ಮಂಡ್ಯದಲ್ಲಿ ಸ್ವಚ್ಛ ಭಾರತದ ಕನಸಿಗೆ ತಣ್ಣೀರು: ಯಾಕೆ ಗೊತ್ತಾ?
ಮಂಡ್ಯ, ಮಾರ್ಚ್ 25: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಮಟ್ಟದಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಛ ಸಂಕೀರ್ಣ ಘಟಕಗಳನ್ನು ನಿರ್ಮಿಸಿಕೊಡಲಾಗಿದ್ದು, ಇಲ್ಲಿ ತ್ಯಾಜ್ಯ ಸಂಗ್ರಹ ಮಾಡಿ ಸ್ವಚ್ಛತೆಗೆ ಆದ್ಯತೆ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕಡೆಗಳಲ್ಲಿ ತ್ಯಾಜ್ಯ ನಿರ್ವಹಣೆ ಕಾರ್ಯ ಫಲಪ್ರದವಾಗದ ಕಾರಣದಿಂದಾಗಿ ಕಸದ ರಾಶಿಗಳು ಎಲ್ಲೆಂದರಲ್ಲಿ ಕಾಣುತ್ತಿವೆ.
ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಬದಿ, ಚರಂಡಿ ಹೀಗೆ ಎಲ್ಲೆಂದರಲ್ಲಿ ಕಸ ಕಂಡು ಬರುತ್ತಿದ್ದು ಅಸಹ್ಯ ಮೂಡಿಸುತ್ತಿದೆ. ಕಸದ ನಿರ್ವಹಣೆ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಿ ಗ್ರಾಮಗಳನ್ನು ಶುಚಿಯಾಗಿಟ್ಟುಕೊಳ್ಳುವುದು ಗ್ರಾಮ ಪಂಚಾಯಿತಿಗೆ ಸವಾಲ್ ಆಗಿ ಪರಿಣಮಿಸುತ್ತಿದೆ. ಜನರು ಕೂಡ ಕಸವನ್ನು ಎಲ್ಲೆಂದರಲ್ಲಿ ಎಸೆದು ಹೋಗುವುದು ಕಂಡು ಬರುತ್ತಿದ್ದು, ಇದರಿಂದ ಸಾಂಕ್ರಾಮಿಕ ರೋಗಗಳಿಗೂ ದಾರಿ ಮಾಡಿಕೊಡುತ್ತಿದ್ದಾರೆ.

ನರೇಗಾ ಯೋಜನೆಯಡಿ ತ್ಯಾಜ್ಯ ಸಂಗ್ರಹ ಸಂಕೀರ್ಣ ಘಟಕಗಳನ್ನು ನಿರ್ಮಿಸಿ ಒಣ ಕಸ ಹಾಗೂ ಹಸಿ ಕಸವನ್ನು ಸಂಗ್ರಹಣೆ ಮಾಡಿ ಅದನ್ನು ನಿರ್ವಹಣೆ ಮಾಡುವ ಕೆಲಸವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿತ್ತು. ಇದಕ್ಕಾಗಿ ನರೇಗಾ ಯೋಜನೆಯಲ್ಲಿ ಪ್ರತಿ ಪಂಚಾಯಿತಿಗೂ 12 ಲಕ್ಷ ರೂಪಾತಿ ವೆಚ್ಚದಲ್ಲಿ ಒಂದು ಸ್ವಚ್ಛ ಸಂಕೀರ್ಣ ಘಟಕಗಳನ್ನು ನಿರ್ಮಿಸಲು ಯೋಜನೆ ರೂಪಿಸಿತ್ತು. ಅದರಂತೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ 24 ಗ್ರಾಮ ಪಂಚಾಯಿತಿಯಲ್ಲಿ ಸಂಕಿರ್ಣ ಘಟಕಗಳು ನಿರ್ಮಾಣವಾಗಿದ್ದು, ಇಲ್ಲಿಯವರೆಗೆ ಯಾವ ಪಂಚಾಯ್ತಿಯಲ್ಲಿಯೂ ತ್ಯಾಜ್ಯ ನಿರ್ವಹಣೆ ಕೆಲಸ ಮಾತ್ರ ಆರಂಭವಾಗಿಲ್ಲ ಎನ್ನುವುದೇ ಬೇಸರ ಸಂಗತಿಯಾಗಿದೆ.
ಘಟಕಗಳ ನಿರ್ಮಾಣ ಮಾಡುವಾಗ ಇದ್ದಂತ ಉತ್ಸಾಹ ತದ ನಂತರ ತ್ಯಾಜ್ಯ ನಿರ್ವಹಣೆ ಮಾಡುವಲ್ಲಿ ತೋರಿಸದಿರುವುದು ಇವತ್ತು ಯೋಜನೆ ಹಳ್ಳಹಿಡಿಯಲು ಕಾರಣವಾಗಿದೆ. ಇನ್ನು 15ನೇ ಹಣಕಾಸು ಯೋಜನೆಯಲ್ಲಿ ಮನೆ ಮನೆಗೂ ಎರಡು ಬಕೆಟ್‌ಗಳನ್ನು ನೀಡಲಾಗಿದೆ. ಇದಕ್ಕೆ ಸಾರ್ವಜನಿಕ ಹಣವನ್ನು ಖರ್ಚು ಮಾಡಿ ಕೊಡಲಾಗಿದ್ದು, ಒಣ ಕಸ ಹಾಗೂ ಹಸಿ ಕಸ ಸಂಗ್ರಹಣೆ ಮಾಡುವಂತೆ ಸೂಚಿಸಿ ನೀಡಲಾಗಿದ್ದರೂ ವಿಂಗಡಣೆ ನಡೆಯುತ್ತಿರುವಂತೆ ಕಾಣುತ್ತಿಲ್ಲ. ಕಸ ಸಂಗ್ರಹಣೆಗಾಗಿ ಪ್ರತಿ ಪಂಚಾಯಿತಿಗೆ ಒಂದು ಆಟೋ ನೀಡಲಾಗಿದ್ದು ಅದು ಕೆಲಸಕ್ಕೆ ಬಾರದಂತಾಗಿದೆ.
ಈಗಾಗಲೇ ನಿರ್ಮಾಣಗೊಂಡಿರುವ ಕೆಲವು ಸಂಕೀರ್ಣ ಘಟಕಗಳಲ್ಲಿ ತ್ಯಾಜ್ಯ ನಿರ್ವಹಣೆ ಕೆಲಸ ನಡೆಯದ ಕಾರಣದಿಂದ ಆ ಕಟ್ಟಡಗಳು ಅನೈತಿಕ ಚಟುವಟಿಕೆಯ ತಾಣವಾಗಿದೆ. ಕನಗನಮರಡಿ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಿರುವ ಘಟಕವು ಅನೈತಿಕ ಚಟುವಟಿಕೆ ತಾಣವಾಗಿದ್ದು ಕುಡುಕರಿಗೆ ಆಶ್ರಯ ತಾಣವಾಗಿದೆ. ಈ ಕಟ್ಟಡವನ್ನು ಉದ್ಘಾಟನೆ ಮಾಡಿ ಹೋದವರು ಮತ್ತೆ ಈ ಕಡೆಗೆ ಬಂದಿಲ್ಲ. ಹೀಗಾಗಿ ಘಟಕ ಖಾಲಿ ಬಿದ್ದಿದ್ದು, ಕೆಲವರು ಇದನ್ನು ಅನೈತಿಕ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇದು ಕುಡುಕರ ಅಡ್ಡೆಯಾಗಿ ಬದಲಾಗಿದ್ದು, ಇಲ್ಲಿ ಮದ್ಯದ ಬಾಟಲ್‌ಗಳು, ನೀರಿನ ಬಾಟಲ್‌ಗಳು, ಒಡೆದ ಗಾಜಿನ ಚೂರುಗಳು ಹೀಗೆ ಏನೇನೋ ವಸ್ತುಗಳು ರಾಶಿ ಬಿದ್ದಿವೆ.

ಸರ್ಕಾರ ಹಳ್ಳಿಗಳನ್ನು ತ್ಯಾಜ್ಯ ಮುಕ್ತ ಮತ್ತು ಸ್ವಚ್ಛಗ್ರಾಮವನ್ನಾಗಿಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ತಂದಿದ್ದರೂ ಅದನ್ನು ಸ್ಥಳೀಯ ಗ್ರಾಮ ಪಂಚಾಯಿತಿಗಳು ಅನುಷ್ಠಾನ ಮಾಡದ ಕಾರಣದಿಂದಾಗಿ ಯೋಜನೆಗಳು ವಿಫಲವಾಗುತ್ತಿವೆ. ಇದು ಒಂದು ಹಳ್ಳಿಯ ಕಥೆಯಲ್ಲ. ಬಹುತೇಕ ಹಳ್ಳಿಗಳಲ್ಲಿ ಇದೇ ಸಮಸ್ಯೆ ಕಾಣಿಸುತ್ತಿದ್ದು, ಜನ ಸಾಮಾನ್ಯರು ಹಿಡಿ ಶಾಪ ಹಾಕುವಂತಾಗಿದೆ. ಯಾವುದೇ ಯೋಜನೆಯಾದರೂ ಅದು ಸಕಾರಗೊಳ್ಳಬೇಕಾದರೆ ಸ್ಥಳೀಯ ಆಡಳಿತದ ಜವಾಬ್ದಾರಿ ಮತ್ತು ಸಾರ್ವಜನಿಕರ ಸಹಭಾಗಿತ್ವ ಬಹುಮುಖ್ಯವಾಗಿರುತ್ತದೆ.
ಇನ್ನಾದರೂ ಸಂಬಂಧಿಸಿದ ಗ್ರಾಮಪಂಚಾಯಿತಿಗಳು ಇತ್ತ ಗಮನಹರಿಸಿ ತಮ್ಮ ವ್ಯಾಪ್ತಿಯಲ್ಲಿರುವ ತ್ಯಾಜ್ಯ ಸಂಗ್ರಹ ಸಂಕೀರ್ಣಗಳಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಕಾರ್ಯಾರಂಭಿಸುವ ಮೂಲಕ ಸ್ವಚ್ಛತೆ ಕಾಪಾಡುವ ಕೆಲಸವನ್ನು ಮಾಡಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸಿ ಎಲ್ಲೆಂದರಲ್ಲಿ ಕಸ ಎಸೆಯದಂತೆ ಮತ್ತು ರಾಶಿಬಿದ್ದ ಕಸವನ್ನು ವಿಲೇವಾರಿ ಮಾಡಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಇದರಿಂದ ಹಳ್ಳಿಗಳು ರೋಗಮುಕ್ತವಾಗಲು ಸಹಕಾರಿಯಾಗುತ್ತದೆ.











Click it and Unblock the Notifications