ಕೊಡಗು ಮಾದರಿ ವಿಶೇಷ ಪ್ಯಾಕೇಜನ್ನು ಬೆಳ್ತಂಗಡಿಗೆ ಘೋಷಿಸಲಿ- ಅಭಯಚಂದ್ರ ಜೈನ್
ಮಂಗಳೂರು ಆಗಸ್ಟ್ 14: "ಮಳೆಯಿಂದಾಗಿ ಬೆಳ್ತಂಗಡಿಯಲ್ಲಿ ಹೆಚ್ಚು ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗು ಮಾದರಿಯಲ್ಲಿ ಬೆಳ್ತಂಗಡಿ ತಾಲೂಕಿಗೆ ವಿಶೇಷ ಪ್ಯಾಕೇಜನ್ನು ರಾಜ್ಯ ಸರಕಾರ ಘೋಷಿಸಬೇಕು" ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಕಳೆದ ಬಾರಿ ಮಡಿಕೇರಿಯಲ್ಲಿ ಸಂಭವಿಸಿದ ಮಳೆಹಾನಿಗಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ಬೆಳ್ತಂಗಡಿ ತಾಲ್ಲೂಕೊಂದರಲ್ಲೇ ಹಾನಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶದಿಂದ ಹರಿದುಬಂದ ಅಪಾರ ಪ್ರಮಾಣದ ಮಳೆ ನೀರು ನದಿಗಳಿಗೆ ಸೇರಿ ಸೇತುವೆ, ಕಿಂಡಿ ಅಣೆಕಟ್ಟುಗಳು ಕೊಚ್ಚಿ ಹೋಗಿವೆ. ಪಶ್ಚಿಮ ಘಟ್ಟದ ತಪ್ಪಲಿನ ಜನ ಕೃಷಿಯನ್ನೇ ಅವಲಂಬಿಸಿರುವವರು. ಸುಮಾರು 500 ಮನೆಗಳಿಗೆ ಹಾನಿಯಾಗಿದ್ದು, 300 ಮನೆಗಳು ಪೂರ್ತಿಯಾಗಿ ಹಾನಿಯಾಗಿವೆ. ಮೂರು ಸೇತುವೆಗಳು ನಾಶವಾಗಿವೆ. ಇದರ ಜತೆ ಕಿರು ಸೇತುವೆಗಳು, ಕಿಂಡಿ ಅಣೆಕಟ್ಟುಗಳು ಕೂಡಾ ಕೊಚ್ಚಿ ಹೋಗಿವೆ. 100 ಎಕರೆ ಬೆಳೆ ನಾಶವಾಗಿದೆ. ಆದ್ದರಿಂದ ರಾಜ್ಯ ಸರಕಾರ ಕೊಡಗು ವಿಶೇಷ ಪ್ಯಾಕೇಜ್ ಮಾದರಿಯಲ್ಲಿ ಬೆಳ್ತಂಗಡಿ ತಾಲೂಕಿಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕು" ಎಂದು ಒತ್ತಾಯಿಸಿದರು.

"ಎಲ್ಲವನ್ನು ಕಳೆದುಕೊಂಡಿರುವ ಇಲ್ಲಿಯ ಜನರಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ವರ್ಷಗಳೇ ಬೇಕಾದೀತು. ಹಾಗಾಗಿ ಅವರಿಗೆ ಸಮರ್ಪಕವಾಗಿ ಸ್ಪಂದಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಮಂತ್ರಿ ಮಂಡಲ ರಚನೆ ಆಗದಿದ್ದರೂ ರಾಜ್ಯದಾದ್ಯಂತ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಇದನ್ನು ಸ್ವಾಗತಿಸುತ್ತೇವೆ" ಎಂದರು.












Click it and Unblock the Notifications