ಕಳೆದ ವರ್ಷಕ್ಕಿಂತ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ದಸರಾ ಆಚರಣೆ
ಅಂಬಾರಿ ಮೆರವಣಿಗೆಗೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಮಾತನಾಡಿ ಶ್ರೀರಂಗಪಟ್ಟಣ ದಸರಾವು ಮೈಸೂರಿಗಿಂತ ಮೊದಲು ಪ್ರಾರಂಭವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಮಾಡಲಾಗುತ್ತಿದೆ. ಆಚರಣೆ ಮಾಡಲಾಗುತ್ತಿದೆ. ಸಂಜೆ ವೇದಿಕೆ ಕಾರ್ಯಕ್ರಮಗಳಿದ್ದು, 4 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜಿಸಿರುವುದರಿಂದ ಬಹಳ ಆಕರ್ಷಣೀಯವಾಗಿದೆ. ಆಹಾರ ಮಳಿಗೆ ಹಾಗೂ ಜೊತೆಗೆ ದಸರಾ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಹೇಳಿ ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ದಸರಾ ಹಬ್ಬವನ್ನು ಕಣ್ತುಂಬಿಕೊಳ್ಳಲು ಸಾಧ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ , ಸಾರ್ವಜನಿಕರು ದಸರಾ ಹಬ್ಬ ಕಣ್ತುಂಬಿಕೊಳ್ಳಬೇಕೆಂದರೆ ಮೈಸೂರು, ಶ್ರೀರಂಗಪಟ್ಟಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವ ದಸರಾ ಹಬ್ಬವನ್ನು ನೋಡಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ನಾಡಹಬ್ಬ ದಸರಾವನ್ನು ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದರು.
ಮೈಸೂರು ದಸರಾ ಪ್ರಾರಂಭವಾಗುವ ಮುಂಚೆ ಶ್ರೀರಂಗಪಟ್ಟಣದಲ್ಲಿ ದಸರಾ ಹಬ್ಬವು ಆರಂಭವಾಗಿತ್ತು. ವಿಜಯನಗರ ಸಾಮ್ರಾಜ್ಯವು ಅಸ್ತಿತ್ವದಲ್ಲಿದ್ದಾಗ ವಿಜಯನಗರದ ದಸರಾ ಜೊತೆಗೆ ಶ್ರೀರಂಗಪಟ್ಟಣದಲ್ಲೂ ಕೂಡ ದಸರಾ ಹಬ್ಬವನ್ನು ಆಚರಿಸಲಾಗುತ್ತಿತ್ತು. ಶ್ರೀರಂಗಪಟ್ಟಣದಿಂದ ರಾಜ ಮನೆತನವು ಮೈಸೂರಿಗೆ ಹೋದ ನಂತರ ಶ್ರೀರಂಗಪಟ್ಟಣದಿಂದ ಮೈಸೂರಿಗೆ ದಸರಾ ಹಬ್ಬವನ್ನು ವರ್ಗಾಯಿಸಲಾಯಿತು.
ನೂರಾರು ವರ್ಷಗಳ ಇತಿಹಾಸವನ್ನು ನೆನಪಿಸುವ ಶ್ರೀರಂಗಪಟ್ಟಣ ದಸರಾವನ್ನು ಮತ್ತೆ ಆಚರಿಸಲು ಶುರು ಮಾಡಲಾಯಿತು. ಶ್ರೀರಂಗಪಟ್ಟಣ ದಸರಾ ಆಚರಣೆ ಪ್ರಾರಂಭವಾದ ನಂತರ ಮತ್ತೊಮ್ಮೆ ಶ್ರೀರಂಗಪಟ್ಟಣ ದಸರಾ ವೈಭವವನ್ನ ಕಾಣಬಹುದಾಗಿದೆ. ವಿಜಯದಶಮಿಯು ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡಲಿ, ಒಳ್ಳೆಯದಕ್ಕೆ ಯಾವಾಗಲೂ ಗೆಲುವಿರಲಿ ಎಂದು ಶುಭ ಹರೈಸಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ ಶ್ರೀರಂಗಪಟ್ಟಣ ದಸರಾ ಹಬ್ಬವು ವಿಜೃಂಭಣೆ ಹಾಗೂ ಬಹಳ ಉತ್ಸಾಹದಿಂದ ಆಚರಿಸಲಾಗುತ್ತಿದೆ. ದಸರಾ ಹಬ್ಬವು ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಬ್ಬವಾಗಿದ್ದು, ಬಹಳ ಹೆಮ್ಮೆಯಿಂದ ಈ ಪರಂಪರೆಯನ್ನು ಉಳಿಸಿಕೊಂಡು ಹೋಗಲಾಗುತ್ತಿದೆ.
ಎಲ್ಲ ಜಾತಿ, ಜನಾಂಗ, ಭಾಷೆಯ ಜನರು ವಿವಿಧ ಕಡೆಗಳಿಂದ ಕೂಡ ದಸರಾ ಹಬ್ಬವನ್ನು ವೀಕ್ಷಿಸಲು ಬರುವುದು ಸಂತೋಷದ ವಿಷಯವಾಗಿದೆ. ಸೌಹಾರ್ದ ರೀತಿಯಲ್ಲಿ ದಸರಾ ಹಬ್ಬವು ನಡೆಯುತ್ತದೆ. ಎಲ್ಲರಿಗೂ ಶುಭವಾಗಲಿ ಎಂದು ಬಯಸುತ್ತೇನೆ ಎಂದರು.
ಕುದುರೆ ನೋಡಿ ಓಡಾಡಿದ ಆನೆ
ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದ ದಸರಾ ಆನೆ 2 ಬಾರಿ ಬೆಚ್ಚಿಬಿದ್ದು ರಸ್ತೆಯುದ್ದಕ್ಕೂ ಒಡಾಡಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಮಾವುತ ತಕ್ಷಣವೇ ಆನೆಯನ್ನು ಸಮಾಧಾನ ಪಡಿಸಿದ್ದರಿಂದ ಘಟಿಸಬಹುದಾಗಿದ್ದ ದೊಡ್ಡದೊಂದು ಅನಾಹುತ ತಪ್ಪಿ ಹೋಗಿದೆ.
ಇಲ್ಲಿನ ದಸರಾ ಉತ್ಸವಕ್ಕೆ ಪ್ರತಿವರ್ಷವೂ ಮೈಸೂರಿನಿಂದ ಮೂರು ಆನೆಗಳು ಬರುತ್ತವೆ. ಈ ಬಾರಿ ಹಿರಣ್ಯ, ಲಕ್ಷ್ಮೀ ಮತ್ತು ಮಹೇಂದ್ರ ಆನೆಗಳು ಗುರುವಾರ ಸಂಜೆ ಆಗಮಿಸಿದ್ದವು. ಇದರಲ್ಲಿ ಹಿರಣ್ಯ ಎಂಬ ಆನೆ ಗುರುವಾರ ರಾತ್ರಿ ಅಲ್ಲಿದ್ದ ಬಿಳಿ ಕುದುರೆಯನ್ನು ನೋಡಿ ಬೆಚ್ಚಿ ಬಿದ್ದಿತ್ತು. ಆ ತಕ್ಷಣವೇ ಮಾವುತ ಆನೆಯನ್ನು ಸಮಾಧಾನ ಪಡಿಸಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು.












Click it and Unblock the Notifications