Mandya: ಕೇಂದ್ರದ ತೆರಿಗೆ ತಾರತಮ್ಯ; ಒಂದೇ ವೇದಿಕೆಯಲ್ಲಿ ಸುಮಲತಾ - ಚಲುವರಾಯಸ್ವಾಮಿ ಏಟು ಎದಿರೇಟು
ಕೇಂದ್ರದ ತೆರಿಗೆ ಹಣ ತಾರತಮ್ಯ ವಿಚಾರವಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಒಂದೇ ವೇದಿಕೆಯಲ್ಲಿ ಏಟು-ಎದಿರೇಟು ನೀಡಿದ ಘಟನೆ ಸೋಮವಾರ ನಡೆಯಿತು.
ಮಂಡ್ಯ ನಗರದ ರೈಲ್ವೆ ನಿಲ್ವಾಣದ ಬಳಿ ನಡೆದ ಮಂಡ್ಯ ರೈಲು ನಿಲ್ದಾಣದ ಶಂಕುಸ್ಥಾಪನಾ ಸಮಾರಂಭದಲ್ಲಿ ತೆರಿಗೆ ಹಣದ ಅನುದಾನದ ವಿಚಾರ ಪ್ರಸ್ತಾಪಗೊಂಡು ಇಬ್ಬರೂ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಮೊದಲು ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಅಭಿವೃದ್ಧಿಗೆ ಯಾರೂ ಅವರ ಜೇಬಿನಿಂದ ತೆಗೆದು ಹಣ ಕೊಡುತ್ತಿಲ್ಲ. ಕೇಂದ್ರ-ರಾಜ್ಯಗಳೆರಡೂ ಕೊಡುತ್ತಿರುವುದು ರಾಜ್ಯದ ಜನರ ತೆರಿಗೆ ಹಣ. ಕರ್ನಾಟಕ ವಾರ್ಷಿಕ ₹4.50 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ನೀಡುತ್ತಿದೆ. ತೆರಿಗೆ ಪಾವತಿಯಲ್ಲಿ ಕರ್ನಾಟಕ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ಅದರ ಅರ್ಧದಷ್ಟು ಹಣವೂ ಬರುತ್ತಿಲ್ಲ. ಹಾಗಾಗಿ ಕೇಂದ್ರ ರಾಜ್ಯದ ಅಭಿವೃದ್ಧಿಗೆ ಎಷ್ಟು ಹಣ ನೀಡಿದರೂ ಅದು ಕಡಿಮೆಯೇ ಎಂದರು.
ಜನಸಂಖ್ಯೆಯನ್ನು ಆಧರಿಸಿ ಅನುದಾನ ನೀಡುವ ಕೇಂದ್ರ ಹಣಕಾಸು ಆಯೋಗದ ನಿಯಮಾವಳಿಗೆ ತಿದ್ದುಪಡಿ ತರುವ ಅಗತ್ಯವಿದೆ. ಇದು ಬದಲಾವಣೆಯಾಗಬೇಕು. ಕರ್ನಾಟಕದಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ಹೆಚ್ಚು ತೆರಿಗೆ ಪಾವತಿಸುತ್ತಿದೆ. ಜನಸಂಖ್ಯೆ ಹೆಚ್ಚಿರುವ ಉತ್ತರ ಪ್ರದೇಶ ಕಡಿಮೆ ತೆರಿಗೆ ಪಾವತಿಸುತ್ತಿದೆ. ಜನಸಂಖ್ಯೆ ಆಧರಿಸಿ ಅನುದಾನ ನೀಡುವ ಮಾನದಂಡ ಬದಲಾಗಬೇಕಿದೆ ಎಂದು ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಜನರ ತೆರಿಗೆ ಹಣವನ್ನು ಆದ್ಯತಾನುಸಾರ ಆರ್ಥಿಕ ದುರುಪಯೋಗವಾಗದಂತೆ ಖರ್ಚು ಮಾಡುವುದು ಕೇಂದ್ರ-ರಾಜ್ಯಸರ್ಕಾರಗಳ ಜವಾಬ್ದಾರಿ. ಯಾವುದಕ್ಕೆ ಮೊದಲ ಆದ್ಯತೆ ನೀಡಬೇಕು. ಎಷ್ಟು ಖರ್ಚು ಮಾಡಬೇಕು. ಎಷ್ಟು ಕಾಲಮಿತಿಯೊಳಗೆ ಮುಗಿಯಬೇಕೆಂಬ ನಿರ್ದಿಷ್ಟ ಗುರಿಯೊಂದಿಗೆ ಸರ್ಕಾರಗಳು ಆರ್ಥಿಕ ಶಿಸ್ತನ್ನು ಕಾಪಾಡುವ ಮೂಲಕ ಅಭಿವೃದ್ಧಿಗೆ ಒತ್ತಾಸೆಯಾಗಿ ನಿಲ್ಲುತ್ತವೆ. ಅದಕ್ಕೆ ಕೇಂದ್ರ ಮತ್ತು ರಾಜ್ಯಸರ್ಕಾರಗಳ ನಡುವೆ ಪರಸ್ಪರ ಪೂರಕ ಸಹಕಾರವಿರಬೇಕು ಎಂದು ತಿಳಿಸಿದರು.
ಸುಮಲತಾ ಹೇಳಿದ್ದೇನು?
ಸಚಿವರು ಮಾತು ಮುಗಿಸಿ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ನಿರ್ಗಮಿಸಿದ ಬಳಿಕ ಮಾತನಾಡಿದ ಸಂಸದೆ ಸುಮಲತಾ, ತೆರಿಗೆ ಹಣದ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ಕೇಂದ್ರ ರಾಜ್ಯಗಳಿಗೆ ಅನುದಾನ ನೀಡುವ ಜೊತೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೂ ಹಣ ಕೊಡುತ್ತಿದೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ, ರೈಲ್ವೆ ನಿಲ್ದಾಣ ನವೀಕರಣ, ಅಂಡರ್‌ಪಾಸ್, ಮೇಲ್ಸೇತುವೆಗಳು, ರೈತರು, ಮಹಿಳೆಯರು, ಯುವಕರು, ಮಕ್ಕಳಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಹಣ ನೀಡುತ್ತಿಲ್ಲವೇ. ಅದು ಅಭಿವೃದ್ಧಿಗೆ ಕೇಂದ್ರ ಕೊಡುತ್ತಿರುವ ಅನುದಾನವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಕೇಂದ್ರಕ್ಕೆ ಪ್ರತ್ಯೇಕವಾದ ರಾಜ್ಯಗಳೇನಿಲ್ಲ. ಅವರೂ ರಾಜ್ಯಗಳ ಅಭಿವೃದ್ಧಿಯನ್ನೇ ಗಮನದಲ್ಲಿಟ್ಟುಕೊಂಡು ಹಣ ಕೊಡುತ್ತಿದ್ದಾರೆ. ತೆರಿಗೆ ಹಣವನ್ನು ಬ್ಯಾಂಕ್‌ನಲ್ಲಿಟ್ಟುಕೊಂಡು ಬೇರೆಡೆ ಖರ್ಚು ಮಾಡಲು ಆಗುವುದಿಲ್ಲ. ಆ ಹಣವನ್ನು ಎಲ್ಲಾ ರಾಜ್ಯಗಳ ಅಭಿವೃದ್ಧಿ ಖರ್ಚು ಮಾಡುತ್ತಿದ್ದಾರೆ. ತೆರಿಗೆ ಹಣ ಎಷ್ಟು ವಾಪಸ್ ಬಂತು ಎನ್ನುವುದರ ಜೊತೆಗೆ ರಾಜ್ಯಕ್ಕೆ ಸಿಗುತ್ತಿರುವ ಯೋಜನೆಗಳನ್ನು ಗಮನಿಸಬೇಕು. ಪ್ರಧಾನಿ ಮೋದಿ ಅವರು ಎಲ್ಲ ರಾಜ್ಯದವರನ್ನು ಸಮಾನವಾಗಿ ಕಾಣುತ್ತಿದ್ದಾರೆ. ಇದನ್ನು ರಾಜಕೀಯವಾಗಿ ನೋಡದೆ ವಾಸ್ತವ ದೃಷ್ಟಿಯಲ್ಲಿ ನೋಡಬೇಕು ಎಂದು ಹೇಳಿದರು.












Click it and Unblock the Notifications