ಸರ್ಕಾರಿ ಕಾಲೇಜನ್ನು ಮಂಡ್ಯ ವಿವಿಯಾಗಿ ಪರಿವರ್ತಿಸಲು ಸಂಪುಟ ಒಪ್ಪಿಗೆ
ಮಂಡ್ಯ, ಆಗಸ್ಟ್ 26: ನಗರದ ವಿಶ್ವವಿದ್ಯಾಲಯವನ್ನು ಏಕೀಕೃತ ಮಂಡ್ಯ ವಿವಿಯಾಗಿ ಮಾಡಿ ನಂತರ ಅದನ್ನು ಮಂಡ್ಯ ವಿಶ್ವವಿದ್ಯಾಲಯವಾಗಿ ಪರಿವರ್ತನೆ ಮಾಡಲು ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದೆ ಎಂದು ಕುಲಪತಿ ಡಾ.ಪುಟ್ಟರಾಜು ಹೇಳಿದರು.
ನಗರದ ಸರ್ಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಾಲೇಜನ್ನು ಜಿಲ್ಲಾ ವಿವಿಯಾಗಿ ಪರಿವರ್ತನೆಗೆಂದು ಸಚಿವ ಸಂಪುಟ ಅಸ್ತು ಎಂದಿದೆ. ಇದನ್ನು ಅಕ್ಟೋಬರ್‌ನಲ್ಲಿ ಗೆಜೆಟೆಡ್ ನೋಟಿಫಿಕೇಷನ್ ಪ್ರಕಟಿಸಲಿದೆ . ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಕರ್ನಾಟಕ ಮೊದಲ ಸರ್ಕಾರಿ ಸ್ವಾಯತ್ತ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸರ್ಕಾರಿ ಮಹಾವಿದ್ಯಾಲಯ ಕಾಲೇಜನ್ನು ರೂಸಾ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಲ್ಲಿ 55 ಕೋಟಿ ಮಂಜೂರು ಮಾಡಿ ಏಕೀಕೃತ ವಿಶ್ವವಿದ್ಯಾಲಯ ಉನ್ನತ ದರ್ಜೆಗೇರಿಸಿತು ಎಂದರು.
ಈ ವಿಶ್ವವಿದ್ಯಾಲಯದಲ್ಲಿ ಕಲಾಭವನ, ವಾಣಿಜ್ಯ ಭವನ, ಗ್ರಂಥಾಲಯ ಮುಂತಾದವುಗಳನ್ನು ಸರ್ಕಾರದಿಂದ ಬಂದ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ಹೊಸ ಕಟ್ಟಡಗಳನ್ನು ಈಗಾಗಲೇ ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಶಾಸಕರು ಲೋಕಾರ್ಪಣೆ ಮಾಡಿದ್ದಾರೆ. ಈಗ ಪ್ರಾದೇಶಿಕ ಸಮಾನತೆ ನೀಡುವ ದೃಷ್ಟಿಯಿಂದ ಮಂಡ್ಯ ವಿಶ್ವವಿದ್ಯಾಲಯವನ್ನು ಜಿಲ್ಲಾ ವಿಶ್ವವಿದ್ಯಾಲಯವಾಗಿ ಪರಿವರ್ತಿಸಲು ಸಚಿವ ಸಂಪುಟ ಅನುಮೋದಿಸಿದೆ ಎಂದು ತಿಳಿಸಿದರು.

ಜಿಲ್ಲೆಯ ವ್ಯಾಪ್ತಿಯ 47ಕ್ಕೂ ಹೆಚ್ಚು ಪದವಿ ಕಾಲೇಜುಗಳು ಮಂಡ್ಯ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡಲಿವೆ. ನೂತನ ವಿಶ್ವವಿದ್ಯಾಲಯವು ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳಿಗೆ ಅಗತ್ಯವಿರುವ ಸಂಶೋಧನಾ ಸೌಲಭ್ಯವನ್ನು ಒದಗಿಸಲಿವೆ. ಜಿಲ್ಲೆ, ಹೊರ ಜಿಲ್ಲೆ, ರಾಜ್ಯ, ವಿದೇಶಿ ವಿದ್ಯಾರ್ಥಿಗಳ ಸಂಶೋಧನೆಗೆ ವಿವಿಯಿಂದ ಮುಕ್ತ ಅವಕಾಶ ನೀಡಲಾಗುವುದು. ಏಕೀಕೃತ ವಿಶ್ವವಿದ್ಯಾಲಯವನ್ನು ಜಿಲ್ಲಾ ವ್ಯಾಪ್ತಿಗೆ ತಂದಿರುವುದು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ವರದಾನವಾಗಲಿದೆ ಎಂದು ಪ್ರಶಂಸಿಸಿದರು.
ಎಲ್ಲ ಕಾಲೇಜುಗಳ ಅಧ್ಯಾಪಕರುಗಳಿಗೆ ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ಅಕಾಡೆಮಿಕ್ ಕಾಲೇಜು ಮುಂದಿನ ದಿನಗಳಲ್ಲಿ ವಿವಿಯಲ್ಲಿ ಅಸ್ತಿತ್ವಕ್ಕೆ ಬರಲಿದೆ. ಸಂಶೋಧನಾ ವಿದ್ಯಾರ್ಥಿಗಳ ಪಿಎಚ್‌ಡಿ ಪದವಿಗೆ ಮುಕ್ತ ಅವಕಾಶ ದೊರೆಯಲಿದೆ. ಕೈಗಾರಿಕಾ ಒಡಂಬಡಿಕೆ ಮಾಡಿಕೊಂಡು ಕೈಗಾರಿಕೆಗಳಿಗೆ ಅಗತ್ಯವಿರುವ ಕೋರ್ಸ್‌ಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳನ್ನು ಉದ್ಯೋಗಸ್ಥರನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು.
8 ಹೊಸ ವಿವಿ ಸ್ಥಾಪನೆ
ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ಕರ್ನಾಟಕ ವಿವಿಗಳ ಕಾಯ್ದೆ 2000ಕ್ಕೆ ತಿದ್ದುಪಡಿಗೆ ಸಂಪುಟ ಸಮ್ಮತಿಸಿದೆ. ಈಗಾಗಲೇ ಈ ಜಿಲ್ಲೆಗಳಲ್ಲಿ ಸ್ನಾತಕೋತ್ತರ ಕೇಂದ್ರಗಳು ಆರಂಭವಾಗಿದ್ದು, ಅಲ್ಲಿಯೇ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿವೆ.

ನಾರಾಯಣಗೌಡ ಅಭಿನಂದನೆ
ಸಚಿವ ಸಂಪುಟ ಸಭೆಯಲ್ಲಿ ಮಂಡ್ಯ ಸೇರಿದಂತೆ ರಾಜ್ಯದಲ್ಲಿ 8 ನೂತನ ವಿಶ್ವ ವಿದ್ಯಾಲಯಗಳ ಸ್ಥಾಪನೆ ಅನುಮೋದನೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈಗಾಗಲೇ ಮಂಡ್ಯ ವಿವಿ ಒಂದನ್ನು ಹೊರತುಪಡಿಸಿ 7 ವಿವಿಗಳ ಸ್ಥಾಪನೆ ಬಗ್ಗೆ ಈ ವರ್ಷದ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಇದೀಗ ಮಂಡ್ಯದಲ್ಲೂ ನೂತನ ವಿವಿ ಸ್ಥಾಪನೆಗೆ ಅವಕಾಶ ಕಲ್ಪಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವಥ್ ನಾರಾಯಣ್ ಅವರಿಗೆ ಹಾಗೂ ಸಂಪುಟದ ಎಲ್ಲಾ ಸಹೋದ್ಯೋಗಿಗಳಿಗೆ ಸಚಿವ ಡಾ.ನಾರಾಯಣಗೌಡ ಅವರು ಧನ್ಯವಾದ ಅರ್ಪಿಸಿದ್ದಾರೆ.












Click it and Unblock the Notifications