ಮೈಸೂರಿಗೆ ಹೋಗೋದಾಗಿ ಹೇಳಿ ಐಸಿಸ್ ಸೇರಿದ ಕೇರಳದ 2 ಕುಟುಂಬಗಳು!
ಕೇರಳ, ಡಿಸೆಂಬರ್ 14: ಕೇರಳದಲ್ಲಿ ಮತ್ತೆ ಉಗ್ರ ಸಂಘಟನೆ ಐಸಿಸ್ ಸದ್ದು ಮಾಡಿದೆ. ಕೇರಳದ 2 ಕುಟುಂಬಗಳು ಉಗ್ರರ ನೆಲವಾದ ಸಿರಿಯಾಕ್ಕೆ ತೆರಳಿರುವ ಶಂಕೆ ವ್ಯಕ್ಯವಾಗಿದೆ. ಕೇರಳದ ಕಣ್ಣೂರಿನ 2 ಕುಟುಂಬದ 10 ಸದಸ್ಯರ ತಂಡ ನಾಪತ್ತೆಯಾಗಿದ್ದು, ದುಬೈ ಮೂಲಕ ಸಿರಿಯಾ ಅಥವಾ ಅಫ್ಘಾನಿಸ್ತಾನ್ ಗೆ ತೆರಳಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಕಣ್ಣೂರು ಪೂತಪ್ಪಾರ ನಿವಾಸಿಗಳಾದ ಸಜ್ಜದ್, ಹಾಗು ಅನ್ವರ್ ಸೇರಿದಂತೆ ಇನ್ನೋರ್ವ ತಮ್ಮ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ. ಸಜ್ಜದ್ ತನ್ನ ಪತ್ನಿ ಶಾಹಿನಾ , ಇವರ ಇಬ್ಬರು ಮಕ್ಕಳು. ಅನ್ವರ್ ಪತ್ನಿ ಅಫ್ಸಿಲಾ ,
ಮೂವರು ಮಕ್ಕಳು ಮತ್ತು ಕುರುವಾ ನಿವಾಸಿ ಟಿ ಪಿ ನಿಸಾಂ ನಾಪತ್ತೆಯಾಗಿದ್ದಾರೆ. ನವೆಂಬರ್ 19 ರಂದು ಇವರು ಮೈಸೂರಿಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದರು ಎಂದು ಹೇಳಲಾಗಿದೆ.

ಇವರು ವಾಪಾಸ್ ಆಗದ ಹಿನ್ನೆಲೆಯಲ್ಲಿ ಇವರ ಸಂಬಂಧಿಗಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಇವರು ದುಬೈ ತಲುಪಿ ಅಲ್ಲಿಂದ ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ.
ಸಜ್ಜದ್ ಹಾಗು ಅನ್ವರ್ ಪಿ ಎಫ್ ಐ ಕಾರ್ಯಕರ್ತರಾಗಿದ್ದು, ಕೆಲವು ಪ್ರತಿಭಟನೆ ಹಾಗೂ ಧಾರ್ಮಿಕ ಹೋರಾಟಗಳಲ್ಲಿಯೂ ಪಾಲ್ಗೊಂಡಿದ್ದರು ಎನ್ನಲಾಗಿದೆ. ಈಗಾಗಲೇ ಉಗ್ರ ಸಂಘಟನೆ ಸೇರಿರುವ ಕೆಲವರಿಂದ ಇವರು ಪ್ರಭಾವಿತರಾಗಿ ಅದೇ ಸಂಘಟನೆ ಸೇರಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ನಾಪತ್ತೆಯಾಗಿರುವ ಅನ್ವರ್ ಪತ್ನಿ ಅಫ್ಸಿಲಾ ಈ ಹಿಂದೆ ಐಸಿಸ್ ಸೇರಿ ಸಾವನ್ನಪ್ಪಿದ ಶಮೀರ್ ಎಂಬಾತನ ಪತ್ನಿ ಫೌಸಿಯಾಳ ಸಹೋದರಿಯಾಗಿದ್ದಾಳೆ. ಶಮೀರ್ನ ಇಬ್ಬರು ಮಕ್ಕಳಾದ ಸಲ್ಮಾನ್ ಮತ್ತು ಸಫ್ವಾನ್ ಐಸಿಸ್ ಯುದ್ಧಭೂಮಿಯಲ್ಲಿ ಸಾವನ್ನಪ್ಪಿರುವ ಬಗ್ಗೆ ಈ ಹಿಂದೆ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಲಭಿಸಿದ ಬಳಿಕ ಅನ್ವರ್ ಹಾಗು ಪತ್ನಿ ಅಫ್ಸಿಲಾ ಮತ್ತು ಕುಟುಂಬ ಐಸಿಸ್ ಸೇರಲು ನಿರ್ಧರಿಸಿದ್ದರು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.












Click it and Unblock the Notifications