ಮಂಡ್ಯದಿಂದ ಸುಮಲತಾ ಅಂಬರೀಶ್ ಸ್ಪರ್ಧೆ : ಯಾರು, ಏನು ಹೇಳಿದರು?
Recommended Video

ಮಂಡ್ಯ, ಫೆಬ್ರವರಿ 04 : ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಅವರು ಕಾಂಗ್ರೆಸ್ ಅಭ್ಯರ್ಥಿಯಾಗಬಹುದು, ಸ್ವತಂತ್ರವಾಗಿ ಕಣಕ್ಕಿಳಿಯಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.
ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡುವುದಿಲ್ಲ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಜೆಡಿಎಸ್‌ನಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಬಹುದು ಎಂಬ ಸುದ್ದಿಗಳು ಹಬ್ಬಿವೆ.
ದಿ.ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದರೆ ಜೆಡಿಎಸ್ ಬೆಂಬಲ ನೀಡಲಿದೆಯೇ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಚಿತ್ರರಂಗದ ಹಿತೈಷಿಗಳು ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎಂದು ಸಲಹೆ ನೀಡಿದ್ದಾರೆ.
ರಾಜ್ಯದ ಹಲವು ನಾಯಕರ ಸುಮಲತಾ ಅವರ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ. ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವುದಿಲ್ಲ ಎಂದು ಜೆಡಿಎಸ್ ನಾಯಕರು ಹೇಳಿದ್ದಾರೆ. ಸುಮಲತಾ ಸ್ಪರ್ಧೆ ಬಗ್ಗೆ ಯಾರು, ಏನು ಹೇಳಿದರೂ ಚಿತ್ರಗಳಲ್ಲಿ ನೋಡಿ.....

ಕಾಂಗ್ರೆಸ್‌ಗೆ ಬಿಟ್ಟುಕೊಡಲ್ಲ
'ಮಂಡ್ಯ ಜಿಲ್ಲೆಯಲ್ಲಿ ಏಳು ಜನ ಜೆಡಿಎಸ್ ಶಾಸಕರು ಇದ್ದಾರೆ. ಕಾಂಗ್ರೆಸ್‌ಗೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ. ಮಂಡ್ಯದಲ್ಲಿ ಯಾರು ಸ್ಪರ್ಧಿಸಬೇಕು ಎಂದು ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ' ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ. ಪರೋಕ್ಷವಾಗಿ ಕಾಂಗ್ರೆಸ್‌ನಿಂದ ಸುಮಲತಾ ಅಂಬರೀಶ್ ಸ್ಪರ್ಧಿಸಿದರೆ ಬೆಂಬಲ ನೀಡುವುದಿಲ್ಲ ಎಂಬ ಸಂದೇಶ ರವಾನಿಸಿದರು.

ಸುಮಲತಾ ಮಂಡ್ಯದ ಗೌಡತಿ ಅಲ್ಲ
ಜೆಡಿಎಸ್ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು, 'ಅಂಬರೀಶ್ ಬದುಕಿದ್ದಾಗ ಸ್ಪಷ್ಟವಾಗಿ ಹೇಳಿದ್ದರು ನನ್ನ ಮನೆಗೆ ರಾಜಕಾರಣ ಕೊನೆಯಾಗಲಿ ಎಂದು. ಸುಮಲತಾ ಎಂದೂ ಕೂಡಾ ಮಂಡ್ಯದ ಗೌಡತಿ ಅಲ್ಲ, ಅವರ ಮೂಲ ಆಂಧ್ರಪ್ರದೇಶ. ರಮ್ಯಾರನ್ನು ನೋಡಿ ಆಗಿದೆ. ರಾಜಕಾರಣ ಹುಡುಗಾಟ ಅಲ್ಲ. ಜನರ ನೋವಿಗೆ ಸ್ಪಂದಿಸುವವರು ಬೇಕು. ಎಲ್ಲೋ ಕೂತು ಸ್ಪರ್ಧೆ ಮಾಡುತ್ತೇನೆ ಎನ್ನುವವರನ್ನು ಮಂಡ್ಯದ ಜನರು ಗೆಲ್ಲಿಸಲ್ಲ' ಎಂದರು.

ಕಾಂಗ್ರೆಸ್ ಮಂಡ್ಯ ಕೇಳಲು ಯಾವ ಅರ್ಥವಿದೆ
'ಕಾಂಗ್ರೆಸ್‌ನವರು ಮಂಡ್ಯವನ್ನು ಕೇಳಲು ಯಾವ ಅರ್ಥವಿದೆ. ಏಳಕ್ಕೆ ಏಳು ಕ್ಷೇತ್ರದಲ್ಲೂ ಜೆಡಿಎಸ್ ಗೆದ್ದಿದೆ. ಕ್ಷೇತ್ರವನ್ನು ಹೇಗೆ ಬಿಟ್ಟುಕೊಡಲು ಸಾಧ್ಯ. ಸೀಟು ಕೆಳೋದು ಅವರ ಧರ್ಮ. ಕೊಡೋದು ಬಿಡೋದು ಜೆಡಿಎಸ್ ನಾಯಕರಿಗೆ ಸೇರಿದ್ದು, ನಿಖಿಲಾ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರದಲ್ಲಿ ನನಗೆ ಮಾಹಿತಿ ಇಲ್ಲ' ಎಂದು ಸಾರಿಗೆ ಸಚಿವ, ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.

ಕಾಂಗ್ರೆಸ್ ಸ್ಪರ್ಧೆ ಮಾಡುವುದಿಲ್ಲ
ಬೆಳಗಾವಿಯಲ್ಲಿ ಮಾತನಾಡಿದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು, 'ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟಿದ್ದು, ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆ ಮಾಡುವುದಿಲ್ಲ. ಯಾವ ಅಭ್ಯರ್ಥಿ ಸ್ಪರ್ಧೆ ಮಾಡಬೇಕು ಎಂಬುದನ್ನು ಜೆಡಿಎಸ್ ತೀರ್ಮಾನಿಸುತ್ತದೆ' ಎಂದು ಹೇಳಿದರು.

ಬಿಜೆಪಿಯಿಂದ ಸ್ಪರ್ಧಿಸಲು ಹುಚ್ಚು ಹಿಡಿದಿದೆಯಾ?
'ಅಂಬರೀಶ್ ಅವರ ಪತ್ನಿ ಸುಲಮತಾ ಅಂಬರೀಶ್ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಲು ಅವರಿಗೆ ಹುಚ್ಚು ಹಿಡಿದಿದೆಯಾ. ಸುಮಲತಾ ಅವರ ಪತಿ ಕಾಂಗ್ರೆಸ್‌ನಲ್ಲಿದ್ದರು. ಅವರು ಯಾಕೆ ನಮ್ಮ ಪಕ್ಷಕ್ಕೆ ಬರುತ್ತಾರೆ. ಅಂಥದ್ದು ಅವರಿಗೆ ಏನಾಗಿದೆ. ಆಡಳಿತ ಪಕ್ಷ ಬಿಟ್ಟು ವಿಪಕ್ಷದ ಅಭ್ಯರ್ಥಿಯಾಗಿ ಬರಲು ಅವರಿಗೆ ಹುಚ್ಚೆ?' ಎಂದು ಬಿಜೆಪಿ ನಾಯಕ ಡಾ.ಸಿದ್ದರಾಮಯ್ಯ ಪ್ರಶ್ನಿಸಿದರು.












Click it and Unblock the Notifications