ಬಿಜೆಪಿ ಸರ್ಕಾರದ ಅವಧಿಯಲ್ಲಿ14 ಲಕ್ಷ ಹಸುಗಳು ಕಣ್ಮರೆ: ಯು.ಟಿ. ಖಾದರ್ ಆರೋಪ
ಮಂಗಳೂರು, ಜನವರಿ, 04: ಗೋವುಗಳ ಬಗ್ಗೆ ಮಾತನಾಡುವ ಬಿಜೆಪಿ ಸರ್ಕಾರ, ಗೋ ಸೇವೆಯ ಹೆಸರಿನಲ್ಲಿ ಲೂಟಿ ಮಾಡುತ್ತಿದೆ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮಂಗಳೂರಿನಲ್ಲಿ ಕಿಡಿಕಾರಿದರು. ಹಾಗೆಯೇ 2018 - 2022ರವರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 14 ಲಕ್ಷ ಹಸುಗಳು ಕಣ್ಮರೆಯಾಗಿವೆ ಎಂದು ಆರೋಪ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಪಶು ವೈದ್ಯಾಲಯಕ್ಕೆಂದು ಖರೀದಿಸಿರುವ ಆ್ಯಂಬುಲೆನ್ಸ್ ವೈದ್ಯರು, ಚಾಲಕರ ನೇಮಕವಾಗಿಲ್ಲ. ಎಲ್ಲ ಕ್ಷೇತ್ರದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಶುವೈದ್ಯರು ನಿವೃತ್ತರಾಗಿದ್ದರೂ, ಹೊಸ ನೇಮಕಾತಿ ಆಗಿಲ್ಲ. ಉಳ್ಳಾಲ ಕ್ಷೇತ್ರದಲ್ಲಿ ಹೊಸದಾಗಿ ಮೂರು ಕಟ್ಟಡಗಳು ನಿರ್ಮಾಣಗೊಂಡರೂ ಒಬ್ಬ ಪಶುವೈದ್ಯ, ಸಿಬ್ಬಂದಿಯೂ ನೇಮಕವಾಗಿಲ್ಲ.
21 ಸಾವಿರ ಜಾನುವಾರುಗಳು ಮೃತಪಟ್ಟಿವೆ
ಸರ್ಕಾರ ಚರ್ಮಗಂಟು ರೋಗಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆಯನ್ನು ಭರಿಸದ ಕಾರಣ ರಾಜ್ಯದಲ್ಲಿ 21 ಸಾವಿರ ಜಾನುವಾರುಗಳು ಮೃತಪಟ್ಟಿವೆ. ವಿಧಾನಸಭೆಯಲ್ಲಿ ಹಸುಗಳ ಜನಗಣತಿ ಬಗ್ಗೆ ಮಾತನಾಡಿದಾಗ ಕಳೆದ ಮೂರು ವರ್ಷಗಳಲ್ಲಿ 2018 - 2022ರವರೆಗೆ 14 ಲಕ್ಷ ಹಸುಗಳು ಕಣ್ಮರೆಯಾಗಿವೆ. ಸಿದ್ದರಾಮಯ್ಯನವರು ಈ ಬಗ್ಗೆ ನಿಮ್ಮ ಸರ್ಕಾರ ಬಂದು ಹಸುಗಳು ಎಲ್ಲಿ ಹೋಗಿದೆ ಎಂದರೆ ಬಿಜೆಪಿಯವರು ಉತ್ತರ ನೀಡಲಿಲ್ಲ. ಸರ್ಕಾರ ಇದ್ದಾಗ 8 ಲಕ್ಷ ಲೀಟರ್ ಉತ್ಪಾದನೆ ಆಗುತ್ತಿದ್ದ ಹಾಲು 7 ಲಕ್ಷ ಲೀಟರ್‌ಗೆ ಇಳಿದಿದೆ ಎಂದು ಹೇಳಿದ್ದಾರೆ.

ರಾಣಿ ಅಬ್ಬಕ್ಕನಿಗೆ ಬಿಜೆಪಿಯಿಂದ ಅವಮಾನ
ಇನ್ನು ಅಬ್ಬಕ್ಕ ಉತ್ಸವಕ್ಕೆ ರಾಜ್ಯ ಸರ್ಕಾರ ಕೇವಲ 10 ಲಕ್ಷ ರೂಪಾಯಿ ಅನುದಾನ ನೀಡಿದ್ದು, ಈ ಮೂಲಕ ರಾಣಿ ಅಬ್ಬಕ್ಕನಿಗೆ ಅವಮಾನ ಮಾಡಿದೆ ಅಂತಾ ಯುಟಿ ಖಾದರ್ ಆರೋಪಿಸಿದರು. ರಾಜ್ಯ ಸರ್ಕಾರ ಆರ್ಥಿಕವಾಗಿ ದಾರಿದ್ರ್ಯತನ ಹೊಂದಿದೆ. ಅಬ್ಬಕ್ಕ ಉತ್ಸವಕ್ಕೆ ಸಿದ್ಧರಾಮಯ್ಯ ಕಾಲದಲ್ಲಿ 50 ಲಕ್ಷ ರೂಪಾಯಿ ಬಿಡುಗಡೆಯಾಗಿತ್ತು. ಆದರೆ ಈ ಬಾರಿ ಬಿಜೆಪಿ ಸರ್ಕಾರ ಕೇವಲ 10 ಲಕ್ಷ ರೂಪಾಯಿ ಕಳುಹಿಸಿದ್ದಾರೆ. ಇದು ರಾಣಿ ಅಬ್ಬಕ್ಕನಿಗೆ ಮಾಡಿದ ಅವಮಾನವಾಗಿದೆ ಅಂತಾ ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಸಮರ್ಪಕ ಆಡಳಿತ ನೀಡುವಲ್ಲಿ ಬಿಜೆಪಿ ವಿಫಲ
ರಾಜ್ಯ ಸರ್ಕಾರ ಸಮರ್ಪಕ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಬಡ ಜನರಿಗೆ ಬಿಪಿಎಲ್ ಕಾರ್ಡ್ ಮಾಡುವ ಪರಿಸ್ಥಿತಿ ಇಲ್ಲ. ಎಂಟುನೂರು 108 ಸಂಖ್ಯೆಯ ಆ್ಯಂಬುಲೆನ್ಸ್‌ಗಳು ರಾಜ್ಯದಲ್ಲಿ ಇದ್ದರೂ ಕೂಡ ಈಗ ಎಲ್ಲವೂ ಮೂಲೆ ಗುಂಪಾಗಿವೆ. ಕೋವಿಡ್ ಮೂರನೇ ಅಲೆಯ ಸಂದರ್ಭದಲ್ಲಿ ಒಂದು ಆ್ಯಂಬುಲೆನ್ಸ್ ಅನ್ನು ಹೆಚ್ಚುವರಿಯಾಗಿ ಪಡೆದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಆಕ್ಸಿಜನ್ ಘಟಕಗಳು ತುಕ್ಕು ಹಿಡಿಯುತ್ತಿವೆ. ಐಟಿಐ ವಿದ್ಯಾರ್ಥಿಗಳು ಕೆಲಸ ಇಲ್ಲದೇ ಪರದಾಡುತ್ತಿದ್ದಾರೆ ಅಂತಾ ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಅವ್ಯವಸ್ಥೆ ಖಂಡಿಸಿ, ಉಳ್ಳಾಲದಲ್ಲಿ ಕಾಂಗ್ರೆಸ್ ಬೃಹತ್ ಜನಜಾಗೃತಿ ಸಭೆ ಮಾಡಲಿದೆ. ಗುರುವಾರ ಸಂಜೆ ಐದು ಗಂಟೆಗೆ ಹರೇಕಳದಲ್ಲಿ ನಡೆಯಲಿರುವ ಕಾಂಗ್ರೆಸ್ ಜನಜಾಗೃತಿ ಸಭೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ ಅಂತಾ ಯುಟಿ ಖಾದರ್ ಹೇಳಿದ್ದಾರು.












Click it and Unblock the Notifications