ಉಳ್ಳಾಲದಲ್ಲಿ ಸಮುದ್ರ ಪಾಲಾದ ತುಮಕೂರು ಯುವಕರ ಮೃತದೇಹ ಪತ್ತೆ
ಮಂಗಳೂರು, ಜೂನ್ 30: ಉಳ್ಳಾಲ ದರ್ಗಾಕ್ಕೆ ಬಂದು ಬಳಿಕ ಸಮುದ್ರದಲ್ಲಿ ಈಜಾಡುತ್ತಿದ್ದಾಗ ಮುಳುಗಡೆಯಾಗಿದ್ದ ಇಬ್ಬರು ಯುವಕರ ಮೃತದೇಹ ಸೋಮೇಶ್ವರ ಉಚ್ಚಿಲ ಕಡಲ ಕಿನಾರೆಯಲ್ಲಿ ಗುರುವಾರ ಮಧ್ಯರಾತ್ರಿ ಪತ್ತೆಯಾಗಿದೆ.
ಶಾರುಖ್ ಖಾನ್ ಎಂಬಾತನ ಶವ ಬೆಳಗ್ಗೆ ಪತ್ತೆ ಯಾಗಿದ್ದರೆ, ಬಂಡೆಕಲ್ಲಿನ ಅಡಿಯಲ್ಲಿ ಸಿಲುಕಿದ್ದ ಮತ್ತೊಬ್ಬ ಯುವಕ ಹಯಾಜ್ ನ ಮೃತದೇಹವನ್ನು ದೊಡ್ಡ ಹಿಟಾಚಿ ಯಂತ್ರ ಬಳಸಿ ತಡ ರಾತ್ರಿ ಹೊರ ತೆಗೆಯಲಾಯಿತು. ಶಾರುಖ್ ಖಾನ್ ನ ಮೃತ ದೇಹವನ್ನು ಮೇಲಕ್ಕೆತ್ತಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.

ಹಯಾಜ್ ನ ಮೃತದೇಹ ಮೇಲಕ್ಕೆತ್ತಲು ಎರಡು ಜೆಸಿಬಿ, ಒಂದು ಹಿಟಾಚಿ ಬಳಸಿ ಸಂಜೆವರೆಗೂ ಪ್ರಯತ್ನಿಸಲಾಯಿತು. ಆದರೆ ಹಯಾಜ್ ನ ಮೃತದೇಹ ಮೇಲಕ್ಕೆತ್ತಲು ಸಾಧ್ಯವಾಗಿರಲಿಲ್ಲ. ಮೃತದೇಹ ಸಮುದ್ರ ಕೊರೆತ ತಡೆಗೆ ಹಾಕಲಾಗಿದ್ದ ಬಂಡೆಗಳಡಿ ಸಿಲುಕಿದ್ದರಿಂದ ಅಲೆಗಳ ಹೊಡೆತದಿಂದಾಗಿ ಕಾರ್ಯಾಚರಣೆ ಸಫಲಗೊಂಡಿರಲಿಲ್ಲ.
ಜೀವ ರಕ್ಷಕರು ಮೃತದೇಹ ಹೊರ ತೆಗೆಯಲುನಡೆಸಿದ ಪ್ರಯತ್ನಗಳು ಪ್ರಯೋಜನವಾಗಲಿಲ್ಲ. ಗಾಳಿಯ ಅಡಚಣೆಯಿಂದಾಗಿ ಸಂಜೆ ವೇಳೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿ, ಬಳಿಕ ದೊಡ್ಡ ಹಿಟಾಚಿ ಯಂತ್ರ ತರಿಸಿ, ಬೆಳಕಿನ ವ್ಯವಸ್ಥೆ ಕಲ್ಪಿಸಲಾಯಿತು. ನೀರಿನಾಳಕ್ಕೆ ತೆರಳಿ ಬಂಡೆಗಳ ನಡುವಿನಿಂದ ಹರ ಸಾಹಸ ಮಾಡಿ ಮೃತದೇಹವನ್ನು ಮೇಲೆತ್ತಿದರು.

ತುಮುಕೂರು ಶಿರಾ ತಾಲೂಕಿನ ಮುಗೀರ್ ರಸ್ತೆಯ ನಿವಾಸಿಗಳಾದ ಜಲೀಲ್ ಪುತ್ರ ಶಾರುಖ್ ಖಾನ್ (19) ಸಿದಿಕ್ ಅವರ ಪುತ್ರ ಹಯಾಜ್ (20) ಬುಧವಾರ ಬೆಳಿಗ್ಗೆ ಅಲೆಗಳ ಜತೆಗೆ ಆಟವಾಡುತ್ತಿದ್ದಾಗ ಸಮುದ್ರದಲ್ಲಿ ಮುಳುಗಿದ್ದರು. 10 ಜನ ಯುವಕರ ತಂಡ ಉಳ್ಳಾಲ ದರ್ಗಾಕ್ಕೆ ಬುಧವಾರ ಬೆಳಗ್ಗೆ ಬಂದು ದರ್ಗಾದಲ್ಲಿ ಪ್ರಾಥನೆ ಸಲ್ಲಿಸಿ, ಸಮುದ್ರದತ್ತ ಬಂದು ಈಜಾಡುತ್ತಿದ್ದಾಗ ಈ ಘಟನೆ ನಡೆದಿದೆ.












Click it and Unblock the Notifications