪೀಕರ್ ಅವನು. ಈತ ವಂದೇ ಭಾರತ್‌ಗೆ ಬಾವುಟ ತೋರಿಸಿದಷ್ಟು ಬಾವುಟವನ್ನು ಸ್ಟೇಷನ್ ಮಾಸ್ಟರ್ ಸಹ ತೋರಿಸಿರಲಿಕ್ಕಿಲ್ಲ ಎಂದು ಏಕವಚನದಲ್ಲಿಯೇ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಲಾವಿದನಾಗಿ ಮಾತನಾಡಬೇಕಾಗುವುದು ನನ್ನ ಜವಾಬ್ದಾರಿ. ಸಮಸ್ಯೆಗಳಾದಾಗ ಬಂದು ನಾನು ನಿಲ್ಲಬೇಕಿದೆ. ದೇಹಕ್ಕಾದ ಗಾಯಗಳು ಸುಮ್ಮನಿದ್ದರೂ ಶಮನವಾಗುತ್ತದೆ. ಆದರೆ ದೇಶಕ್ಕಾದ ಗಾಯ ನಾವು ಸುಮ್ಮನಿದ್ದಷ್ಟು ಹೆಚ್ಚಾಗುತ್ತದೆ. ಒಬ್ಬ ಕಲಾವಿದ ಮೌನವಾದರೆ ಇಡೀ ಸಮಾಜ ಮೌನವಾದಂತೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಕೊಟ್ಟವರಲ್ಲಿ ಅಧಿಕಾರದ ಶಕ್ತಿ ಇದೆ. ಪ್ರಜಾಪ್ರಭುತ್ವದಲ್ಲಿ ಸೂಕ್ಷ್ಮತೆ ಇರಬೇಕು ಎಂದು ನಟ ಪ್ರಕಾಶ್ ರೈ ಹೇಳಿದರು.
ಎಲ್ಲಾ ಧರ್ಮದಲ್ಲಿರುವ ಅಂಧ ಭಕ್ತರದ್ದೇ ನನಗೆ ಸಮಸ್ಯೆ
ಸ್ವಾತಂತ್ರ್ಯ ಬಂದು ಏಳು ದಶಕಗಳು ಆಗಿದೆ. ಹಿಂದೆ ಸ್ವಾತಂತ್ರ್ಯಕ್ಕಾಗಿ ಉಪವಾಸ ಮಾಡಿದ ನಾಯಕರಿದ್ದರು. ಆದರೆ ಈಗ ದೇವಸ್ಥಾನದ ಉದ್ಘಾಟನೆಗಾಗಿ ಉಪವಾಸ ಮಾಡುವ ನಾಯಕ ಇದ್ದಾರೆ. ಎಲ್ಲಾ ಧರ್ಮದಲ್ಲಿರುವ ಅಂಧ ಭಕ್ತರದ್ದೇ ನನಗೆ ಸಮಸ್ಯೆ. ನಾನು ಯಾವ ಪಾರ್ಟಿ ಅಂತಾರೆ, ನಾನು ಜನರ ಪಕ್ಷ ಅಂತೇನೆ. ಕಲಾವಿದನಾಗಿ ಮಾತನಾಡಬೇಕಿರುವುದು ನನ್ನ ಜವಾಬ್ದಾರಿ. ಸಮಸ್ಯೆಯಾದಾಗ ಬಂದು ನಿಲ್ಲಬೇಕು. ನಾನು ಬಡವ ಅಲ್ಲ, ಜನರ ಶ್ರೀಮಂತಿಕೆ ನನ್ನ ಬಳಿ ಇದೆ ಎಂದರು.
ಮಾತೆತ್ತಿದ್ರೆ ರಾಮಮಂದಿರ, ಮಸೀದಿ, ಹಿಂದೂ ಧರ್ಮ ಅಂತಾರೆ. ಎಷ್ಟು ಅಂತಾ ಅಗಿತಾ ಹೋಗ್ತೀರಾ. ಮುಂದೆ ಹರಪ್ಪ, ಮೊಹೆಂಜಾದಾರು ಸಿಗಬಹುದು. ಹಾಗಾದ್ರೆ ಮತ್ತೆ ಶಿಲಾಯುಗಕ್ಕೆ ಹೋಗ್ತೀರಾ..? ಪೆಟ್ರೋಲ್ ಮುಸ್ಲಿಂ ರಾಷ್ಟ್ರದಲ್ಲಿ ಸಿಗುತ್ತದೆ, ಹಾಗಾದ್ರೆ ಪೆಟ್ರೋಲ್ ಬೇಡ ಅಂತಾ ಎತ್ತಿನಗಾಡಿಯಲ್ಲಿ ಹೋಗ್ತೀರಾ? ಈ ಸಲ ಗೆದ್ದರೆ ಇನ್ನಷ್ಟು ನಾಚಿಕೆ ಮಾನ ಮರ್ಯಾದೆ ಕಳೆದುಕೊಳ್ಳುತ್ತಾನೆ ಎಂದು ಹೇಳಿದರು.
ಹಿಂದೂ ರಾಷ್ಟ್ರ ಮಾಡಲು ಈ ಮಂಗಗಳು ತಿರುಗಾಡ್ತಾ ಇದ್ದಾರೆ. ಹಿಂದೂ ರಾಷ್ಟ್ರ ಆದ ಮೇಲೆ ಮತ್ತೆ ಜಾತಿ ಪದ್ದತಿ ಶುರು ಮಾಡುತ್ತಾರೆ. ಫೇಕ್ ಡಿಗ್ರಿಯಲ್ಲಿ ಒಡಾಡುತ್ತಿರುವವನಿಗೆ ಇದೆಲ್ಲಾ ಹೇಗೆ ಗೊತ್ತಾಗುತ್ತದೆ. ಪಾರ್ಲಿಮೆಂಟ್ ಮೇಲೆ ನಾಲ್ಕೈದು ಯುವಕ ಯುವತಿಯರು ದಾಳಿ ಮಾಡಿದರು ಯಾಕೆ ಹಾಗೆ ಯುವಕರು ಮಾಡಿದರು ಎಂದು ನಾವು ಯೋಚನೆ ಮಾಡಬೇಕು ಎಂದರು.
ಗಲಾಟೆ ಮಾಡಿಸುವ ಒಬ್ಬ ಜನಪ್ರತಿನಿಧಿಯ ಮಕ್ಕಳು ಜೈಲಿನಲ್ಲಿ ಇದ್ದಾರಾ..?
ನಿರುದ್ಯೋಗ ಸಮಸ್ಯೆ ಇದೆ ಎಂದು ಯುವಕರು ಹೇಳುತ್ತಿದ್ದಾರೆ. ಬಾಲ್ಯದಲ್ಲಿದ್ದಾಗ ಮಂಗಳೂರು ಹೀಗಾಗುತ್ತೆ ಎಂದು ಗೊತ್ತಿರಲಿಲ್ಲ. ಎಷ್ಟು ಜನ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಗಲಾಟೆ ಮಾಡಿಸುವ ಒಬ್ಬ ಜನಪ್ರತಿನಿಧಿಯ ಮಕ್ಕಳು ಜೈಲಿನಲ್ಲಿ ಇದ್ದಾರಾ..? ದೇಶದಲ್ಲಿ ದೇವಸ್ಥಾನವನ್ನು ಉದ್ಘಾಟನೆ ಮಾಡುವ ಕೆಲಸ ಯಾರಾದರೂ ಮಾಡಿದ್ದಾರಾ..? ಕಾಮಗಾರಿ ಅಪೂರ್ಣವಾಗಿ ಉದ್ಘಾಟನೆಯಾಗಿದೆ. ಸಂಗ್ರಹಿಸಿದ ದುಡ್ಡೆಲ್ಲಾ ಎಲ್ಲೋಯ್ತು..? ಕೋಟ್ಯಾಂತರ ಇಟ್ಟಿಗೆ ಎಲ್ಲಿ ಹೋಯಿತು..? ಎಂದು ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವ ಅಂದ್ರೆ ಮೆಜಾರಿಟಿ ಅಲ್ಲ. ಮೆಜಾರಿಟಿ ಮುಖ್ಯವಾದ್ರೆ ಕಾಗೆ ರಾಷ್ಟ್ರೀಯ ಪಕ್ಷಿ ಆಗಬೇಕಿತ್ತು. ಹಸು ರಾಷ್ಟ್ರೀಯ ಪ್ರಾಣಿ ಆಗಬೇಕಿತ್ತು. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಕೊಟ್ಟವರಲ್ಲಿ ಅಧಿಕಾರದ ಶಕ್ತಿ ಇದೆ. ಲೋಕಸಭಾ ಚುನಾವಣೆಯಲ್ಲಿ ಮನೆಮನೆಗೆ ಈ ಸಂದೇಶ ನೀಡಬೇಕು ಎಂದು ಪ್ರಕಾಶ್ ರೈ ಟೀಕಿಸಿದ್ದಾರೆ.












Click it and Unblock the Notifications