ಒತ್ತಡವೇ ದೊಡ್ಡ ಮಾನಸಿಕ ಕಾಯಿಲೆ: ಡಾ.ಸಿ.ಎನ್ ಮಂಜುನಾಥ್ ಆತಂಕ
ಮಂಡ್ಯ, ಆಗಸ್ಟ್ 04: ಒತ್ತಡವೆಂಬುದೇ ಪ್ರಸ್ತುತದಲ್ಲಿ ದೊಡ್ಡ ಮಾನಸಿಕ ಕಾಯಿಲೆಯಾಗಿ ಬೆಳೆಯುತ್ತಿದೆ ಎಂದು ಖ್ಯಾತ ಹೃದಯ ತಜ್ಞ ಡಾ. ಸಿ.ಎನ್. ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್, ಅಭಿನವ ಭಾರತಿ ಶಿಕ್ಷಣ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಅನಂತಕುಮಾರ ಸ್ವಾಮೀಜಿ ಅವರ 87ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಶ್ರೀಅನಂತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಚಿಕ್ಕಂದಿನಿಂದಲೇ ಮಕ್ಕಳ ಮೇಲೆ ಒತ್ತಡ ಹೇರಿದರೆ ಕಷ್ಟವಾಗುತ್ತದೆ. ಶಾಲಾ ವೇಳಾ ಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ತರುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಎಲ್‌ಕೆಜಿ, ಯುಕೆಜಿ ಹಾಗೂ ಮೊದಲನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 10 ಗಂಟೆಗೆ ಶುರುವಾಗಿ 12.30 ಗಂಟೆಗೆ ಬಿಡಬೇಕು. ತಾಯಂದಿರು ಸಹ ಹಲವು ಆರೋಗ್ಯದ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಚಿಕ್ಕ ಮಕ್ಕಳಿಗೆ ಶಾಲಾ ಭಯವನ್ನು ತುಂಬುವುದರಿಂದ ಇಬ್ಬರ ಮೇಲೂ ಆರೋಗ್ಯದ ಪರಿಣಾಮ ಬೀರುತ್ತದೆ. ಶಿಕ್ಷಣವಷ್ಟೇ ಮುಖ್ಯವಲ್ಲ ಭರವಸೆ ನಂಬಿಕೆಯನ್ನು ಈ ಶಿಕ್ಷಣದಲ್ಲಿ ತರುವಂತಹ ಯೋಜನೆಗಳು ಮುಂದಾದರೂ ರೂಪಗೊಳ್ಳಲಿ ಎಂದು ಸಲಹೆ ನೀಡಿದರು.
ಪ್ರಶಸ್ತಿ ಪ್ರದಾನ ಮಾಡಿದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕಾರ್ಯದರ್ಶಿ ಪಿ.ಜಿ.ಆರ್.ಸಿಧ್ಯಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮರೆತಿರುವ ಕೃಷಿಕರ ಸಂಸ್ಕೃತಿ ವೈಭವ ಮರುಕಳಿಸಲು ಬಾಲಗಂಗಾಧರನಾಥ ಸ್ವಾಮೀಜಿ ಅವರು ಹಲವು ಕಾರ್ಯಕ್ರಮಗಳನ್ನು ನಡೆಸಿ ಜನಮನ್ನಣೆಗಳಿಸಿದ್ದರು, ಇದು ಸಂಸ್ಕಾರ ಕಾರ್ಯಕ್ರಮವೂ ಹೌದು ಎಂದು ಶ್ಲಾಘಿಸಿದರು.
ಸೇವೆಯೇ ಪರಮಧರ್ಮ ಎಂಬುದನ್ನು ನಾವು ಕೇವಲ ಬಾಯಲ್ಲಿ ಹೇಳುತ್ತೇವೆ. ಆದರೆ ಹಲ್ಲೇಗೆರೆ ಮೂರ್ತಿ ಅವರು ಇದರ ಮಾತಿನಂತೆಯೇ ಅತ್ಯುತ್ತಮವಾಗಿ ಸಾಮಾಜಿಕ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ. ಅವರು ಗಳಿಸಿರುವ ಸಂಪತ್ತಿನಲ್ಲಿ ಸಮಾಜಕ್ಕೆ ಒಂದಿಷ್ಟು ಖರ್ಚು ಮಾಡುವ ಮೂಲಕ ಸೇವಾಮನೋಭಾವ ಮೆರೆಯುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಸ್ಮರಿಸಿದರು.

ಮನುಷ್ಯನ ಪರಿವರ್ತನೆಗೆ ಬಾಲಗಂಗಾಧರನಾಥ ಸ್ವಾಮೀಜಿ ಅವರು ಪ್ರಯತ್ನಿಸಿದರು. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಮರೆತಿರುವ ಸಂಸ್ಕೃತಿಯನ್ನು ಹಾಗೂ ಕೃಷಿಕರ ಸಂಸ್ಕೃತಿಯು ಮತ್ತೆ ಮರುಕಳಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಸಂಸ್ಕಾರ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ, ಹಳ್ಳಿಗಳ ಪರಿಸ್ಥಿತಿ ಏನಾಗುತ್ತಿದೆ ಎಂಬುದನ್ನು ಪ್ರಸ್ತುತದಲ್ಲಿ ನೋಡುತ್ತಿದ್ದೇವೆ, ಆದರೆ ಇವರು ಮನುಷ್ಯರನ್ನ ಬದಲಿಸುವ ಕೆಲಸ ಮಾಡಿದ್ದರು ಎಂದರು.
ಅವರ ಮಾರ್ಗದಲ್ಲಿಯೇ ಪುರುಷೋತ್ತಮನಂದನಾಥ ಸ್ವಾಮೀಜಿ ಅವರು ಶ್ರೀ ಅನಂತ ಪ್ರಶಸ್ತಿ ಸ್ವೀಕಾರ ಮಾಡಿರುವುದು ಪ್ರಶಸ್ತಿಗೇ ಶಕ್ತಿ ಬಂದಂತಾಗಿದೆ. ಆರೋಗ್ಯ ಕ್ಷೇತ್ರ ಏನಾಗಿದೆ, ವೈದ್ಯರು ನಾರಾಯಣ ಸ್ವರೂಪ ಎಂಬ ಮಾತು ಹೇಳುತ್ತಾರೆ. ರೈತಾಪಿ ವರ್ಗದಿಂದ ಬಂದಿರುವ ಡಾ.ಮಂಜುನಾಥ್ ಅವರು ವಿಶ್ವದಲ್ಲಿಯೇ ಹೃದಯ ತಜ್ಞರಾಗಿ ಯಶ ಕಂಡವರು. ಬೆಂಗಳೂರಿನ ಜಯದೇವ ಆಸ್ಪತ್ರೆಯು ಜನಗಳ ಆಸ್ಪತ್ರೆಯಾಗಿ ಉಳಿದಿದೆ, ವಿದೇಶಗಳಿಂದಲೂ ಚಿಕಿತ್ಸೆಗೆ ಬರುತ್ತಾರೆ ಎಂದು ಶ್ಲಾಘಿಸಿದರು.
ಪ್ರಕೃತಿಯನ್ನು ಮೊದಲು ಪ್ರೀತಿಸಬೇಕು. ಮರಗಳು, ಭೂಮಿ, ನೀರು, ಗಾಳಿ ಇಲ್ಲದೇ ಹೋದರೆ ನಮ್ಮ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ, ಈ ಪ್ರಶಸ್ತಿಗೆ ಯೋಗ್ಯವಾದ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟದ ಕೆಲಸವಾಗಿದೆ. ಆದರೂ ಸಹ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ಪ್ರಶಸ್ತಿ ನೀಡಿದ ಮಾತ್ರಕ್ಕೆ ಯಾರೂ ಮುಖ್ಯ ಅಥವಾ ಅಮುಖ್ಯರಾಗುವುದಿಲ್ಲ, ಸೇವಾ ಮನೋಭಾವ ಎಂಬುದು ನಿರಂತರವಾಗಿರಬೇಕು ಎಂದು ಸಲಹೆ ನೀಡಿದರು.
ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತಶಿವಯೋಗಿ ಸ್ವಾಮೀಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಡಾ.ಸಿ.ಎನ್.ಮಂಜುನಾಥ್, ಯೋಗಾತ್ಮ ಶ್ರೀಹರಿ ಅವರಿಗೆ ಶ್ರೀ ಅನಂತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಕೋಪ್ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಡಿ.ಹಲ್ಲೇಗೆರೆ ಮೂರ್ತಿ, ಟ್ರಸ್ಟ್‌ನ ಅಧ್ಯಕ್ಷ ಶಿವಮೂರ್ತಿ ಭಾಗವಹಿಸಿದ್ದರು.












Click it and Unblock the Notifications