ಬಂಟ್ವಾಳದಲ್ಲಿ ಮಹಿಳಾ ಎಸ್ ಐ ಜೊತೆ ಅಸಭ್ಯ ವರ್ತನೆ: ಐವರು ಯುವಕರ ಬಂಧನ
ಮಂಗಳೂರು, ಅಕ್ಟೋಬರ್.22: ಮಹಿಳಾ ಎಸ್ ಐ ಎದುರು ಯುವಶಕ್ತಿ ಪ್ರದರ್ಶನಕ್ಕೆ ಇಳಿದು ಗೇಲಿ ಮಾಡಿದ ಯುವಕರು ಬಂಧನಕ್ಕೆ ಒಳಗಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ವಾಹನ ತಪಾಸಣೆ ಮಾಡಲು ಬಂದ ಮಹಿಳಾ ಪೊಲೀಸ್ ಅಧಿಕಾರಿಯನ್ನು ನಿಂದಿಸಿ ಗೇಲಿ ಮಾಡಿದ ಐವರು ಯುವಕರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಟ್ರಾಫಿಕ್ ಠಾಣೆ ಮಹಿಳಾ ಎಸ್ಐ ಮಂಜುಳಾ ಕೆ.ಎಂ. ಅವರು ತಮ್ಮ ಸಿಬ್ಬಂದಿ ಜೊತೆ ಕರ್ತವ್ಯಕ್ಕೆ ತೆರಳಿದ್ದು, ಬಿ.ಸಿ. ರೋಡ್ ನಾರಾಯಣ ಗುರು ವೃತ್ತದ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಯುವಕರ ತಂಡವನ್ನು ತಡೆದು ತಪಾಸಣೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಕಾರಿಗೆ ಟಿಂಟೆಡ್ ಗ್ಲಾಸ್ ಮತ್ತು ಸೀಟ್ ಬೆಲ್ಟ್ ಹಾಕದಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರಿನಲ್ಲಿದ್ದ ಯುವಕರು ಮಂಜುಳಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅದಲ್ಲದೇ ಯುವಕರ ಶಕ್ತಿ ಏನು ಎಂಬುದನ್ನು ತೋರಿಸುವುದಾಗಿ ಬಹಿರಂಗವಾಗಿ ಸವಾಲು ಹಾಕಿ ಗೇಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆಗ ಸ್ಥಳಕ್ಕೆ ಹೆಚ್ಚಿನ ಸಿಬ್ಬಂದಿಗಳನ್ನು ಕರೆಸಿ ಐವರು ಯುವಕರನ್ನು ಬಂಧಿಸಲಾಗಿದೆ. ಬಂಧಿತರನ್ನು ಮೂಡಬಿದ್ರೆಯ ಜಿತೇಶ್ (31), ವಿಕೆಶ (27), ಆಸ್ಟಿನ್ (23) , ಆರ್ವಿನ್ (21) ಹಾಗೂ ಆಲ್ಡ್ರಿನ್ (18) ಎಂದು ಗುರುತಿಸಲಾಗಿದೆ.
"ಯುವಶಕ್ತಿ ಒಂದಾದರೆ ಪೊಲೀಸರನ್ನು ನಾಯಿಗಳ ಹಾಗೆ ಬೀದಿಯಲ್ಲಿ ಹೊಡೆಯುತ್ತೇವೆ . ಈ ಲೇಡಿಯ ಮರ್ಯಾದೆ ತೆಗೆದು ಸರ್ಕಲ್ ನಲ್ಲಿ ನಿಲ್ಲಿಸುತ್ತೇವೆ. ಮೀಡಿಯಾ ಪವರ್ ಏನೆಂದು ತೋರಿಸುತ್ತೇವೆ. ಈ ಲೇಡಿಗಳು ಮನೆಯಲ್ಲಿ ಅಡುಗೆ ಮಾಡೋದಕ್ಕೆ ಲಾಯಕ್ಕು ಅದನ್ನು ಬಿಟ್ಟು ಗಂಡುಬೀರಿಯಂತೆ ರಸ್ತೆಯಲ್ಲಿ ನಿಂತು ನಮ್ಮ ಖುಷಿಯನ್ನು ಹಾಳುಮಾಡುತ್ತಿದ್ದೀರಿ" ಎಂದು ಗೇಲಿ ಮಾಡಿ ಬೈದು ಬೇರೆ ವಾಹನಗಳ ತಪಾಸಣೆಗೂ ಅಡ್ಡಿಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ನಿಂದನೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿಯಲ್ಲಿ ಐವರನ್ನು ಪೊಲೀಸರು ಬಂಧಿಸಿ, ಕಾರನ್ನು ವಶಕ್ಕೆ ಪಡೆಯಲಾಗಿದೆ. ಬಂಟ್ವಾಳ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.











Click it and Unblock the Notifications