ಯಾರೂ ಸರಿಯಿಲ್ಲ ಅಂದ್ಮೇಲೆ ನೋಟಾ ಅಂತಾ ಒಂದು ಆಯ್ಕೆ ಇದೆ: ಸಂತೋಷ್ ಹೆಗ್ಡೆ ಹೀಗೆ ಹೇಳಿದ್ದೇಕೆ?
ಮಂಡ್ಯ, ಜುಲೈ, 02: ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜಕೀಯವನ್ನು ಒಂದು ವೃತ್ತಿಯಾಗಿ ಪರಿಗಣಿಸಲಾಗಿದೆಯೇ ಹೊರತು ಸೇವಾ ಮನೋಭಾವನೆ ಕಣ್ಮರೆಯಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಆತಂಕ ವ್ಯಕ್ತಪಡಿಸಿದರು. ಹಾಗೆಯೇ ಯಾರೂ ಸರಿ ಇಲ್ಲ ಅಂದ್ಮೇಲೆ ನೋಟಾ ಅಂತಾ ಒಂದು ಆಯ್ಕೆ ಇದೆ ನೆನಪಿರಲಿ ಎಂದು ಮಂಡ್ಯ ಜನರಿಗೆ ಸಲಹೆ ನೀಡಿದರು.
ಕನ್ನಡ ಸೇನೆ ಕರ್ನಾಟಕ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ಪ್ರಸ್ತುತ ರಾಜಕೀಯದಲ್ಲಿ ಯುವಜನರ ಪಾತ್ರ ಕುರಿತ ವಿಚಾರಣ ಸಂಕಿರಣ ಉದ್ಘಾಟಿಸಿ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು, ಇಂದು ರಾಜಕೀಯಕ್ಕೆ ಬರುವವರು ಆದಾಯಕ್ಕೆ ಬರುತ್ತಿದ್ದಾರೆಯೇ ಹೊರತು ಸೇವೆಗೆ ಅಲ್ಲ. ಈ ಭಾವನೆಯನ್ನು ಬದಲಾಯಿಸುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚಾಗಿ ನಡೆಯಬೇಕಾಗಿದೆ ಎಂದು ಹೇಳಿದರು.

ಇಂದು ರಾಜಕೀಯ ಎಂದರೆ ಹಿತದ ಸುದ್ಧಿಗಿಂತ ವಿಮುಖವಾದದ್ದು. ಹಿಂದೆಲ್ಲಾ ಹೆಚ್ಚು ಓದಿ ದೇಶ ಸೇವೆ ಮಾಡಬೇಕು. ಇಂಜಿನಿಯರ್, ವೈದ್ಯರಾಗಬೇಕು ಎನ್ನುವ ಕಾಲ ಇತ್ತು. ಆದರೆ ಇಂದು ರಾಜಕೀಯಕ್ಕೆ ಬರಬೇಕು ಎಂಬ ವಿಚಾರ ಬಿಟ್ಟು ಬೇರೆ ಯೋಚನೆ ಮಾಡುತ್ತಿಲ್ಲ. ಹೀಗೆ ರಾಜಕೀಯಕ್ಕೆ ಬರುವವರೂ ಸಹ ಹೆಚ್ಚಾಗಿದ್ದಾರೆ ಎಂದರು.
ನನ್ನ ಮತವನ್ನು ಸಮಾಜ ಸೇವೆ ಮಾಡುವವರಿಗೆ ಮಾತ್ರವೇ ಹೊರತು ಸ್ವಹಿತದ ರಾಜಕಾರಣ ಮಾಡುವವರಿಗೆ, ಧರ್ಮದ ಆಧಾರದ ದಾಸ್ಟ್ಯದ ಆಧಾರದ ಮೇಲೆ ನನಗೆ ಲಾಭ ಸಿಗಬಹುದು ಎಂಬುದರ ಆಧಾರದ ಮೇಲೆ ಮತ ಹಾಕುವುದಿಲ್ಲ ಎಂಬ ನಿರ್ಧಾರವನ್ನು ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಹೇಳಿದರು.
ಸಂಭಾವನೆ ಇರಲಿಲ್ಲ
ಹಿಂದೆಲ್ಲಾ ಜನರಿಂದ ಆಯ್ಕೆಯಾಗಿ ಹೋಗುವ ಪ್ರತಿನಿಧಿಗೆ ಸದನದಲ್ಲಿ ಯಾವುದೇ ಸಂಭಾವನೆ ಇರಲಿಲ್ಲ. ತಮ್ಮ ವೈಯಕ್ತಿಕ ಅನುಭವದಿಂದ ಜನರಿಂದ ವಂತಿಕೆ ಸ್ವೀಕರಿಸುತ್ತಿದ್ದರು. ಕ್ಷೇತ್ರದ ವಂತಿಕೆಯಿಂದ ಊಟ, ವಾಸ್ತವ್ಯದ ವ್ಯವಸ್ಥೆ ಕೂಡ ನಡೆಯುತ್ತಿತ್ತು. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ. ಮುಗಿದ ಬಳಿಕ ಅಭಿವೃದ್ಧಿ ಬಗ್ಗೆಯೇ ಚಿಂತನೆ ನಡೆಯುತಿತ್ತು. ಆದರೀಗ ವರ್ಷದ 365 ದಿನವೂ ರಾಜಕೀಯ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಡಳಿತ ಪಕ್ಷದವರು ಮಾಡುವ ಕರಾರನ್ನು ವಿರೋಧ ಪಕ್ಷದವರು ವಿರೋಧಿಸುತ್ತಾರೆ. ವಿರೋಧ ಪಕ್ಷದಲ್ಲಿದ್ದವರು 5 ವರ್ಷದ ನಂತರ ಆಡಳಿತದ ಚುಕ್ಕಾಣಿ ಹಿಡಿದಾಗ ಅವರೂ ಅದನ್ನೇ ಮುಂದುವರೆಸುತ್ತಾರೆ. ಇದನ್ನು ವಿರೋಧಿಸುವುದು, ಸಭಾತ್ಯಾಗ ಮಾಡಿದರೂ ಅಂತಹ ಕರಡನ್ನು ಆಡಳಿತ ಪಕ್ಷದವರು ಜಾರಿ ಮಾಡುತ್ತಾರೆ. ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯೇ ನಡೆಯುವುದಿಲ್ಲ. ಇಂತಹ ಕಾಲಘಟ್ಟದಲ್ಲಿ ನಾವಿರುವಾಗ ಪ್ರಜಾಪ್ರಭುತ್ವದ ವೌಲ್ಯಗಳು ಉಳಿಯುತ್ತೇವೆಯೇ? ಎಂದು ಪ್ರಶ್ನಿಸಿದರು.
ಗಣಿ ಕುರಿತಂತೆ 2012ರಲ್ಲಿ ಮೂವರು ಮುಖ್ಯಮಂತ್ರಿಗಳು, ಹಲವಾರು ಮಂದಿ ಶಾಸಕರು, ಮಂತ್ರಿಗಳ ವಿರುದ್ಧ ವರದಿ ನೀಡಲಾಗಿತ್ತು. ಆಡಳಿತ ಪಕ್ಷದವರು ಅದನ್ನು ಜಾರಿ ಮಾಡದಿದ್ದಾಗ ವಿರೋಧ ಪಕ್ಷದವರು ಜಾರಿಗಾಗಿ ಒತ್ತಾಯಿಸಿ ಬೆಂಗಳೂನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದರು. ನಂತರ ಅಧಿಕಾರಕ್ಕೆ ಬಂದಾಗ ಅವರೂ ಅದನ್ನು ಜಾರಿ ಮಾಡಲೇ ಇಲ್ಲ. ಇದು ಸರಿಯೇ ಎಂದು ಪ್ರಶ್ನಿಸಿದರು.
ಹಾಗೆಯೇ ಎಸಿಬಿ ಬಂದ್ ಮಾಡುವಂತೆ ಕೇಳುತ್ತಿದ್ದವರು ಅಧಿಕಾರಕ್ಕೆ ಬಂದು 24 ತಿಂಗಳು ಸಿಎಂ ಆಗಿ ಅಧಿಕಾರ ನಡೆಸಿದರೂ ಬಂದ್ ಮಾಡಲಿಲ್ಲ. ಕೊನೆಗೆ ನ್ಯಾಯಾಲಯವೇ ಎಚ್ಚರಿಕೆ ನೀಡಬೇಕಾಯಿತು. ನಂತರ ನಾವು ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಟ್ಟೆವು ಎಂದು ಬಿಂಬಿಸಿಕೊಂಡರೇ ಹೊರತು ಏನನ್ನೂ ಮಾಡಲಿಲ್ಲ ಎಂದು ಕಿಡಿಕಾರಿದರು.
ಇಂತಹ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಾದರೆ ನಮ್ಮಿಂದ ಮಾತ್ರ ಸಾಧ್ಯ. ಮತದಾರರು ಯಾವ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಕ್ಷೇತ್ರಕ್ಕೆ ನಿಂತ ವ್ಯಕ್ತಿ ನಮ್ಮ ಹಿತ ಕಾಪಾಡುತ್ತಾನೋ ಇಲ್ಲವೋ ಎಂಬುದನ್ನು ನೋಡಬೇಕು. ಯಾರೂ ಒಳ್ಳೆಯವರಲ್ಲ ಎಂದಾದರೆ ನೋಟಾಕ್ಕೆ ಮತ ಹಾಕಬೇಕು. ಇಂತಹ ಜಾಗೃತಿ ಕಾರ್ಯಕ್ರಮಗಳು ಬಹಳಷ್ಟು ಹೆಚ್ಚಾಗಬೇಕು ಎಂದರು.
ಜನರಲ್ಲಿ ದೇಶದ ಸೇವೆ ಮಾಡುವಂತಹ ಭಾವನೆ ಮೂಡಿಸುವ ಕಾರ್ಯಕ್ರಮ ಆಗಬೇಕು. ರಾಜಕೀಯದಲ್ಲಿ ಹಣ ಮಾಡುವುದು, ಅಧಿಕಾರ ಚಲಾಯಿಸುವುದಷ್ಟೇ ಆಗಬಾರದು. ನಮ್ಮ ಪ್ರತಿನಿಧಿಗಳು ಜನರ ಸೇವೆ ಮಾಡುವಂತವರಾಗಬೇಕು. ನಮಗೂ ಅವರಿಗೂ ಒಂದೇ ಕಾನೂನು ಎಂಬುದನ್ನು ಅರಿತು ನಡೆಯುವವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಝೀರೋ ಟ್ರಾಫಿಕ್ ಏಕೆ?
ಮತದಾರರು ಮತ ಹಾಕುವಾಗ ಝೀರೋ ಟ್ರಾಫಿಕ್ ಬೇಕಿಲ್ಲ. ಮತ ಪಡೆದು ಪ್ರತಿನಿಧಿಯಾಗಿ ಹೋಗುತ್ತಿದ್ದಾಗ ಎಲ್ಲರನ್ನೂ ನಿಲ್ಲಿಸಿ ಝೀರೋ ಟ್ರಾಫಿಕ್ ಮಾಡಿ ಹೋಗುವಂತಹ ಅವಕಾಶ ಏಕೆ ಎಂದು ಪ್ರಶ್ನಿಸಿದರು. ಪ್ರಜಾಪ್ರಭುತ್ವ ಎಂದರೆ ಜನರಿಗಾಗಿ ಇರುವ ಸರ್ಕಾರ. ಇಂತಹ ಯೋಚನೆ ಸಮಾಜದಲ್ಲಿ ಬಂದರೆ ಮಾತ್ರ ನಿಜವಾದ ಪ್ರಜಾಪ್ರಭುತ್ವ ಬರುತ್ತೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರಾಜನೀತಿಗಳಿವೆ. ಅದೆಲ್ಲಕ್ಕೂ ಮೀರಿದ್ದು ಪ್ರಜಾಪ್ರಭುತ್ವ ಎಂದು ಬಣ್ಣಿಸಿದರು.
ಹಿರಿಯರು ಸ್ವಾತಂತ್ರ್ಯ ಬಂದ ನಂತರ ಏನೆಲ್ಲಾ ಮಾಡಬೇಕು ಎಂದು ಚಿಂತಿಸಿ ಕಾಯಿದೆ ಮಾಡಿದ್ದರು. ಸೇವಾ ಮನೋಭಾವದಿಂದ ಸ್ವಾತಂತ್ರ್ಯ ಹೋರಾಟಗಾರರು ಪ್ರತಿನಿಧಿಗಳಾಗುತ್ತಿದ್ದರು. ಇಂದು ಹಣ, ಅಧಿಕಾರದ ದಾಹಕ್ಕಾಗಿ ಜನಪ್ರತಿನಿಧಿಗಳಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಇಂತಹ ವ್ಯವಸ್ಥೆಯನ್ನು ಯುವಜನರು ಬದಲಾಯಿಸಬೇಕಿದೆ. ಪ್ರಜಾಪ್ರಭುತ್ವದ ಜವಾಬ್ದಾರಿಯನ್ನು ತಿಳಿಸುವ ಕೆಲಸ ಆಗಬೇಕು. ಇಂತಹ ಕೆಲಸವನ್ನು ಯುವಜನರು ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಜಾಪ್ರಭುತ್ವದಲ್ಲಿ ಎರಡು ವೌಲ್ಯಗಳಿವೆ. ತೃಪ್ತಿ, ಮಾನವೀಯತೆ. ತೃಪ್ತಿ ಇಲ್ಲದಿದ್ದರೆ ದುರಾಸೆ ತಪ್ಪಿದ್ದಲ್ಲ. ಅದಕ್ಕೆ ಮದ್ದೂ ಇಲ್ಲ. ಎಷ್ಟು ಮಾಡಿದರೂ ಸಾಲಲ್ಲ ಎಂಬ ಧೋರಣೆ ನಮ್ಮ ದೇಶದಲ್ಲಿ ಬಹಳಷ್ಟು ಆಗಿದೆ. ಶೇಕಡಾ 40ಪರ್ಸೆಂಟ್ ಎಂದು ಆರೋಪ ಮಾಡುತ್ತಿದ್ದರು. ನೀವೆಷ್ಟು ಹಣ ಹೊಡೆಯುತ್ತೀದ್ದೀರಿ ಎಂದರೆ ನಾವು ಕೇವಲ ಶೇಕಡಾ 10 ಪೆರ್ಸೆಂಟ್ ಮಾತ್ರ ಎನ್ನುತ್ತಾರೆ. ಆನೆ ಕದ್ದರೂ, ಕಳ್ಳ, ಅಡಿಕೆ ಕದ್ದರೂ ಕಳ್ಳ ಎಂದು ಎಲ್ಲರಿಗೂ ತಿಳಿದಿಲ್ಲವೇ ಎಂದು ಚಾಟಿ ಬೀಸಿದರು.
ಕೋಟಿ ಕೋಟಿ ಹಗರಣ
ದೇಶದಲ್ಲಿ ಹಲವಾರು ಹಗರಣಗಳನ್ನು ಕಂಡಿದ್ದೇವೆ. ಜೀಪ್ ಹಗರಣದಲ್ಲಿ 52 ಲಕ್ಷ ರೂಪಾಯಿ, ಬೋಫರ್ಸ್ ಹಗರಣದಲ್ಲಿ 64 ಕೋಟಿ ರೂಪಾಯಿ, ನಂತರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 70 ಸಾವಿರ ಕೋಟಿ ರೂಪಾಯಿ, 2ಜಿ ಹಗರಣದಲ್ಲಿ 1.76 ಲಕ್ಷ ಕೋಟಿ ರೂಪಾಯಿ, ಕಲ್ಲಿದ್ದಲು ಹಗರಣದಲ್ಲಿ 1.80 ಲಕ್ಷ ಕೋಟಿ ರೂಪಾಯಿ ಇಷ್ಟೊಂದು ಸೇರಿಕೊಂಡರೆ ದೇಶ ಯಾವ ರೀತಿ ಅಭಿವೃದ್ಧಿಯಾಗಲಿದೆ ಎಂಬುದನ್ನು ಯೋಚಿಸಬೇಕಾಗಿದೆ ಎಂದು ಹೇಳಿದರು.
ಈ ವೇಳೆ ವಿ.ಆರ್.ಸುದರ್ಶನ್ ಅಧ್ಯಕ್ಷತೆ, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್, ಜಿಲ್ಲಾಧ್ಯಕ್ಷ ಎಚ್.ಸಿ. ಮಂಜುನಾಥ್, ಮಹಿಳಾಧ್ಯಕ್ಷೆ ಸೌಭಾಗ್ಯ ಶಿವಲಿಂಗು, ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಉಪಸ್ಥಿತರಿದ್ದರು.












Click it and Unblock the Notifications