ಚುನಾವಣಾ ಗೆಲುವಿನ ಸಂಭ್ರಮದ ಜತೆ ಅಂಬಿ ಜಯಂತೋತ್ಸವ ನಾಳೆ
Recommended Video
ಮಂಡ್ಯ, ಮೇ 28: ರೆಬೆಲ್ ಸ್ಟಾರ್ ಅಂಬರೀಷ್ ಅವರ ಅನುಪಸ್ಥಿತಿಯಲ್ಲಿ ಮೊದಲ ಬಾರಿಗೆ ಅವರ ಜನ್ಮದಿನ ಬಂದಿದೆ. ಬುಧವಾರ (ಮೇ 29) ಅವರ ಜನ್ಮದಿನ. ಅವರು ನಮ್ಮೊಂದಿಗಿಲ್ಲ ಎಂಬ ಕಹಿ ವಾಸ್ತವದೊಂದಿಗೇ ಅವರ ಹುಟ್ಟುಹಬ್ಬದ ಸಂಭ್ರಮ ಆಚರಿಸಲಾಗುತ್ತಿದೆ. ಆ ಸಂಭ್ರಮಕ್ಕೆ ಉಡುಗೊರೆಯಂತೆ ಸುಮಲತಾ ಅಂಬರೀಷ್ ಅವರ ಗೆಲುವು ಒಲಿದಿದೆ.
ಈ ಎರಡೂ ಸಂಭ್ರಮಗಳನ್ನು ಒಟ್ಟಿಗೆ ಆಚರಿಸಲು ಸುಮಲತಾ ನಿರ್ಧರಿಸಿದ್ದಾರೆ. ತಮ್ಮ ಲೋಕಸಭಾ ಚುನಾವಣೆಯ ಕೊನೆಯ ದಿನದಂದು 'ಸ್ವಾಭಿಮಾನಿ ಸಮಾವೇಶ' ನಡೆಸಿದ್ದ ಸುಮಲತಾ ಅಂಬರೀಷ್, ಬುಧವಾರ ತಮ್ಮ ಗೆಲುವಿನ ಖುಷಿಯನ್ನು ಹಂಚಿಕೊಳ್ಳಲು ಮತ್ತು ಅಂಬರೀಷ್ ಅವರ ಜನ್ಮದಿನವನ್ನು ಆಚರಿಸಲು 'ಸ್ವಾಭಿಮಾನಿ ಉತ್ಸವ' ಮತ್ತು 'ಅಂಬಿ ಜಯಂತೋತ್ಸವ' ಆಯೋಜಿಸಿದ್ದಾರೆ.

'ಅಧಿಕಾರ, ಹಣ, ಪಕ್ಷ ಯಾವುದೂ ಇಲ್ಲದೆ ಮಂಡ್ಯದ ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಹೆಜ್ಜೆ ಹಾಕಿದೆ... ಮಂಡ್ಯದ ಜನತೆ ಪಕ್ಷ ಎಲ್ಲವನ್ನೂ ಬದಿಗಿಟ್ಟು ನನ್ನೊಂದಿಗೆ ಹೆಜ್ಜೆ ಹಾಕಿ ನನಗೆ ಅಭೂತಪೂರ್ವ ಜಯ ದೊರಕಿಸಿಕೊಟ್ಟಿದ್ದಾರೆ. ಆ ಜನತೆಗೆ ಪ್ರೀತಿಯಿಂದ ಕೃತಜ್ಞತೆ ಹೇಳುವ ದಿನ' ಎಂದು ಸುಮಲತಾ ತಮ್ಮ ಫೇಸ್ ಬುಕ್ ಪುಟದಲ್ಲಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ಮಾನ್ಯ ಮತ ಬಾಂಧವರೆ,
ದಿನಾಂಕ 29.05.2019 ರ ಬುಧವಾರ ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಮಧ್ಯಾಹ್ನ 2.00 ಗಂಟೆಗೆ * ಅಂಬಿ ಜಯಂತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಚಲನಚಿತ್ರ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಹಾಗೂ ದೊಡ್ಡಣ್ಣ ಮತ್ತು ರಾಕ್ ಲೈನ್ ವೆಂಕಟೇಶ್ ರವರು ಆಗಮಿಸಲಿದ್ದಾರೆ.
'ಮಂಡ್ಯ ಲೋಕಸಭಾ ಸ್ವತಂತ್ರ ಅಭ್ಯರ್ಥಿಯಾದ ಸುಮಲತಾ ಅಂಬರೀಷ್ ಆದ ನನ್ನ ಗೆಲುವನ್ನು ರಾಷ್ಟ್ರ ಮಟ್ಟದಲ್ಲಿ ಹೆಸರಾಗುವಂತೆ ಮಾಡುವಲ್ಲಿ ಶ್ರಮಿಸಿದ ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿಗಳು, ಕನ್ನಡ ಪರ ಹೋರಾಟ ಸಂಘಟನೆಗಳು, ಭಾರತೀಯ ಜನತಾ ಪಾರ್ಟಿ, ಕಾಂಗ್ರೆಸ್ ಕಾರ್ಯಕರ್ತರು, ಹಾಗೂ ವಿಶೇಷವಾಗಿ ಕ್ಷೇತ್ರದ ಮಹಿಳೆಯರಿಗೂ ಮತ್ತು ಪ್ರತ್ಯೇಕವಾಗಿ-ಪರೋಕ್ಷವಾಗಿ, ನಿಷ್ಪಕ್ಷಪಾತವಾಗಿಯೂ ಶ್ರಮಿಸಿದ ಎಲ್ಲಾ ಮತ ಬಾಂಧವರಿಗೂ, ಹಾಗೂ ಎಲ್ಲಾ ಪಕ್ಷದ ಮುಖಂಡರುಗಳಿಗೂ ಹೃದಯಪೂರ್ವಕ ಸುಸ್ವಾಗತ' ಎಂದು ಸುಮಲತಾ ಆಹ್ವಾನಿಸಿದ್ದಾರೆ.












Click it and Unblock the Notifications