ಭರದಿಂದ ಸಾಗುತ್ತಿದೆ ಕಲ್ಲಹಳ್ಳಿ ಭೂವರಹನಾಥ ದೇಗುಲ ಕಾಮಗಾರಿ: ದೇವಾಲಯ ಪರಿಪೂರ್ಣ ಯಾವಾಗ..?
ಮಂಡ್ಯ, ಡಿಸೆಂಬರ್ 15: ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಕಲ್ಲಹಳ್ಳಿಯ ಹೇಮಾವತಿ ನದಿ ದಡದಲ್ಲಿರುವ ಭೂದೇವಿ ಸಮೇತ ಶ್ರೀ ಲಕ್ಷ್ಮಿ ವರಹನಾಥ ಸ್ವಾಮಿ ದೇವಾಲಯದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಸದ್ಯ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ದೇವಾಲಯದ ಬೃಹತ್ ಕಂಬಗಳ ನಿರ್ಮಾಣ ಕಾರ್ಯವನ್ನು ಮಾಡಲಾಗುತ್ತಿದೆ.
ಕಳೆದೊಂದು ದಶಕದಿಂದ ದೇವಾಲಯದ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದು, ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಈಗ ಚೈನಾ ತಂತ್ರಜ್ಞಾನದ ಸಿಎನ್‌ಸಿ ಯಂತ್ರೋಪಕರಣಗಳನ್ನು ಬಳಸಿ ನಿರ್ಮಾಣ ಕಾರ್ಯಕ್ಕೆ ಚುರುಕು ನೀಡಲಾಗುತ್ತಿದೆ.

ಈ ಕುರಿತಂತೆ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸರಾಘವನ್ ಮಾಹಿತಿ ನೀಡಿದ್ದು, ಉತ್ತರ ಕನ್ನಡದ ಜಿಲ್ಲೆಯ ಮುರುಡೇಶ್ವರ ದೇವಾಲಯ, ಉತ್ತರ ಭಾರತದ ಅಯೋಧ್ಯೆಯ ಶ್ರೀರಾಮ ಮಂದಿರದ ನಿರ್ಮಾಣಕ್ಕೆ ಬಳಸಲಾಗುತ್ತಿರುವ ಅತ್ಯಾಧುನಿಕ ಸಿಎನ್ ಸಿ ತಂತ್ರಜ್ಞಾನವನ್ನು ಇಲ್ಲಿ ಬಳಕೆ ಮಾಡಿಕೊಂಡು ದೇವಾಲಯದ ನಿರ್ಮಾಣ ಕಾರ್ಯಕ್ರಮವನ್ನು ಮುಂದುವರೆಸಲಾಗುತ್ತಿದೆ.
ಹೊಯ್ಸಳ ವಾಸ್ತುಶಿಲ್ಪದ ಮಾದರಿಯಲ್ಲಿ ನಿರ್ಮಾಣ
ಭೂವೈಕುಂಠವೆಂದೇ ಪ್ರಖ್ಯಾತವಾಗಿರುವ ಭೂದೇವಿ ಸಮೇತ ಶ್ರೀಲಕ್ಷ್ಮಿ ವರಹನಾಥ ಸ್ವಾಮಿ ದೇವಾಲಯವನ್ನು ಸುಂದರವಾಗಿ ನಿರ್ಮಿಸುವಲ್ಲಿ ಟ್ರಸ್ಟ್ ಶ್ರಮಿಸುತ್ತಿದ್ದು, ಭಕ್ತರ ಸಹಕಾರದೊಂದಿಗೆ ಕಾರ್ಯ ಭರದಿಂದ ಸಾಗುತ್ತಿದೆ. ಈ ನಡುವೆ ಪ್ರತಿದಿನವೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದು ಹಿಂತಿರುಗುತ್ತಿದ್ದಾರೆ.
ಈಗ ನಿರ್ಮಾಣವಾಗುತ್ತಿರುವ ದೇವಾಲಯವು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಮೊಮ್ಮಗ ಮೂರನೇ ವೀರಬಲ್ಲಾಳನು ಭೂವರಹನಾಥ ದೇವಾಲಯದ ಅಭಿವೃದ್ಧಿಗೆ ಅನುಕೂಲ ಮಾಡಿ ಕೊಟ್ಟಿದ್ದನು ಎನ್ನಲಾಗಿದ್ದು ಅದರಂತೆ ಇಡೀ ದೇವಾಲಯವನ್ನು ಹೊಯ್ಸಳ ವಾಸ್ತುಶಿಲ್ಪದ ಮಾದರಿಯಲ್ಲಿ ಗ್ರಾನೈಟ್ ನಿಂದ ನಿರ್ಮಿಸಲಾಗುತ್ತಿದೆ.

ಮೂರು ಪ್ರಕಾರಗಳಲ್ಲಿ ದೇಗುಲ ನಿರ್ಮಾಣ
ಹೊಯ್ಸಳ ಚಕ್ರವರ್ತಿಗೆ ಭಕ್ತಿನಮನ ಸಲ್ಲಿಸುವ ದೃಷ್ಠಿಯಿಂದ ಹೊಯ್ಸಳ ಶಿಲ್ಪದ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಭೂವರಹನಾಥ ದೇವಾಲಯದ ನಿರ್ಮಾಣ ಕಾಮಗಾರಿಯ ವೇಗವನ್ನು ಹೆಚ್ಚಿಸಲು ಅತ್ಯಧುನಿಕ ಸಿ.ಎನ್.ಸಿ ತಂತ್ರಜ್ಞಾನವನ್ನು ಬಳಸಿಕೊಂಡು, ಸಂಪೂರ್ಣವಾಗಿ ದೇವಾಲಯದ ಬೃಹತ್ ಕಂಬಗಳು ಸೇರಿದಂತೆ ವಿವಿಧ ಕೆತ್ತನೆಯ ಕೆಲಸಗಳನ್ನು ಯಂತ್ರೋಪಕರಣಗಳ ಸಹಾಯದಿಂದಲೇ ಮಾಡಲಾಗುತ್ತಿದೆ.
ಮಾನವ ಶಕ್ತಿಯಲ್ಲಿ ಒಂದು ಕಂಬವು ನಿರ್ಮಾಣವಾಗ ಬೇಕಾದರೆ ಸುಮಾರು 15 ದಿನಗಳು ಬೇಕಾಗುತ್ತದೆ. ಆದರೆ ಯಂತ್ರಗಳನ್ನು ಬಳಸಿ ತಯಾರು ಮಾಡುತ್ತಿರುವುದರಿಂದ ಕೇವಲ ಎರಡು ದಿನಗಳಲ್ಲಿ ಕಂಬ ಸಂಪೂರ್ಣ ಕೆತ್ತನೆಯೊಂದಿಗೆ ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ. ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲಿ ಮೂರು ಪ್ರಕಾರಗಳಲ್ಲಿ ಭೂವರಹನಾಥಸ್ವಾಮಿ ದೇವಾಲಯ ನಿರ್ಮಾಣಗೊಳ್ಳುತ್ತಿದೆ.
ಮೂರು ವರ್ಷಗಳಲ್ಲಿ ದೇಗುಲ ಪೂರ್ಣ
ಮೊದಲ ಪ್ರಕಾರದಲ್ಲಿ ದೇವಾಲಯವು 108 ಕಾಲುಗಳ ಮುಖಮಂಟಪ, ಎರಡನೇ ಪ್ರಕಾರದಲ್ಲಿ ನಾಲ್ಕು ರಾಜ ಗೋಪುರಗಳು ಹಾಗೂ ಮೂರನೇ ಪ್ರಕಾರದಲ್ಲಿ ಬೃಹತ್ 186ಅಡಿ ಎತ್ತರದ ರಾಜಗೋಪುರ ನಿರ್ಮಾಣವಾಗುತ್ತಿದೆ. ದೇಗುಲವು ಸುಮಾರು 200 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಈ ದೇವಾಲಯದ ಕಾಮಗಾರಿ ಪೂರ್ಣಗೊಳ್ಳಲು ಇನ್ನು ಮೂರು ವರ್ಷಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಈ ನಡುವೆ ಆದಷ್ಟು ಬೇಗ ದೇಗುಲ ನಿರ್ಮಾಣವಾಗ ಬೇಕು ಎಂಬ ಮೈಸೂರಿನ ಪರಕಾಲ ಮಠದ ಶ್ರೀಗಳು ಸಂಕಲ್ಪ ಮಾಡಿದ್ದು ಅವರ ಆಶಯದಂತೆ ದೇವಾಲಯದ ನಿರ್ಮಾಣಕ್ಕೆ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಆದಷ್ಟು ಶೀಘ್ರವಾಗಿ ದೇವಾಲಯ ಪೂರ್ಣಗೊಳಿಸುವ ಕಾರ್ಯದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ನಿರತವಾಗಿದೆ.
ದೇಗುಲದಲ್ಲಿ ಪೂಜಾ ಸಮಯ ಯಾವಾಗ?
ಭೂ ವ್ಯಾಜ್ಯಗಳ ಪರಿಹಾರಕನಾಗಿರುವ ವರಹನಾಥ ಸ್ವಾಮಿಯು, ಸೂರಿಲ್ಲದವರು ಬಂದು ಬೇಡಿಕೊಂಡರೆ ಸ್ವಂತ ಮನೆಯನ್ನು ಆಶೀರ್ವದಿಸಿ ಕೊಡುವ ಜೊತೆಗೆ, ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತಿರುವುದರಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ, ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದೇವಾಲಯದ ಬಾಗಿಲು ತೆರೆಯಲಿದ್ದು ಪೂಜಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಭೂವರಹನಾಥ ಕ್ಷೇತ್ರದಲ್ಲಿ ಅನ್ನಪ್ರಸಾದವು ಉಚಿತವಾಗಿ ನಡೆಯುತ್ತಿದೆ.












Click it and Unblock the Notifications