• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಸದೆ ಸುಮಲತಾ ಮುಂದಿನ ನಡೆ ಏನಾಗಿರಬಹುದು?

|

ಮಂಡ್ಯ, ಅಕ್ಟೋಬರ್ 10: ಮಂಡ್ಯ ಸಂಸದೆ ಸುಮಲತಾ ಅವರ ಚಿತ್ತ ಯಾರತ್ತ ಎಂಬ ಜಿಜ್ಞಾಸೆ ಇದೀಗ ರಾಜಕೀಯ ವಲಯದಲ್ಲಿ ಮೂಡಿದೆ. ಸದ್ಯಕ್ಕೆ ಸುಮಲತಾ ಬಿಜೆಪಿಯತ್ತ ಒಲವು ತೋರಿದಂತೆ ಕಂಡು ಬರುತ್ತಿದ್ದರೂ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತೇನೆ ಎಂಬ ಚಿಕ್ಕ ಸುಳಿವನ್ನೂ ಇದುವರೆಗೆ ಬಿಟ್ಟುಕೊಟ್ಟಿಲ್ಲ.

ಎಚ್ ಡಿ ಕುಮಾರಸ್ವಾಮಿಗೆ ಮಾತಿನೇಟು ಕೊಟ್ಟ ಸುಮಲತಾ ಅಂಬರೀಶ್

ಆದರೆ ಮಂಡ್ಯ ಬಿಜೆಪಿ ಕಚೇರಿಗೆ ತೆರಳಿ ಕಳೆದ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಿದ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿರುವುದು ಮಾತ್ರ ಚರ್ಚೆಗೆ ಗ್ರಾಸವಾಗಿದೆ. ಹಾಗೆ ನೋಡಿದರೆ ಸುಮಲತಾ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರ ಆದೇಶವನ್ನು ಬದಿಗೊತ್ತಿ ಭಾಗವಹಿಸಿ ಗೆಲುವಿಗೆ ಶ್ರಮಪಟ್ಟಿದ್ದರು. ಇದಕ್ಕಾಗಿ ಕೆಲವು ಮುಖಂಡರು ಪಕ್ಷ ತೆಗೆದುಕೊಂಡ ಕಠಿಣ ಕ್ರಮಕ್ಕೂ ಒಳಗಾಗಬೇಕಾಯಿತು. ಹೀಗಿರುವಾಗ ನಾಳೆ ಕಾಂಗ್ರೆಸ್ ಕಚೇರಿಗೆ ತೆರಳಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತಾರಾ ಎಂಬುದು ಜನ ಕೇಳುತ್ತಿರುವ ಪ್ರಶ್ನೆ.

 ಬಿಜೆಪಿಗೆ ಸೆಳೆದುಕೊಳ್ಳುವ ಪ್ರಯತ್ನ?

ಬಿಜೆಪಿಗೆ ಸೆಳೆದುಕೊಳ್ಳುವ ಪ್ರಯತ್ನ?

ಈಗಿನ ಪರಿಸ್ಥಿತಿ ಗಮನಿಸಿದರೆ ಸುಮಲತಾ ಅವರ ಚಿತ್ತ ಬಿಜೆಪಿಯತ್ತ ನೆಟ್ಟಿದೆ ಎಂಬುದು ಸುಲಭವಾಗಿ ಗೊತ್ತಾಗಿ ಬಿಡುತ್ತದೆ. ಕ್ಷೇತ್ರದಲ್ಲಿ ಕೆಲಸ ಮಾಡಿಕೊಳ್ಳಬೇಕಾದರೆ ಸ್ವತಂತ್ರ ಅಭ್ಯರ್ಥಿಯಾಗಿ ಗುರುತಿಸಿಕೊಳ್ಳುವುದಕ್ಕಿಂತ ಬಿಜೆಪಿಯೊಂದಿಗೆ ಗುರುತಿಸಿಕೊಂಡರೆ ಸರ್ವ ರೀತಿಯಲ್ಲಿಯೂ ಅನುಕೂಲವಾಗುತ್ತದೆ ಎಂಬುದು ಅವರಿಗೆ ಗೊತ್ತಿಲ್ಲದ ವಿಚಾರವೇನಲ್ಲ.

ಪ್ರಸ್ತುತ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿದೆ. ಇಲ್ಲಿ ಕಾಂಗ್ರೆಸ್ ಈ ಹಿಂದೆ ತನ್ನ ಪಾರುಪತ್ಯ ಮೆರೆದಿತ್ತು. ಆದರೆ ಬಿಜೆಪಿ ಇನ್ನೂ ಸಂಘಟನೆ ದೃಷ್ಟಿಯಿಂದ ಪ್ರಬಲವಾಗಿಲ್ಲ. ಹಾಗಾಗಿ ಮಂಡ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಬೆಳೆಸಬೇಕಾದರೆ ಸುಮಲತಾ ಅವರಿಂದಷ್ಟೆ ಸಾಧ್ಯ ಎಂಬುದು ಬಿಜೆಪಿಯ ರಾಜ್ಯ, ರಾಷ್ಟ್ರನಾಯಕರಿಗೆ ಮನದಟ್ಟಾಗಿದೆ. ಹೀಗಾಗಿ ಅವರನ್ನು ಬಿಜೆಪಿಗೆ ಸೆಳೆದುಕೊಂಡು ಯಾವುದಾದರೊಂದು ಉತ್ತಮ ಸ್ಥಾನಮಾನ ನೀಡುವ ಇರಾದೆ ಬಿಜೆಪಿಯಲ್ಲಿದ್ದರೆ ಅದನ್ನು ತಳ್ಳಿ ಹಾಕುವಂತಿಲ್ಲ.

 ರಾಜಕೀಯ ಪಕ್ಷದತ್ತ ವಾಲುವುದು ಅನಿವಾರ್ಯ

ರಾಜಕೀಯ ಪಕ್ಷದತ್ತ ವಾಲುವುದು ಅನಿವಾರ್ಯ

ಇನ್ನು ಮಂಡ್ಯದಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯ ಮತ್ತೊಂದಷ್ಟು ಮೂಲ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗಿದೆ. ಒಂದು ವೇಳೆ ಚುನಾವಣಾ ಸಂದರ್ಭ ನೀಡಿರುವ ಭರವಸೆಗಳನ್ನು ಈಡೇರಿಸದೆ ಹೋದರೆ ಸುಮಲತಾ ಅವರ ವಿರೋಧಿಗಳು ಅದನ್ನೇ ಮುಂದಿಟ್ಟುಕೊಂಡು ಕಾಲೆಳೆಯುವ ಸಾಧ್ಯತೆ ಹೆಚ್ಚಿರುವುದರಿಂದ ಮತ್ತು ಪಕ್ಷೇತರ ಸಂಸದೆಯಾಗಿ ಎಲ್ಲವನ್ನೂ ನಿಭಾಯಿಸುವುದು ಕಷ್ಟವಾಗುವ ಕಾರಣದಿಂದ, ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಭದ್ರವಾಗಿ ನೆಲೆಯೂರಬೇಕಾದರೆ ಯಾವುದಾದರೂ ರಾಜಕೀಯ ಪಕ್ಷದತ್ತ ವಾಲುವುದು ಅನಿವಾರ್ಯವಾಗಿದ್ದು, ಈಗಿನ ಸ್ಥಿತಿಯಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಅವರ ಆಲೋಚನೆಯಾಗಿರಬಹುದೇನೋ?

ಬಿಜೆಪಿ ಸೇರ್ತಾರಾ ಪಕ್ಷೇತರ ಸಂಸದೆ ಸುಮಲತಾ?

 ವಿರೋಧಿಗಳ ಬಾಯಿ ಮುಚ್ಚಿಸಿದ ಉತ್ತರ

ವಿರೋಧಿಗಳ ಬಾಯಿ ಮುಚ್ಚಿಸಿದ ಉತ್ತರ

ಇಷ್ಟೆಲ್ಲ ಚರ್ಚೆಗಳು ನಡೆಯುತ್ತಿದ್ದರೂ ನಾನು ಬಿಜೆಪಿಗೆ ಸೇರ್ಪಡೆಗೊಳ್ಳುತ್ತೇನೆ ಎಂದು ಸುಮಲತಾ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಬಿಜೆಪಿ ಕಚೇರಿಗೆ ಏಕೆ ಬಂದಿದ್ದೀರಿ ಎಂಬ ಪ್ರಶ್ನೆಗೆ ಅವರು ನೀಡುತ್ತಿರುವ ಉತ್ತರವೇ ಬೇರೆಯಾಗಿದೆ. ಅದೇನೆಂದರೆ ಚುನಾವಣೆ ಮುಗಿದ ದಿನದಂದೇ ಕೃತಜ್ಞತೆ ಸಲ್ಲಿಸಲು ನಿರ್ಧರಿಸಿದೆ. ಕೆಲವಾರು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಅವಕಾಶ ಸಿಕ್ಕಿದೆ ಹಾಗಾಗಿ ಬಂದಿದ್ದೇನೆ ಎಂದು ಹೇಳಿದ್ದಾರೆ.

ಮುಂದುವರೆದು ನಾನು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದೇನೆ. ಪತಿ ಅಂಬರೀಶ್ ಅವರಿಗೆ ಎಲ್ಲ ಪಕ್ಷದಲ್ಲೂ ಆತ್ಮೀಯರಿದ್ದರು. ನನ್ನನ್ನು ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ರೈತ ಸಂಘ ಸೇರಿ ಹಲವಾರು ಸಂಘಟನೆಗಳ ಬಾವುಟ ಹಿಡಿದು ಗೆಲ್ಲಿಸಿದ್ದಾರೆ. ಹಾಗಾಗಿ ನಾನು ಕೊಟ್ಟ ಮಾತು ಉಳಿಸಿ ಕೊಳ್ಳುತ್ತೇನೆ. ಇನ್ನು ಬಿಜೆಪಿ ಕಾರ್ಯಕರ್ತರಿಗೇಕೆ ಕೃತಜ್ಞತೆ ಸಲ್ಲಿಸಬೇಕು ಎಂಬ ಪ್ರಶ್ನೆಗೂ ಉತ್ತರಿಸುತ್ತಾ, ಬಿಜೆಪಿಯವರು ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸದೆ ನನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದು ಕರ್ತವ್ಯವಾಗಿದೆ ಎಂದು ಹೇಳುವ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.

 ಪಕ್ಷೇತರರಾಗೇ ಕ್ಷೇತ್ರದ ಅಭಿವೃದ್ಧಿಯತ್ತ ಚಿಂತನೆ?

ಪಕ್ಷೇತರರಾಗೇ ಕ್ಷೇತ್ರದ ಅಭಿವೃದ್ಧಿಯತ್ತ ಚಿಂತನೆ?

ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಅಂಬರೀಶ್ ಅವರನ್ನು ಪ್ರಶಂಸಿಸಿದ್ದಾರೆ. ನಾನು ಪಾರ್ಲಿಮೆಂಟ್‌ಗೆ ಹೋದಾಗ ಪ್ರಧಾನಿ ಸೇರಿ ಪ್ರತಿಯೊಬ್ಬರೂ ನಿಮ್ಮ ಕ್ಷೇತ್ರಕ್ಕೆ ಏನುಬೇಕು ಕೇಳಿ ಅಂತಾರೆ. ಜತೆಗೆ ಪ್ರಧಾನಿ ಕೂಡ ಅಭಿವೃದ್ಧಿಗೆ ನೆರವಿನ ಭರವಸೆ ನೀಡಿದ್ದಾರೆ ಎನ್ನುವ ಮೂಲಕ ಬಿಜೆಪಿ ನಾಯಕರ ಸಂಪರ್ಕದಲ್ಲಿರುವುದನ್ನು ಪರೋಕ್ಷವಾಗಿಯೇ ದೃಢಪಡಿಸಿದ್ದಾರೆ.

ಇದೆಲ್ಲವನ್ನು ಗಮನಿಸಿದರೆ ಸಂಸದೆ ಸುಮಲತಾ ಅವರ ಚಿತ್ತ ಬಿಜೆಪಿಯತ್ತ ನೆಟ್ಟಿರುವುದು ಸ್ಪಷ್ಟವಾಗುತ್ತದೆ. ಆದರೆ ಎಲ್ಲವನ್ನೂ ಜಾಣ್ಮೆಯಿಂದ ನಿಭಾಯಿಸುವ ಸಾಮರ್ಥ್ಯ ಹೊಂದಿರುವ ಅವರು ಪಕ್ಷೇತರರಾಗಿಯೇ ಉಳಿದು ಬಿಜೆಪಿ ಸಂಪರ್ಕದೊಂದಿಗೆ ಕ್ಷೇತ್ರದ ಅಭಿವೃದ್ಧಿ ಮಾಡುವುದರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗದೆ ಉಳಿದರೂ ಅಚ್ಚರಿ ಪಡಬೇಕಾಗಿಲ್ಲ. ಆದರೆ ಎಲ್ಲದಕ್ಕೂ ಕಾಲವೇ ಉತ್ತರ ನೀಡಬೇಕಷ್ಟೆ.

ಕೇಂದ್ರದಿಂದ ನೆರೆ ಪರಿಹಾರ ಗ್ಯಾರಂಟಿ ಎಂದ ಸುಮಲತಾ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Though MP Sumalatha currently seen as favoring the BJP, she has not given even the slightest hint that she will join the BJP. So what could be the next move of sumalatha?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more