ಮಂಡ್ಯದ ಮಹದೇವಪುರದಲ್ಲಿ ಕಾಣಿಸಿಕೊಂಡ ಹುಲಿ: ಗ್ರಾಮಸ್ಥರಲ್ಲಿ ಆತಂಕ
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಜಮೀನಿನಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಈ ಭಾಗದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಳೆದ ಎರಡು ತಿಂಗಳ ಹಿಂದೆ ನಂಜನಗೂಡು ತಾಲೂಕಿನ ಬಳ್ಳೂರುಹುಂಡಿ ಗ್ರಾಮದ ಜಮೀನಿನಲ್ಲಿ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿದ್ದ ಹುಲಿ ವ್ಯಕ್ತಿಯೊಬ್ಬರನ್ನು ತಿಂದುಹಾಕಿದ್ದ ಘಟನೆ ಮಾಸುವ ಮುನ್ನವೇ ಮಹದೇವಪುರದ ಜಮೀನಿನಲ್ಲಿ ಹುಲಿ ಪ್ರತ್ಯಕ್ಷವಾಗಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

ಗ್ರಾಮದ ಚನ್ನಹಳ್ಳಿ ಅಶೋಕ್ ಎಂಬುವರಿಗೆ ಜಮೀನಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೋಮವಾರ ಸಂಜೆ 4.30ರ ಸಮಯದಲ್ಲಿ ಹುಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯಾವಳಿಗಳು ಸೆರೆಯಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ಪರಿಶೀಲನೆ
ಜಮೀನಿನಲ್ಲಿ ಹುಲಿ ನಡೆದಾಡಿದ್ದ ದೃಶ್ಯಗಳು ಕಂಡುಬಂದ ಕಡೆಗಳಲ್ಲಿ ಹೆಜ್ಜೆಯ ಗುರುತುಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದು, ಜಮೀನಿನಲ್ಲಿ ತೇವಾಂಶವಿದ್ದ ಕಾರಣ ಹೆಜ್ಜೆಯ ಗುರುತುಗಳು ಅಗಲವಾಗಿ ಕಾಣುತ್ತಿದ್ದು, ಇದು ಚಿರತೆಯದ್ದೋ ಅಥವಾ ಹುಲಿಯದ್ದೋ ಎಂಬ ಅನುಮಾನಗಳು ಕಾಡುತ್ತಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರು ಹುಲಿ ಬಂದಿದೆ ಎಂದು ಖಚಿತವಾಗಿ ಹೇಳುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ವನ್ಯಜೀವಿ ವಿಭಾಗದ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದು, ಅವರೂ ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ವನ್ಯಜೀವಿ ವಿಭಾಗದವರು ತಮ್ಮೊಂದಿಗೆ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ತರಲಿದ್ದು, ಅವುಗಳನ್ನು ಅಲ್ಲಲ್ಲಿ ಅಳವಡಿಸಿ ಹುಲಿಯ ಚಲನವಲನಗಳ ಬಗ್ಗೆ ನಿಗಾ ಇಡಲಾಗುವುದು. ಜೊತೆಗೆ ಹುಲಿ ಸೆರೆಗೆ ಬೋನನ್ನು ಇಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮದ ಸುತ್ತಮುತ್ತ ಇರುವ ಜಮೀನಿನಲ್ಲಿ ಹುಲಿ ನಡೆದಾಡುತ್ತಿದ್ದು, ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಜಮೀನಿನ ಕಡೆಗೆ ಒಬ್ಬಂಟಿಯಾಗಿ ಹೋಗಲು ಭಯಪಡುತ್ತಿದ್ದಾರೆ. ಜಾನುವಾರುಗಳನ್ನು ಜಮೀನಿನ ಬಳಿಗೆ ಮೇಯಲು ಸಹ ಬಿಡುತ್ತಿಲ್ಲ. ಸ್ಥಳದಲ್ಲೇ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಹದೇವಸ್ವಾಮಿ, ವಲಯ ಸಂರಕ್ಷಣಾಧಿಕಾರಿ ಪುಟ್ಟಸ್ವಾಮಿ ಇತರೆ ಅಧಿಕಾರಿಗಳು ಬೀಡು ಬಿಟ್ಟು ಹುಲಿಯ ಚಲನ ವಲನಗಳ ಬಗ್ಗೆ ನಿಗಾ ವಹಿಸಿದ್ದಾರೆ.












Click it and Unblock the Notifications