ಅಯೋಧ್ಯೆ ಶ್ರೀರಾಮನಿಗೂ ಮೇಲುಕೋಟೆಗೂಇರುವ ನಂಟೇನು ಗೊತ್ತಾ?
ಮಂಡ್ಯ, ಜನವರಿ 18: ಶ್ರೀರಾಮಚಂದ್ರ ಭರತ ಖಂಡದಾದ್ಯಂತ ಸಂಚರಿಸಿದ್ದ ಎಂಬುದಕ್ಕೆ ಹತ್ತು ಹಲವು ಕುರುಹುಗಳು ನಮ್ಮ ನಡುವೆಯಿದ್ದು, ಆತನ ಪಾದಸ್ಪರ್ಶದ ಸ್ಥಳಗಳು ಇಂದಿಗೂ ಪರಮ ಪುಣ್ಯ ಸ್ಥಳವಾಗಿ ಪೂಜಿಸಲ್ಪಡುತ್ತಿದೆ. ಇವತ್ತು ನಮ್ಮ ರಾಜ್ಯದಲ್ಲಿ ರಾಮನೊಂದಿಗೆ ನೇರ ಸಂಬಂಧ ಹೊಂದಿದ ಹತ್ತು ಹಲವು ಸ್ಥಳಗಳಿದ್ದು, ಪ್ರತಿ ಸ್ಥಳವೂ ತೇತ್ರಾಯುಗದ ರಾಮಾಯಣ ಮತ್ತು ರಾಮನೊಂದಿಗೆ ಬೆರೆತುಕೊಂಡಿರುವುದು ಕಾಣಿಸುತ್ತಿದೆ.
ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಸುಮಾರು ಐದು ಶತಮಾನದ ಕನಸಾದ ರಾಮಮಂದಿರ ನಿರ್ಮಾಣವಾಗುತ್ತಿರುವುದು ಪ್ರತಿಯೊಬ್ಬ ಭಾರತೀಯನಲ್ಲಿ ಸಂತಸ ತಂದಿದೆ. ಇದೇ ವೇಳೆ ಶ್ರೀರಾಮನಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ ಎಂಬುದನ್ನು ಇಲ್ಲಿ ಸಿಗುತ್ತಿರುವ ಪೌರಾಣಿಕ ಕುರುಹುಗಳು ಸಾಬೀತು ಮಾಡಿವೆ. ಬಹುಶಃ ಅಂತಹ ಭಾವನಾತ್ಮಕ ಸಂಬಂಧ ಗಟ್ಟಿಯಾಗಲೆಂದೇ ರಾಮಮಂದಿರದಲ್ಲಿ ಪೂಜೆಗೊಳಪಡುವ ರಾಮಲಲ್ಲಾ ಮೂರ್ತಿಯೂ ಕರ್ನಾಟಕದಿಂದಲೇ ಹೋಗಿದೆ. ಅದರ ನಿರ್ಮಾಣವೂ ನಮ್ಮ ಶಿಲ್ಪಿಯೇ ಮಾಡಿದ್ದಾರೆ.

ರಾಮನಿಗೂ ನಮ್ಮ ಕರ್ನಾಟಕಕ್ಕೂ ಇರುವ ಸಂಬಂಧ ತೇತ್ರಾಯುಗದಿಂದ ಇಲ್ಲಿಯವರೆಗೂ ಮುಂದುವರೆದು ಬಂದಿರುವುದು ನಾವೆಲ್ಲರೂ ಸಂಭ್ರಮಿಸ ಬೇಕಾದ ವಿಚಾರವೇ ಆಗಿದೆ. ಇನ್ನು ಭಾರತದಲ್ಲಿರುವ ಪವಿತ್ರ ಕ್ಷೇತ್ರಗಳ ಪೈಕಿ ಒಂದಾಗಿದ್ದು, ದಕ್ಷಿಣ ಭಾರತದ ಪ್ರಮುಖ ನಾಲ್ಕು ವೈಷ್ಣವ ಕ್ಷೇತ್ರ (ಶ್ರೀರಂಗ, ತಿರುಪತಿ, ಕಾಂಚೀಪುರ, ಮೇಲುಕೋಟೆ) ಗಳಲ್ಲಿ ಒಂದಾದ ಮೇಲುಕೋಟೆಗೂ ರಾಮನಿಗೂ ಸಂಬಂಧ ಇರುವುದನ್ನು ಕಾಣಬಹುದಾಗಿದ್ದು, ಅದು ಯಾವ ಸಂಬಂಧ? ರಾಮ ಏಕೆ ಮೇಲುಕೋಟೆಗೆ ಬಂದಿದ್ದ? ರಾಮಬಿಟ್ಟು ಹೋದ ಆ ಕುರುಹು ಏನು? ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಇಲ್ಲಿರುವ ಧನುಷ್ಕೋಟಿ ಮತ್ತು ವೈರಮುಡಿ ಬಗ್ಗೆ ಹೇಳಬೇಕಾಗುತ್ತದೆ.
ಧನುಷ್ಕೋಟಿ ಬಳಿ ಶ್ರೀರಾಮ ಸೀತೆ ವಿಶ್ರಾಂತಿ
ನಾವು ಮೇಲುಕೋಟೆಯಲ್ಲಿರುವ ಧನುಷ್ಕೋಟಿ ಬಗ್ಗೆ ತಿಳಿಯುತ್ತಾ ಹೋದಂತೆ ರಾಮನಿಗೂ ಮೇಲುಕೋಟೆಗೂ ಇರುವ ನಂಟಿನ ಬಗ್ಗೆ ಗೊತ್ತಾಗಿ ಬಿಡುತ್ತದೆ. ರಾಮಾಯಣದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅಯೋಧ್ಯೆಯಿಂದ ವನವಾಸಕ್ಕೆ ಸೀತೆ ಲಕ್ಷ್ಮಣರೊಂದಿಗೆ 14 ವರ್ಷಗಳ ಕಾಲ ವನವಾಸಕ್ಕೆ ತೆರಳಿದ ಶ್ರೀರಾಮ ಎಲ್ಲೆಡೆ ಸುತ್ತಾಡಿದ್ದನು. ಈತ ಎಲ್ಲೆಲ್ಲಿಗೆ ಹೋಗಿದ್ದನೋ ಆ ಸ್ಥಳಗಳು ಪುಣ್ಯ ಕ್ಷೇತ್ರವಾಗಿವೆ. ವನವಾಸದಲ್ಲಿದ್ದ ಕಾಲದಲ್ಲಿ ಸೀತೆಯನ್ನು ರಾವಣ ಅಪಹರಿಸಿ ಲಂಕೆಗೆ ಕೊಂಡೊಯ್ದು ಅಲ್ಲಿನ ಅಶೋಕವನದಲ್ಲಿಟ್ಟಿದ್ದನು.

ಇತ್ತ ಸೀತೆಯನ್ನು ಹುಡುಕುತ್ತಾ ಹೊರಟ ರಾಮಲಕ್ಷ್ಮಣರು ಸುತ್ತಾಡದ ಸ್ಥಳಗಳಿಲ್ಲ. ಸೀತೆಯನ್ನು ಹುಡುಕುತ್ತಾ ಇಡೀ ಭರತ ಖಂಡವನ್ನು ಸುತ್ತಾಡಿದ್ದರು. ಹಾಗೆ ಬಂದು ಹೋದಲೆಲ್ಲ ಕುರುಹುಗಳನ್ನು ಬಿಟ್ಟು ಹೋಗಿದ್ದರು. ಆದರೆ ಮೇಲುಕೋಟೆಗೆ ಶ್ರೀರಾಮ ಬಂದಿದ್ದು ಲಂಕಾದಹನದ ಬಳಿಕವಾಗಿದೆ. ಹನುಮಂತನ ಸಹಾಯದಿಂದ ಲಂಕೆಯಲ್ಲಿ ಸೀತೆ ಇರುವುದನ್ನು ಅರಿತ ಶ್ರೀರಾಮ, ಲಕ್ಷ್ಮಣ ಮತ್ತು ವಾನಸೇನೆ ಲಂಕೆಯಲ್ಲಿ ಯುದ್ಧ ಮಾಡಿ ರಾವಣ ಸೇರಿದಂತೆ ರಾಕ್ಷಸರನ್ನು ಸಂಹಾರ ಮಾಡಿ, ರಾವಣನ ಸಹೋದರ ವಿಷ್ಣುಭಕ್ತ ವಿಭೀಷಣನಿಗೆ ಪಟ್ಟಾಭಿಷೇಕ ನೆರವೇರಿಸಿ ಅಯೋಧ್ಯೆ ಕಡೆಗೆ ಸೀತೆ ಸಹಿತ ತಮ್ಮ ಪರಿವಾರದೊಂದಿಗೆ ಮರಳುತ್ತಾರೆ. ಹೀಗೆ ಬರುವಾಗ ಮೇಲುಕೋಟೆಯ ಧನುಷ್ಕೋಟಿ ಬಳಿ ವಿಶ್ರಾಂತಿ ಪಡೆದಿದ್ದರಂತೆ. ಈ ಸಂದರ್ಭ ಸೀತೆಗೆ ಬಾಯಾರಿಕೆಯಾಗುತ್ತದೆ.
ಶ್ರೀರಾಮ ಬಾಣದಿಂದ ಸೃಷ್ಟಿಸಿದ ಧನುಷ್ಕೋಟಿ
ಆ ಸ್ಥಳದಲ್ಲಿ ಯಾವುದೇ ಜಲದ ಸೆಲೆಯಿಲ್ಲದನ್ನು ಅರಿತ ಶ್ರೀರಾಮ ಬಾಣಬಿಟ್ಟು ಭೂಮಿಯಿಂದ ನೀರನ್ನುಕ್ಕಿಸುತ್ತಾನೆ. ಇದನ್ನು ಕುಡಿದ ಸೀತೆ ಸಂತೃಪ್ತಳಾಗುತ್ತಾಳೆ. ಅವತ್ತು ಸೀತೆಯ ಬಾಯಾರಿಕೆಯನ್ನು ನೀಗಿಸಿದ ಪುಟ್ಟ ಕೊಳವೇ 'ಧನುಷ್ಕೋಟಿ'ಯಾಗಿದೆ. ಇಲ್ಲಿಗೆ ಹರಿದು ಬರಲು ಯಾವುದೇ ಜಲಮೂಲ ಇಲ್ಲದಿದ್ದರೂ ಕೊಳದಲ್ಲಿ ಸದಾ ನೀರಿರುವುದು ಇಲ್ಲಿನ ವಿಶೇಷವಾಗಿದೆ. ಅಷ್ಟೇ ಅಲ್ಲದೆ ಶ್ರೀರಾಮನ ಪವಾಡವೂ ಆಗಿದೆ.

ಕಲ್ಲು ಬಂಡೆಗಳಿಂದಾವೃತವಾದ ಗುಹೆಯಂತಿರುವ ಪುಟ್ಟ ಕೊಳದಲ್ಲಿ ಸದಾ ಕಾಲ ನೀರು ಹರಿಯುತ್ತಿರುತ್ತದೆ. ಇಲ್ಲಿನ ಮಹತ್ವದ ಬಗ್ಗೆ ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆ ಮಾಹಿತಿ ಫಲಕವನ್ನು ಅಳವಡಿಸಿದೆ. ಇಲ್ಲಿ ಅವತ್ತಿನ ನೆನಪಿಗಾಗಿ ರಾಮ, ಲಕ್ಷ್ನಣ ಮತ್ತು ಸೀತಾಮಾತೆ, ಭರತ ಮತ್ತು ರಾಮನ ಭಂಟ ಹನುಮಂತನ ಮೂರ್ತಿಯನ್ನು ಹಾಗೂ ಶ್ರೀರಾಮ ಮತ್ತು ಸೀತೆಯ ಪಾದುಕೆಗಳನ್ನು ಕೆತ್ತಲಾಗಿದೆ.
ಶ್ರೀರಾಮ ಮೇಲುಕೋಟೆಗೆ ಬಂದಿದ್ದ ವೇಳೆ ಅವರೊಂದಿಗೆ ಚೆಲುವನಾರಾಯಣಸ್ವಾಮಿ ಕೂಡ ಇದ್ದರು ಎಂಬ ನಂಬಿಕೆಯಿದೆ ಅದರಂತೆ ವೈರಮುಡಿ ಸಂದರ್ಭ ರಾಮನಿಗೂ ಪೂಜೆ ಸಲ್ಲುತ್ತದೆ. ಅದು ಏನೇ ಇರಲಿ ಅವತ್ತು ರಾಮಸೃಷ್ಟಿಸಿದ ಧನುಸ್ಕೋಟಿ ಇವತ್ತು ಭಕ್ತರ ಪಾಲಿಗೆ ಪವಿತ್ರ ಸ್ಥಳವಾಗಿದೆ. ಹೀಗಾಗಿ ಇದನ್ನು ವೀಕ್ಷಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಾರೆ. ಇದೆಲ್ಲದರ ನಡುವೆ ಮೇಲುಕೋಟೆಯ ಚೆಲುವರಾಯಸ್ವಾಮಿಯ ವೈರಮುಡಿ ಬ್ರಹ್ಮೋತ್ಸವಕ್ಕೂ ರಾಮನಿಗೂ ಪೌರಾಣಿಕ ನಂಟು ಇರುವುದನ್ನು ಕಾಣಬಹುದಾಗಿದೆ.
ವೈರಮುಡಿಗೂ ಇದೆ ಶ್ರೀರಾಮನ ನಂಟು
ಚೆಲುವರಾಯಸ್ವಾಮಿಯ ವೈರಮುಡಿಯು ವಜ್ರ ಖಚಿತ ಕಿರೀಟವಾಗಿದ್ದು, ಇದು ಶ್ರೀಮಾನ್ ನಾರಾಯಣನ ಕಿರೀಟವೆಂದೂ ದ್ವಾಪರಯುಗದಲ್ಲಿ ಕೃಷ್ಣನ ಮೂಲಕ ಚೆಲುವರಾಯನಿಗೆ ಗರುಡನಿಂದ ತೊಡಿಸಿದನೆಂಬುವುದು ಒಂದೆಡೆಯಾದರೆ, ಮತ್ತೊಂದೆಡೆ ವೈಕುಂಠದಿಂದ ರಾಕ್ಷಸ ವಿರೋಚನ ಕದ್ದಿದ್ದ ನಾರಾಯಣನ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಡಿ ಮರಳಿ ತಂದು ಚೆಲುವರಾಯನಿಗೆ ಅರ್ಪಿಸಿದನೆಂಬುದು ಜನವಲಯದಲ್ಲಿರುವ ನಂಬಿಕೆಯಾಗಿದೆ.

ಚೆಲುವರಾಯಸ್ವಾಮಿಗೆ ಧರಿಸುವ ಸಂದರ್ಭ ನಡೆಯುವ ಉತ್ಸವವೇ ವೈರಮುಡಿ ಬ್ರಹ್ಮೋತ್ಸವವಾಗಿದೆ. ಇದು ಹೇಗೆ ಆಚರಣೆಗೆ ಬಂತೆಂಬುವುದರ ಬಗ್ಗೆ ಪುರಾಣದ ಕಥೆಯೊಂದು ಪ್ರಚಲಿತದಲ್ಲಿದೆ. ಅದರಂತೆ ಹೇಳುವುದಾದರೆ, ಅಯೋಧ್ಯೆಯಲ್ಲಿ ದಶರಥ ಮಹಾರಾಜ ತನ್ನ ಮಾನಸ ಪುತ್ರ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿ, ಪಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನವನ್ನು ಗೊತ್ತು ಮಾಡಿ ಅರಮನೆಯಲ್ಲಿ ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿದ್ದನು.
ರಾಮಾನುಜರಾಗಿ ಬಯಕೆ ತೀರಿಸಿದ ಲಕ್ಷ್ಮಣ
ಇನ್ನೇನು ಪಟ್ಟಾಭಿಷೇಕ ನಡೆಯಬೇಕೆನ್ನುವಷ್ಟರಲ್ಲಿ ಕೈಕೇಯಿಯ ಕುತಂತ್ರದಿಂದಾಗಿ ಶ್ರೀರಾಮ ವನವಾಸಕ್ಕೆ ತೆರಳಬೇಕಾಯಿತು. ಆದರೆ ತನ್ನ ಅಣ್ಣ ಶ್ರೀರಾಮನ ಪಟ್ಟಾಭಿಷೇಕವನ್ನು ಕಣ್ಣಾರೆ ನೋಡಬೇಕೆನ್ನುವ ಬಯಕೆಯಲ್ಲಿದ್ದ ಸೋದರ ಲಕ್ಷಣನಿಗೆ ತನ್ನ ಆಸೆ ಈಡೇರಲಿಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು.
ಹೀಗಾಗಿ ತನ್ನ ಆ ಬಯಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಆದಿಶೇಷನ ಅವತಾರವಾಗಿದ್ದ ಲಕ್ಷ್ಮಣ ಮುಂದೆ ಕಲಿಯುಗದಲ್ಲಿ ರಾಮಾನುಜರಾಗಿ ಜನಿಸಿ, ಶ್ರೀರಾಮನ ಆರಾಧ್ಯದೈವ ಚೆಲುವರಾಯಸ್ವಾಮಿ ನೆಲೆಸಿದ ಮೇಲುಕೋಟೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕೆ ನಿಗದಿಪಡಿಸಿದ ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನದಂದೇ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಧರಿಸುವ ಮೂಲಕ ತನ್ನ ಮನದ ಇಚ್ಛೆಯನ್ನು ನೆರವೇರಿಸಿಕೊಂಡ ಎಂದು ಹೇಳಲಾಗುತ್ತಿದೆ.
ಅದು ಏನೇ ಇರಲಿ ರಾಮನಿಗೂ ಮತ್ತು ಮೇಲುಕೋಟೆಗೂ ಸಂಬಂಧ ಇರುವುದಂತು ನಿಜ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿಗೆ ಸೇರಿರುವ ಮೇಲುಕೋಟೆಯು ಮಂಡ್ಯದಿಂದ 28 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ಮೂರು ಸಾವಿರ ಅಡಿಯಷ್ಟು ಎತ್ತರದಲ್ಲಿದ್ದು, ಪರಮ ಪವಿತ್ರ ತಾಣವಾಗಿದೆ.
-
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications