ಸಾವಿನ ತಾಣವಾಗಿ ಮಾರ್ಪಾಡಾದ ಪ್ರವಾಸಿ ತಾಣ ಮುತ್ತತ್ತಿ
ಮಂಡ್ಯ, ಜನವರಿ 21: ಮಳವಳ್ಳಿ ತಾಲೂಕಿನ ಪ್ರವಾಸಿ ತಾಣವಾದ ಮುತ್ತತ್ತಿ ಇತ್ತೀಚೆಗಿನ ದಿನಗಳಲ್ಲಿ ಸಾವಿನ ತಾಣವಾಗಿ ಮಾರ್ಪಾಡಾಗುತ್ತಿದೆ. ಇಲ್ಲಿನ ಸುಂದರ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಬರುವ ಪ್ರವಾಸಿಗರು ಈಜಲು, ಸ್ನಾನ ಮಾಡಲು ಕಾವೇರಿ ನದಿಗಿಳಿಯುವ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿರುವುದು ಮೇಲಿಂದ ಮೇಲೆ ನಡೆಯುತ್ತಿದ್ದು ಭಯಪಡುವಂತಾಗಿದೆ.
ಮುತ್ತತ್ತಿಗೆ ಬರುವ ಪ್ರವಾಸಿಗರು ಇಲ್ಲಿನ ದೇವಾಲಯಕ್ಕೆ ಭೇಟಿ ನೀಡಿ ಮುತ್ತತ್ತಿರಾಯನ ದರ್ಶನ ಮಾಡಿಕೊಂಡು ಕಾವೇರಿ ನದಿಯ ವಿಹಂಗಮ ನೋಟ ನೋಡಿಕೊಂಡು ಹಿಂತಿರುಗಬೇಕು. ಆದರೆ ಈ ತಾಣ ಅಪಾಯ ಎಂಬ ಅರಿವಿದ್ದರೂ ಕಾವೇರಿ ನದಿಯಲ್ಲಿ ಸ್ನಾನ ಮಾಡುವ, ಈಜುವ ಸಾಹಸಕ್ಕಿಳಿಯುತ್ತಿದ್ದು, ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪುವುದು ಸಾಮಾನ್ಯವಾಗಿದೆ.
ವರ್ಷಕ್ಕೆ ಹತ್ತಾರು ಮಂದಿ ಒಂದಲ್ಲ ಒಂದು ಕಾರಣಕ್ಕೆ ಇಲ್ಲಿ ಸಾವಿಗೆ ಶರಣಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದೀಗ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಈಜಲು ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೆಳಗಲ್ ಪೇಟೆ ಗ್ರಾಮದ ನಿವಾಸಿ ಗಂಗಾಧರಪ್ಪ ಎಂಬುವರ ಪುತ್ರ ಯೋಗಿ ಸಿದ್ದಲಿಂಗೇಶ (26) ನೀರಿನಲ್ಲಿ ಮುಳುಗಿ ಮೃತಪಟ್ಟವನಾಗಿದ್ದಾನೆ. ಈತ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನಲ್ಲದೆ ಚಾಮರಾಜೇಪೇಟೆಯಲಿರುವ ಪಿಜಿಯೊಂದರಲ್ಲಿ ವಾಸವಾಗಿದ್ದನು.
ವೀಕೆಂಡ್ ಮಸ್ತಿಗಾಗಿ ಈತ ತನ್ನ ಎಂಟು ಮಂದಿ ಸ್ನೇಹಿತರೊಂದಿಗೆ ಮುತ್ತತ್ತಿಗೆ ಬಂದಿದ್ದನು. ಇಲ್ಲಿನ ಮುತ್ತತ್ತಿರಾಯನಿಗೆ ಪೂಜೆ ಸಲ್ಲಿಸಿದ ಬಳಿಕ ಹಿಂತಿರುಗದೆ ಇಲ್ಲಿಯೇ ಕೆಲ ಸಮಯ ಕಳೆದಿದ್ದಾರೆ. ಈ ಸಂದರ್ಭ ಇವರಿಗೆ ಕಾವೇರಿ ನದಿಯಲ್ಲಿ ಈಜುವ ಬಯಕೆಯಾಗಿದ್ದು ಅದರಂತೆ ನೀರಿನಲ್ಲಿ ಈಜಾಡಿದ್ದಾರೆ. ಈ ವೇಳೆ ಸಿದ್ದಲಿಂಗೇಶ ಆಕಸ್ಮ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ಜತೆಗಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ನೀರಿನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ಬಳಿಕ ವಾರಾಸುದಾರರಿಗೆ ನೀಡಿದ್ದಾರೆ. ಅಪಾಯದ ಬಗ್ಗೆ ತಿಳಿಸಿದರೂ ಕೆಲವರು ತಮ್ಮ ಮಾತು ಕೇಳದೆ ನದಿಗಿಳಿಯುತ್ತಾರೆ ಎಂಬುದಾಗಿ ಸ್ಥಳೀಯರು ಹೇಳುತ್ತಿದ್ದು, ಇನ್ನಾದರೂ ಮುತ್ತತ್ತಿಗೆ ವೀಕೆಂಡ್ ಮೋಜು ಮಸ್ತಿ ಮಾಡಲೆಂದು ದಯವಿಟ್ಟು ಯಾರೂ ಬರಬೇಡಿ, ಭಕ್ತರಾಗಿ, ಪ್ರವಾಸಿಗರಾಗಿ ಇಲ್ಲಿಗೆ ಬಂದರೆ ದೇವರ ದರ್ಶನ ಮಾಡಿಕೊಂಡು, ನಿಸರ್ಗ ಸೌಂದರ್ಯವನ್ನು ಆಸ್ವಾದಿಸಿಕೊಂಡು ಹಿಂತಿರುಗಿ, ಬದಲಿಗೆ ಕಾವೇರಿ ನದಿಯಲ್ಲಿ ಈಜುವ, ಸ್ನಾನ ಮಾಡುವ ಪ್ರಯತ್ನ ಮಾಡಬೇಡಿ ಎನ್ನುವುದು ಅವರ ಮನವಿಯಾಗಿದೆ.












Click it and Unblock the Notifications