ದನಗಳ ಜಾತ್ರೆಯಲ್ಲಿ ಗಮನ ಸೆಳೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆತನದ ಎತ್ತುಗಳು
ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿಯ ಶ್ರೀ ಕಂಬದ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಪ್ರಯುಕ್ತ ಆಯೋಜಿಸಿದ್ದ ಭಾರೀ ದನಗಳ ಜಾತ್ರೆ ಯಶಸ್ವಿಯಾಗಿ ನಡೆಯಿತು. ಚಿತ್ರನಟ ದರ್ಶನ್ ಖರೀದಿಸಿದ್ದ ಎತ್ತುಗಳು ಗಮನ ಸೆಳೆದವು.
ಜಾತ್ರೆಗೆ ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಹಾಸನ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ 356 ಜೊತೆ ದನಗಳು ಭಾಗವಹಿಸಿದ್ದವು. 56 ಜೋಡಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಹಾಲು ಹಲ್ಲು, ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು, ಕಡೇ ಹಲ್ಲುಗಳ ವಿಭಾಗದಲ್ಲಿ ಬಹುಮಾನಕ್ಕೆ ಆಯ್ಕೆ ಮಾಡಲಾಯಿತು. ಹಸುಗಳಲ್ಲೂ ಇದೇ ಮಾದರಿಯನ್ನು ಅನುಸರಿಸಲಾಯಿತು.

ಚಾಂಪಿಯನ್ ಜೋಡಿಗೆ ₹20 ಸಾವಿರ, ಪ್ರಥಮ ₹15 ಸಾವಿರ, ದ್ವಿತೀಯ ₹10 ಸಾವಿರ, ತೃತೀಯ ₹5 ಸಾವಿರಗಳನ್ನು ಬಹುಮಾನವಾಗಿ ನೀಡಲಾಯಿತು. ಜಾತ್ರೆಯಲ್ಲಿ ಆಕರ್ಷಣೀಯವಾಗಿ ಹಾಕಲಾಗಿದ್ದ ಚಪ್ಪರಕ್ಕೆ ಪ್ರಥಮ ಬಹುಮಾನವಾಗಿ ₹3 ಸಾವಿರ, ದ್ವಿತೀಯ ಬಹುಮಾನ ₹2 ಸಾವಿರ, ಹಾಗೂ ತೃತೀಯ ಬಹುಮಾನವಾಗಿ ₹1 ಸಾವಿರ ನೀಡಲಾಯಿತು.
ಜಾತ್ರೆಗೆ ಬಂದಿದ್ದ ದನಗಳು ಮತ್ತು ಹಸುಗಳಿಗೆ ಕುಡಿಯುವ ನೀರು, ಮೇವು, ನೆರಳಿನ ವ್ಯವಸ್ಥೆ, ಹೊರ ಜಿಲ್ಲೆಗಳಿಂದ ಬಂದವರಿಗೆ ಊಟ, ತಿಂಡಿ ವ್ಯವಸ್ಥೆಯನ್ನು ದೇವಸ್ಥಾನದ ಆಡಳಿತ ಮಂಡಳಿಯವರು ಮಾಡಿದ್ದರು.
ಗಮನ ಸೆಳೆದ ₹8.5 ಲಕ್ಷ ಬೆಲೆಯ ಜೋಡೆತ್ತುಗಳು
ಪಾಂಡವಪುರ ತಾಲೂಕು ತಿಮ್ಮನಕೊಪ್ಪಲು ಗ್ರಾಮದ ₹8.50 ಲಕ್ಷ ಮೌಲ್ಯದ ದನಗಳು ಜಾತ್ರೆಯಲ್ಲಿ ವಿಶೇಷವಾಗಿ ಗಮನಸೆಳೆದವು. ಈ ದನಗಳನ್ನು ಜಾತ್ರೆಗೆ ಬಂದವರು 10.50 ಲಕ್ಷ ರು. ನೀಡುವುದಾಗಿ ಹೇಳಿದರೂ ಕೊಡುವುದಕ್ಕೆ ಮಾಲೀಕರು ಒಪ್ಪಲಿಲ್ಲ. ನಾವು ದನಗಳನ್ನು ಮಾರಾಟಕ್ಕೆ ತಂದಿಲ್ಲ. ಪ್ರದರ್ಶನಕ್ಕೆ ತಂದಿರುವುದಾಗಿ ಮಾಲೀಕ ಕೆಂಪೇಗೌಡ ಹೇಳಿದರು.
₹4.5 ಲಕ್ಷ ಬೆಲೆಯ ದರ್ಶನ್ ಒಡೆತನದ ಎತ್ತುಗಳು
ನಟ ದರ್ಶನ್ ಅವರು 4.50 ಲಕ್ಷ ರು. ಖರೀದಿಸಿದ್ದ ದನಗಳನ್ನೂ ಜಾತ್ರೆಯಲ್ಲಿ ಪ್ರದರ್ಶನಕ್ಕಾಗಿ ಕರೆತರಲಾಗಿತ್ತು. ಹೊಳಲು ಗ್ರಾಮದ ಚೇತನ್ ಎಂಬುವರಿಂದ 4.50 ಲಕ್ಷ ರೂ.ಗಳಿಗೆ ದನಗಳನ್ನು ಖರೀದಿ ಮಾಡಿದ್ದ ದರ್ಶನ್ ಅವರು, ಭಾರೀ ದನಗಳ ಜಾತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದರು.
ದರ್ಶನ್ ಸೂಚನೆ ಮೇರೆಗೆ ಚೇತನ್ ಅವರು ದನಗಳನ್ನು ಜಾತ್ರೆಗೆ ಕರೆತಂದಿದ್ದು, ದನಗಳ ಜಾತ್ರೆಯಲ್ಲಿ ಪ್ರದರ್ಶನ ಮುಗಿದ ಬಳಿಕ ಊರಿಗೆ ವಾಪಸ್ಸು ಕೊಂಡೊಯ್ದರು. ದನಗಳನ್ನು ಚೇತನ್ ಹೆಸರಿನಲ್ಲೇ ಪ್ರದರ್ಶನಕ್ಕೆ ಇಡಲಾಗಿತ್ತು ಎಂದು ಆಯೋಜಕರು ತಿಳಿಸಿದರು.












Click it and Unblock the Notifications