ದೂರು ನೀಡಲು ಹೋದ ಮಹಿಳೆಯನ್ನು ಮಂಚಕ್ಕೆ ಕರೆದ ಎಎಸ್‌ಐ
ಮಂಡ್ಯ, ಜುಲೈ 26 : ದೂರು ನೀಡಲು ತೆರಳಿದ ಮಹಿಳೆಯೊಂದಿಗೆ ಠಾಣೆಯಲ್ಲಿದ್ದ ಎಎಸ್‍ಐಯೊಬ್ಬರು ಅನುಚಿತವಾಗಿ ವರ್ತಿಸಿರುವ ಘಟನೆ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಎಎಸ್‌ಐ ವಿರುದ್ಧ ತನಿಖೆ ನಡೆಸಲಾಗುತ್ತಿದೆ.
ಎಎಸ್‍ಐ ಶಾಂತಕುಮಾರ್ ಎಂಬುವವರು ನ್ಯಾಯ ಕೇಳಲು ಹೋದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಮಹಿಳೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಎಸ್ಪಿ ರಾಧಿಕಾ ಅವರು ನೊಂದ ಮಹಿಳೆಯ ದೂರನ್ನು ಪಡೆದಿದ್ದು, ಈಗಾಗಲೇ ಡಿವೈಎಸ್ಪಿ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದಾರೆ. ತನಿಖಾ ವರದಿ ಬಂದ ನಂತರ ಎಎಸ್‍ಐ ಶಾಂತಕುಮಾರ್ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಠಾಣೆಗೆ ಬಂದಿದ್ದರು : ತುಪ್ಪದಮಡು ಗ್ರಾಮದ ಲೀಲಾವತಿ ಎಂಬಾಕೆ ಪಟ್ಟಣದ ಹೋಟೆಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಹಪಾಠಿ ಮಹಿಳೆ ಕಷ್ಷಕ್ಕೆಂದು ಕೇಳಿದ್ದರಿಂದ ಚಿನ್ನದ ಸರ ನೀಡಿದ್ದರು. ಚಿನ್ನದ ಸರವನ್ನು ಗಿರವಿ ಇಟ್ಟುಕೊಂಡಿದ್ದ ಆ ಮಹಿಳೆ, ವಾಪಸ್ ಕೊಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಕಳೆದ ಜು.14ರಂದು ಲೀಲಾವತಿ ನಾಗಮಂಗಲ ಪಟ್ಟಣ ಠಾಣೆಗೆ ದೂರು ನೀಡಲು ತೆರಳಿದ್ದರು.
ಆಗ ಠಾಣೆಯ ಎಎಸ್‍ಐ ಶಾಂತಕುಮಾರ್ ಕೇಸು ದಾಖಲಿಸಿಕೊಳ್ಳಬೇಕಾದಲ್ಲಿ ಒಂದು ದಿನ ತಮ್ಮ ಮನೆಗೆ ಬರುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿ ಠಾಣೆಯಿಂದ ಮನೆಗೆ ಹೋಗಿದ್ದಾರೆ. ಆದರೆ, ಆಕೆಯನ್ನು ಹಿಂಬಾಲಿಸಿಕೊಂಡು ಮನೆಗೇ ಹೋದ ಶಾಂತಕುಮಾರ್, ತನ್ನ ಜೊತೆ ಬರುವಂತೆ ಪೀಡಿಸಿದ್ದಾನೆ ಎಂದು ಆರೋಪಿಸಲಾಗಿದೆ.












Click it and Unblock the Notifications