ಮಂಗಳೂರು ಬೋಟ್ ದುರಂತ: ಮೃತರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ
ಮಂಗಳೂರು, ಡಿಸೆಂಬರ್ 2: ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ನಡೆದ ಬೋಟ್ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಗಳಿಗೆ ತಲಾ ಆರು ಲಕ್ಷ ರೂ. ಪರಿಹಾರವನ್ನು ಗುರುವಾರ ಸಂಜೆಯೊಳಗೆ ವಿತರಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬೋಟ್ ದುರಂತದಲ್ಲಿ ಮೃತಪಟ್ಟ ನಾಲ್ಕು ಜನರ ಮೃತದೇಹವನ್ನು ಇರಿಸಲಾಗಿದ್ದ ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ನಂತರ ಮಾತನಾಡಿದ ಸಚಿವ ಶ್ರೀನಿವಾಸ ಪೂಜಾರಿ, ಇದು ಅತ್ಯಂತ ನೋವಿನ ಸಂಗತಿ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆ ಎಂದರು.
ಮುಖ್ಯಮಂತ್ರಿಗಳು ತುರ್ತು ಕಾರ್ಯಾಚರಣೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚಿನೆ ನೀಡಿದ್ದಾರೆ. ಈ ಘಟನೆ ನಡೆಯಲು ಏನು ಕಾರಣ ಎಂದು ಮೀನುಗಾರಿಕೆ ಇಲಾಖೆ ನಿರ್ದೇಶಕರಿಂದ ವರದಿಯನ್ನು ತರಿಸಿಕೊಳ್ಳಲಾಗಿತ್ತಿದೆ ಎಂದು ತಿಳಿಸಿದರು.

ಕೋಸ್ಟ್ ಗಾರ್ಡ್ನವರು ಕಾರ್ಯಾಚರಣೆಯಲ್ಲಿ ನೇರವಾಗಿ ಪಾಲ್ಗೊಂಡಿಲ್ಲ ಎಂಬ ಅರೋಪದ ಬಗ್ಗೆ ಉತ್ತರಿಸಿದ ಸಚಿವ ಶ್ರೀನಿವಾಸ ಪೂಜಾರಿ, ಈ ಬಗ್ಗೆ ಅನಗತ್ಯ ಚರ್ಚೆ ಮಾಡಲು ಹೋಗಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಕೋಸ್ಟ್ ಗಾರ್ಡ್ ಸಿಬ್ಬಂದಿ ನೇರವಾಗಿ ಮೀನುಗಾರರ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಹಾಗೂ ಸರ್ಕಾರ ಮೃತ ಕುಟುಂಬಕ್ಕೆ ಸಾಂತ್ವನ ಹೇಳದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಸುತ್ತುವರಿದು ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.












Click it and Unblock the Notifications