ಮಲ್ಪೆ ಕಡಲಕಿನಾರೆಯಲ್ಲಿ ರೂಬಿಕ್ಸ್ ಕ್ಯೂಬ್‌ನಲ್ಲಿ ಅರಳಿದ ಅಪ್ಪು ಚಿತ್ರ
ಉಡುಪಿ, ನವೆಂಬರ್ 10: ಕನ್ನಡದ ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಉಡುಪಿಯ ಮಲ್ಪೆ ಬೀಚ್ ನೆಚ್ಚಿನ ತಾಣವಾಗಿತ್ತು. ಉಡುಪಿಯಲ್ಲಿ ಎಲ್ಲೇ ಶೂಟಿಂಗ್ ಇದ್ದರೂ, ಮಲ್ಪೆ ಬೀಚ್‌ಗೆ ಅಪ್ಪು ಬಾರದೇ ಇರುತ್ತಿರಲಿಲ್ಲ.
ಇಂತಹ ಮಲ್ಪೆ ಬೀಚ್‌ನಲ್ಲಿ ರೂಬಿಕ್ಸ್ ಕ್ಯೂಬ್ ಕಲಾವಿದನೊಬ್ಬ ಅಗಲಿದ ಅಪ್ಪುವಿನ ಅಪರೂಪದ ಕಲಾಕೃತಿಯೊಂದನ್ನು ರಚಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪವರ್ ಸ್ಟಾರ್ ಅಪ್ಪುವಿಗೆ, ಕಲಾವಿದರು ತಮ್ಮ ತಮ್ಮ ವಿಶಿಷ್ಟ ಕಲೆಯ ಮೂಲಕ ನಮನ ಸಲ್ಲಿಸುತ್ತಿದ್ದಾರೆ. ಪ್ರೀತಿ ತೋರಿಸುತ್ತಿದ್ದಾರೆ. ಅದರಂತೆ ಉಡುಪಿಯ ರೂಬಿಕ್ಸ್ ಕಲಾವಿದ ಮಹೇಶ್ ಮಲ್ಪೆ ತಮ್ಮ ಕೈಚಳಕದಿಂದ ರೂಬಿಕ್ಸ್ ಕ್ಯೂಬ್ ಮೂಲಕ ಅಪ್ಪು ಭಾವಚಿತ್ರ ಬಿಡಿಸಿ ನೆಚ್ಚಿನ ನಟವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮಹೇಶ್ ಮಲ್ಪೆ, ಅಪ್ಪು ಅವರ ಇಷ್ಟದ ಮಲ್ಪೆ ಕಡಲಕಿನಾರೆಯಲ್ಲಿ 704 ರೂಬಿಕ್ಸ್ ಕ್ಯೂಬ್‌ಗಳನ್ನು ತಮ್ಮ ಚಾಕಚಕ್ಯತೆಯಿಂದ ಜೋಡಿಸಿ ಅಪ್ಪು ಭಾವಚಿತ್ರ ರಚಿಸುವ ಮೂಲಕ ನೋಡುಗರು ಮಂತ್ರಮುಗ್ಧರನ್ನಾಗುವಂತೆ ಮಾಡಿದ್ದಾರೆ.

ಇತ್ತೀಚೆಗಷ್ಟೆ ರೂಬಿಕ್ಸ್ ಕ್ಯೂಬ್ ಭಾರತದಲ್ಲಿ ಜನಪ್ರಿಯತೆ ಪಡೆಯುತ್ತಿದ್ದು, ರೂಬಿಕ್ಸ್ ಕ್ಯೂಬ್‌ನಲ್ಲಿ ಮಹೇಶ್ ಸಾಧನೆ ಅಪಾರ. ಭಾರತದ ಕೆಲವೇ ಕೆಲವು ರೂಬಿಕ್ಸ್ ಕ್ಯೂಬ್ ಕಲಾವಿದರಲ್ಲಿ ಇವರೂ ಒಬ್ಬರು. ನೆಸ್ಟ್ ಕಂಪನಿಯವರು ಇತ್ತೀಚೆಗೆ ಆಯೋಜಿಸಿದ್ದ ಮಂಚ್ ಸ್ಟಾರ್ ರಾಷ್ಟ್ರಮಟ್ಟದ ಪ್ರತಿಭಾ ಪ್ರದರ್ಶನದಲ್ಲಿ ಪ್ರಥಮ ಬಹುಮಾನದೊಂದಿಗೆ 5 ಲಕ್ಷ ನಗದು ಪುರಸ್ಕಾರವನ್ನು ಪಡೆದಿರುವ ಹೆಗ್ಗಳಿಕೆ ಮಹೇಶ್ ಅವರದ್ದಾಗಿದೆ.
ಪ್ರಸ್ತುತ ಮಹೇಶ್ ಮಣಿಪಾಲದ ಮಾಹೆಯ ಉದ್ಯೋಗಿಯಾಗಿದ್ದಾರೆ. ಗಾಂಧಿ ಜಯಂತಿಯಂದು ಗಾಂಧೀಜಿಯ ಭಾವಚಿತ್ರ, ಮತ್ತೊಂದು ಸಂದರ್ಭದಲ್ಲಿ ಸಾಲುಮರದ ತಿಮ್ಮಕ್ಕನವರ ಭಾವಚಿತ್ರ ಹೀಗೆ ಹಲವು ಮಹನೀಯರ ಚಿತ್ರವನ್ನು ರೂಬಿಕ್ ಕ್ಯೂಬ್ ಮೂಲಕ ರಚಿಸಿ ಮಹೇಶ್ ಚಾಕಚಕ್ಯತೆ ಮೆರೆದಿದ್ದಾರೆ.
ಮಹೇಶ್‌ರವರ ಕಲಾಚತುರತೆಗೆ ಅಪ್ಪು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಲ್ಪೆ, ಸೈಂಟ್ ಮೇರಿಸ್ ದ್ವೀಪ ಅಪ್ಪುವಿನ ಕರಾವಳಿಯ ಇಷ್ಟದ ಪ್ರದೇಶಗಳಲ್ಲಿ ಒಂದಾಗಿದ್ದು, ಈ ವಿಚಾರ ಹಲವು ಬಾರಿ ವಿಡಿಯೋಗಳಲ್ಲಿ ಹೇಳಿಕೊಂಡಿದ್ದಾರೆ.
ಡಾ.ರಾಜ್ ಅಭಿನಯದ ಸೂಪರ್ ಹಿಟ್ ಚಿತ್ರ ಒಂದು ಮುತ್ತಿನ ಕಥೆ ಚಿತ್ರವೂ ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲೇ ಆಗಿದ್ದು, ಈ ಸಂದರ್ಭದಲ್ಲಿ ಬಾಲನಟನಾಗಿದ್ದ ಅಪ್ಪು, ಉಡುಪಿಯ ಪ್ರದೇಶದಲ್ಲಿ ತಿರುಗಾಡಿದ ನೆನಪು ಮಾಡಿಕೊಂಡಿದ್ದರು.

ಅಭಿಮಾನಿಗಳಿಂದ ಪುನೀತ್ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ
ಚನ್ನಪಟ್ಟಣ ತಾಲೂಕಿನ ನೇರಳೂರು ಗ್ರಾಮದ ಅಭಿಮಾನಿಗಳು ಹಾಗೂ ಗ್ರಾಮದ ಮಹಿಳೆಯರು ಪುನೀತ್ ರಾಜಕುಮಾರ್‌ಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕೇಶಮುಂಡನ ಮಾಡಿಸಿಕೊಂಡು ಹಾಲುತುಪ್ಪ ಬಿಟ್ಟಿದ್ದಾರೆ.
ಅಗಲಿದ ಚಿತ್ರನಟನಿಗೆ ಇಡೀ ಗ್ರಾಮಸ್ಥರಿಂದ ಅಂತಿಮ ನಮನ ಸಲ್ಲಿಸಿದ್ದು, ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು. ಪುನೀತ್ ನೆಚ್ಚಿನ ಬಿರಿಯಾನಿ, ಕೊಳಿ ಸಾರು ಎಡೆ ಇಟ್ಟು ಗ್ರಾಮದ ಮಹಿಳೆಯರು ಪೂಜೆ ಸಲ್ಲಿಸಿದರು.
ಗ್ರಾಮಸ್ಥರು ಒಂದು ಸಾವಿರ ಮಂದಿಗೆ ಬಿರಿಯಾನಿ ತಯಾರಿಸಿ ವಿತರಿಸಿದ್ದು, ಗ್ರಾಮದ ಪುಟಾಣಿಗಳಿಂದ ಹಿಡಿದು ವಯೋವೃದ್ಧರವರೆಗೆ ಅಪ್ಪುವಿಗೆ ನಮನ ಸಲ್ಲಿಸಿದರು. ಇನ್ನು ಪುನೀತ್ ರಾಜ್‌ಕುಮಾರ್ ಅಭಿಮಾನಿ ದೇವೇಗೌಡ ಕೇಶಮುಂಡನ ಮಾಡಿಸಿಕೊಂಡು ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಸಲ್ಲಿಕೆ ಮಾಡಿದರು.












Click it and Unblock the Notifications