ಮಂಡ್ಯ ಉಪ ಚುನಾವಣೆ : ಶಿವರಾಮೇಗೌಡರಿಗೆ ಟಿಕೆಟ್ ಸಿಗಲು 5 ಕಾರಣಗಳು
Recommended Video

ಮಂಡ್ಯ, ಅಕ್ಟೋಬರ್ 15 : ಮಂಡ್ಯ ಲೋಕಸಭೆ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಘೋಷಣೆಯಾಗಿದೆ. ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರನ್ನು ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡಿದ್ದು, ಸೋಮವಾರ ಅವರು ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ಮಂಡ್ಯ ಕ್ಷೇತ್ರದ ಟಿಕೆಟ್‌ಗೆ ಐಆರ್‌ಎಸ್ ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಭಾನುವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಎಲ್.ಆರ್.ಶಿವರಾಮೇಗೌಡ ಅಭ್ಯರ್ಥಿ ಎಂದು ಘೋಷಣೆ ಮಾಡಿ ಬಿ.ಫಾರಂ ನೀಡಿದ್ದಾರೆ.
ರಾಜಕೀಯ ಪ್ರವೇಶಕ್ಕಾಗಿಯೇ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಲಕ್ಷ್ಮೀ ಅಶ್ವಿನ್ ಗೌಡ ಅವರು ಟಿಕೆಟ್ ಕೈ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದಾರೆ. ಜೆಡಿಎಸ್ ಗೆಲ್ಲಲೇಬೇಕಾದ ಕ್ಷೇತ್ರ ಮಂಡ್ಯ. ಸಾಕಷ್ಟು ಪ್ರಭಾವ ಹೊಂದಿರುವ ಎಲ್.ಆರ್.ಶಿವರಾಮೇಗೌಡ ಅವರನ್ನು ಪಕ್ಷ ಕಣಕ್ಕಿಳಿಸಿದ್ದು, ಕಾಂಗ್ರೆಸ್ ಸಹ ಅವರಿಗೆ ಬೆಂಬಲ ನೀಡಿದೆ.
ಡಾ.ಸಿದ್ದರಾಮಯ್ಯ ಅವರು ಬಿಜೆಪಿ ಅಭ್ಯರ್ಥಿ. ಎಲ್.ಆರ್.ಶಿವರಾಮೇಗೌಡ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದ್ದು ಏಕೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ನವೆಂಬರ್ 3ರಂದು ಮತದಾನ ನಡೆಯಲಿದ್ದು, ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ.....

ಶಿವರಾಮೇಗೌಡ ಜೆಡಿಎಸ್ ಅಭ್ಯರ್ಥಿ : ಕಾರಣ - 1
2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಬಿಟ್ಟು ಎಲ್.ಆರ್.ಶಿವರಾಮೇಗೌಡ ಅವರು ಜೆಡಿಎಸ್ ಸೇರಿದರು. ಆಗ ಅವರ ನಾಗಮಂಗಲ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಅವರಿಗೆ ಟಿಕೆಟ್ ನೀಡಲಾಗಿತ್ತು. ಎಲ್.ಆರ್.ಶಿವರಾಮೇಗೌಡ ಅವರಿಗೆ ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆ ನೀಡಲಾಗಿತ್ತು. ಅದು ಸಾಧ್ಯವಾಗದ ಕಾರಣ ಲೋಕಸಭೆ ಉಪ ಚುನಾವಣೆ ಟಿಕೆಟ್ ನೀಡಲಾಗಿದೆ.

ಶಿವರಾಮೇಗೌಡ ಜೆಡಿಎಸ್ ಅಭ್ಯರ್ಥಿ : ಕಾರಣ - 2
ಎಚ್.ಡಿ.ದೇವೇಗೌಡರ ವಿರುದ್ಧವೇ ತೊಡೆ ತಟ್ಟಿ ಪಕ್ಷದಿಂದ ಅಮಾನತುಗೊಂಡ ಎನ್.ಚೆಲುವರಾಯಸ್ವಾಮಿ ಅವರನ್ನು 2018ರ ಚುನಾವಣೆಯಲ್ಲಿ ಸೋಲಿಸಲು ಎಲ್.ಆರ್.ಶಿವರಾಮೇಗೌಡ ಅವರು ಸಾಕ್ಷಷ್ಟು ಶ್ರಮ ಹಾಕಿದ್ದರು. ದೇವೇಗೌಡರ ಕುಟುಂಬದ ವಿರುದ್ಧವೇ ಅಸಮಾಧಾನಗೊಂಡು ಕಾಂಗ್ರೆಸ್‌ನಿಂದ ನಾಗಮಂಗಲದಲ್ಲಿ ಕಣಕ್ಕಿಳಿದಿದ್ದ ಚೆಲುವರಾಯಸ್ವಾಮಿ ಅವರು 64729 ಮತಗಳನ್ನು ಪಡೆದು ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು.

ಶಿವರಾಮೇಗೌಡ ಜೆಡಿಎಸ್ ಅಭ್ಯರ್ಥಿ : ಕಾರಣ - 3
ರಾಜ್ಯದ ಇತರ ಜಿಲ್ಲೆಯ ರಾಜಕಾರಣವೇ ಬೇರೆ, ಮಂಡ್ಯ ಜಿಲ್ಲೆಯ ರಾಜಕಾರಣವೇ ಬೇರೆ. ಲಕ್ಷ್ಮೀ ಅಶ್ವಿನ್ ಗೌಡ ಅವರಿಗೆ ಹೋಲಿಕೆ ಮಾಡಿದರೆ ಎಲ್.ಆರ್.ಶಿವರಾಮೇಗೌಡ ಅವರು ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಮಂಡ್ಯ ಜಿಲ್ಲೆಯ ರಾಜಕಾರಣವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಆದ್ದರಿಂದ, ಉಪ ಚುನಾವಣೆ ಪಕ್ಷದ ಪಾಲಿಗೆ ಪ್ರತಿಷ್ಠೆ. ತಮ್ಮ ಸ್ಥಾನ ಉಳಿಸಿಕೊಳ್ಳಲು ಪಕ್ಷ ಅನುಭವಿ ಎಲ್.ಆರ್.ಶಿವರಾಮೇಗೌಡ ಅವರಿಗೆ ಟಿಕೆಟ್ ನೀಡಿದೆ.

ಶಿವರಾಮೇಗೌಡ ಜೆಡಿಎಸ್ ಅಭ್ಯರ್ಥಿ : ಕಾರಣ - 4
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸಾಕಷ್ಟು ಪ್ರಭಾವ ಹೊಂದಿಲ್ಲ ಎಂಬುದು ಸತ್ಯ. ಆದರೂ 2009ರ ಚುನಾವಣೆಯಲ್ಲಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಎಲ್.ಆರ್.ಶಿವರಾಮೇಗೌಡ ಅವರು 1,44,875 ಮತಗಳನ್ನು ಪಡೆದು 3ನೇ ಸ್ಥಾನಗಳಿಸಿದ್ದರು. ಎಲ್.ಆರ್.ಶಿವರಾಮೇಗೌಡ ಅವರು ಆ ಮಟ್ಟಿನ ಪ್ರಭಾವವನ್ನು ಜಿಲ್ಲೆಯಲ್ಲಿ ಹೊಂದಿದ್ದಾರೆ.
ಆ ಚುನಾವಣೆಯಲ್ಲಿ ಜೆಡಿಎಸ್‌ನ ಎನ್.ಚೆಲುವರಾಯಸ್ವಾಮಿ ಅವರು 384443 ಮತಗಳನ್ನು ಪಡೆದು ಸಂಸದರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನಿಂದ ಎಂ.ಎಚ್.ಅಂಬರೀಶ್ ಸ್ಪರ್ಧೆ ಮಾಡಿ, 360943 ಮತ ಪಡೆದಿದ್ದರು.

ಶಿವರಾಮೇಗೌಡ ಜೆಡಿಎಸ್ ಅಭ್ಯರ್ಥಿ : ಕಾರಣ - 5
ಎಲ್.ಆರ್.ಶಿವರಾಮೇಗೌಡ ಅವರು ಮೊದಲು ನಾಗಮಂಗಲ ಕ್ಷೇತ್ರ ಬಿಟ್ಟುಕೊಟ್ಟರು. ಬಳಿಕ ಬೆಂಗಳೂರು ಪದವೀಧರ ಕ್ಷೇತ್ರದಿಂದ ಪರಿಷತ್ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಅಂತಿಮವಾಗಿ ಅಚ್ಚೇಗೌಡ ಶಿವಣ್ಣ ಅವರಿಗೆ ಟಿಕೆಟ್ ನೀಡಿದಾಗ ಅವರು ಆ ಕ್ಷೇತ್ರವನ್ನು ಬಿಟ್ಟುಕೊಟ್ಟು, ಪಕ್ಷ ಸಂಘಟನೆಯಲ್ಲಿ ತೊಡಗಿದರು. ಎರಡು ಬಾರಿ ಕ್ಷೇತ್ರ ಬಿಟ್ಟುಕೊಟ್ಟ ಅವರಿಗೆ ಈಗ ಲೋಕಸಭೆ ಉಪ ಚುನಾವಣೆ ಟಿಕೆಟ್ ಸಿಕ್ಕಿದೆ.












Click it and Unblock the Notifications