Mandya: ಸಚಿವ ನಾರಾಯಣ ಗೌಡ ಕಾರು ಅಡ್ಡಗಟ್ಟಿದ ಗ್ರಾಮಸ್ಥರು: ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ತಳ್ಳಾಟ
ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಸಚಿವ ಕೆಸಿ ನಾರಾಯಣ ಗೌಡ ಅವರ ಕಾರನ್ನು ಜೆಡಿಎಸ್ ಬೆಂಬಲಿಗರು ಏಕಾಏಕಿ ಅಡ್ಡಗಟ್ಟಿ ನಿಂದನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ರಾಜಘಟ್ಟ ಗೇಟ್ ಬಳಿ ಈ ಘಟನೆ ನಡೆದಿದೆ.
ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ 70 ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಸಚಿವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ಹೆಚ್ಚಾಗಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಕೂಡ ಹೋಗಿದೆ.

ತಳ್ಳಾಟ ನೂಕಾಟ ಹೆಚ್ಚಾಗುತ್ತಿದ್ದಂತೆ ಅಂಗರಕ್ಷಕರು ಸಚಿವ ನಾರಾಯಣ ಗೌಡ ಅವರನ್ನು ರಕ್ಷಣೆ ಮಾಡಿದ್ದಾರೆ. ನಾರಾಯಣ ಗೌಡ ಮತ್ತು ಜೆಡಿಎಸ್ ಬೆಂಬಲಿಗರ ನಡುವೆ ಸಾಕಷ್ಟು ವಾಗ್ವಾದ ನಡೆದಿದೆ. ತಮ್ಮ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸದಂತೆ ಜೆಡಿಎಸ್ ಕಾರ್ಯಕರ್ತರು ಅಡ್ಡಗಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಬೇಕಂತಲೆ ಜೆಡಿಎಸ್ ಕಾರ್ಯಕರ್ತರು ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಮದು ಬಿಜೆಪಿ ಬೆಂಬಲಿಗರು ಆರೋಪಿಸಿದ್ದಾರೆ. ಜೆಡಿಎಸ್ ಪಕ್ಷದಲ್ಲಿದ್ದ ನಾರಾಯಣಗೌಡ ನಂತರ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದೇ ಕಾರಣಕ್ಕೆ ಜೆಡಿಎಸ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಇದು ನಮ್ಮೂರು ಇಲ್ಲಿ ನೀವು ಪ್ರಚಾರ ಮಾಡುವಂತಿಲ್ಲ ಎಂದು ಸಚಿವ ನಾರಾಯಣ ಗೌಡ ಅವರನ್ನು ತಡೆದಿದ್ದಾರೆ. ನಂತರ ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಕಡೆಯವರಿಗೆ ಬುದ್ದಿವಾದ ಹೇಳಿದ ನಂತರ ಪರಿಸ್ಥಿತಿ ತಿಳಿಯಾಗಿದೆ.
ಬಿಜೆಪಿ ಗೆಲ್ಲಿಸಲು ಮನವಿ ಮಾಡಿದ ನಾರಾಯಣಗೌಡ
ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಚಿವ ನಾರಾಯಣ ಗೌಡ, ಬಿಜೆಪಿ ಪಕ್ಷವನ್ನು ನಂಬಿ ಬಂದಿದ್ದೇನೆ, ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ಯಾವತ್ತಿಗೂ ವಂಚನೆ ಮಾಡಲ್ಲ, ನನ್ನಿಂದ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಕೆಆರ್ ಪೇಟೆಯಲ್ಲಿ ಈ ಬಾರಿ ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.
ಇನ್ನು ಇದೇ ನನ್ನ ಕೊನೆ ಚುನಾವಣೆ ಎಂದು ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ. ನನ್ನ ಅವಧಿ ಮುಗಿದ ನಂತರ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಯುವಕರನ್ನು ಗುರುತಿಸಿ ಅವರಿಗೆ ಅಧಿಕಾರ ಬಿಟ್ಟುಕೊಡುವುದಾಗಿ ಭರವಸೆ ನೀಡಿದ್ದಾರೆ.
ಈ ಬಾರಿ ಮಂಡ್ಯದಲ್ಲಿ ಜೆಡಿಎಸ್ ಕೋಟೆ ಮೇಲೆ ಬಿಜೆಪಿ ಬಾವುಟ ಹಾರಿಸಲು ಸಾಕಷ್ಟು ಶ್ರಮಿಸುತ್ತಿದೆ. ಅಮಿತ್ ಶಾ, ನರೇಂದ್ರ ಮೋದಿ ಕೂಡ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದಾರೆ. ಮೇ 10 ರಂದು ಚುನಾವಣೆ ನಡೆಯಲಿದ್ದು, ಮತದಾರನ ಮನಸ್ಸಿನಲ್ಲಿ ಏನಿದೆ ಎನ್ನುವುದು ಮೇ 13ರಂದು ತಿಳಿಯಲಿದೆ.












Click it and Unblock the Notifications