ಕಾವೇರಿ ಅಂತಿಮ ತೀರ್ಪು ಬರುವವರೆಗೆ ನೋ ಕಾಮೆಂಟ್ಸ್: ದೇವೇಗೌಡ

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಅಕ್ಟೋಬರ್ 21: ಕಾವೇರಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪು ಬರುವ ತನಕ ನಾನು ಕಾಯುತ್ತೇನೆ. ಆ ವರೆಗೆ ಈ ವಿಷಯದ ಕುರಿತು ಏನನ್ನೂ ಮಾತನಾಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಮಾಜಿ ಪ್ರಧಾನಿಯಾಗಿ ಕೋರ್ಟ್ ಬಗ್ಗೆ ಟೀಕೆ- ಟಿಪ್ಪಣಿ ಮಾಡುವುದು ಸರಿಯಲ್ಲ. ಮಹದಾಯಿ ವಿಚಾರವಾಗಿ ಕರೆದಿದ್ದ ಸಭೆ ಮುಂದೂಡಿಕೆ ವಿಚಾರದ ಬಗ್ಗೆ ಜನರು ತೀರ್ಮಾನ ಕೈಗೊಳ್ಳುತ್ತಾರೆ. ಈ ಬಗ್ಗೆ ಜನರಿಗೆ ತಿಳಿವಳಿಕೆ ಇದೆ ಎಂದು ಅವರು ಹೇಳಿದರು.[ಏಕರೂಪ ನಾಗರಿಕ ಸಂಹಿತೆ ಜಾರಿಗೆ ದೇವೇಗೌಡರ ವಿರೋಧ]

Devegowda

ಬಿಜೆಪಿ ಮುಖಂಡರಾದ ಅನಂತ್ ಕುಮಾರ್, ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಮೂರು ರಾಜ್ಯಗಳ ಸಭೆ ಕರೆಯುವಂತೆ ಮಾಡಿದ್ದರು. ಈಗ ನಿರ್ಧಾರ ಬದಲಾಗಲು ಏನು ಕಾರಣ ಎಂಬುದು ಗೊತ್ತಾಗುತ್ತಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ, ಕಾಂಗ್ರೆಸ್ ಎರಡೂ ರಾಜ್ಯವನ್ನು ಕೈಬಿಟ್ಟಿವೆ. ಈ ಬಗ್ಗೆ ಏನು ಮಾತನಾಡಿದರೂ ಪ್ರಯೋಜನವಿಲ್ಲ. ನಾಲ್ಕೇ ದಿನಕ್ಕೆ ಕಾವೇರಿ ನಿರ್ವಹಣಾ ಮಂಡಳಿ ರಚಿಸುವುದಾಗಿ ಹೇಳಿದ್ದು ನನಗೆ ನೋವು ತಂದಿತು. ಆ ಕಾರಣಕ್ಕೆ ಅನಿವಾರ್ಯವಾಗಿ ಉಪವಾಸ ಮಾಡಬೇಕಾಯಿತು. ಸುಮ್ಮಸುಮ್ಮನೆ ಉಪವಾಸ ಮಾಡೋದಿಕ್ಕೆ ನನಗೇನು ಹುಚ್ಚು ಹಿಡಿದಿದೆಯಾ ಎಂದು ಪ್ರಶ್ನಿಸಿದರು.[ಪಂಕ್ತಿಭೇದ ಇದ್ದರೆ ಉಡುಪಿ ಊಟಕ್ಕೆ ಯಾಕೆ ಹೋಗ್ತೀರಾ: ದೇವೇಗೌಡ]

ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್, ಜಾರಕಿಹೊಳಿ, ಇಬ್ರಾಹಿಂ ಜೆಡಿಎಸ್ ಪಕ್ಷ ಸೇರುವ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಅವರೆಲ್ಲರೂ ಹಳೆಯ ಸ್ನೇಹಿತರು, ಪಕ್ಷಕ್ಕೆ ಬರುವವರಿದ್ದರೆ ಬರಬಹುದು. ಶ್ರೀನಿವಾಸ ಪ್ರಸಾದ್ ಅವರು ವಿಚಾರವುಳ್ಳವರು. ಅವರು ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ. ಊಹಾಪೋಹ ಬೇಕಾಗಿಲ್ಲ. ಆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜಕಾರಣ ನಿಂತ ನೀರಲ್ಲ. ಅದರಲ್ಲಿ ಯಾವಾಗ ಬೇಕಾದರೂ ಬದಲಾವಣೆ ಕಾಣಬಹುದು. ಉತ್ತರ ಪ್ರದೇಶ, ಪಂಜಾಬ್, ಗುಜರಾತ್ ಚುನಾವಣೆ ಬಳಿಕ ರಾಜಕೀಯ ಧ್ರುವೀಕರಣ ನಡೆಯಲಿದೆ. 2018ರ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಹೇಳಿದರು.[ಸರ್ಜಿಕಲ್ ಸ್ಟ್ರೈಕ್: ಏನ್ ದೇವೇಗೌಡ್ರೇ ಹೀಗೆ ಹೇಳ್ ಬಿಟ್ರಿ, ತಪ್ಪಲ್ವಾ?]

ಈ ಹಿನ್ನೆಲೆಯಲ್ಲಿ ರಾಜ್ಯದ 30 ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇನೆ. ಇದರಲ್ಲಿ ಯಾವುದೇ ಮುಲಾಜಿಲ್ಲ. ರಾಜಕಾರಣದಲ್ಲಿ ಎಲ್ಲವನ್ನೂ ನೋಡಿದ್ದೇನೆ ಎಂದು ಅವರು ಹೇಳಿದರು.

ಇನ್ನು ಎತ್ತಿನ ಹೊಳೆ ಯೋಜನೆ ವಿಚಾರದಲ್ಲಿ ಎರಡು ಸರ್ಕಾರಗಳೂ ಪ್ಯಾಕೇಜ್ ಕರೆದಿವೆ. ಸ್ಥಳದಲ್ಲಿ ಅಡಿಗಲ್ಲು ಹಾಕಿಲ್ಲ. ನಾಲೆಗಳ ಬಗ್ಗೆಯೂ ಗೊತ್ತಿಲ್ಲ. ತಜ್ಞರು 9 ಟಿಎಂಸಿ ನೀರು ಸಿಗಲ್ಲ ಎಂದು ಹೇಳಿದ್ದಾರೆ. 2 ಸಾವಿರ ಕೋಟಿ ಬಿಡುಗಡೆಯಾಗಿರುವ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ನೋಡಿದ್ದೇನೆ. ನೀರಿನ ವಿಷಯ ಬಹಳ ಸೂಕ್ಷ್ಮವಾದದ್ದು. ಇದರಲ್ಲಿ ರಾಜಕೀಯ ಲಾಭ- ನಷ್ಟ ನೋಡಲ್ಲ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Till Cauvery dispute final judgement, I don't comment, said by former prime minister H.D.Deve gowda in Mandya. He also said, Both Congress and BJP have left the hands Karnataka.
Please Wait while comments are loading...