Cauvery Aarti: ಗಂಗಾರತಿ ಮಾದರಿಯಲ್ಲಿ ಜೀವನದಿ ಕಾವೇರಿಗೆ ಆರತಿ
ಮಂಡ್ಯ, ಸೆಪ್ಟೆಂಬರ್ 22: ಉತ್ತರ ಪ್ರದೇಶ ರಾಜ್ಯದಲ್ಲಿ ನಡೆಯುವ 'ಗಂಗಾರತಿ' ಬಹಳ ಪ್ರಸಿದ್ಧಿ ಪಡೆದಿದೆ. ಇದನ್ನು ವೀಕ್ಷಣೆ ಮಾಡಲು ದೇಶ, ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಜೀವನದಿ ಕಾವೇರಿಗೆ ಆರತಿ ನಡೆಯಲಿದೆ. ಇದಕ್ಕಾಗಿ ಕಾಂಗ್ರೆಸ್ ನಾಯಕರ ನಿಯೋಗ ಪರಿಶೀಲನೆ ನಡೆಸಿದೆ. ಶೀಘ್ರವೇ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ.
ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ನಡೆಸಲು ಹರಿದ್ವಾರ ಮತ್ತು ವಾರಣಾಸಿಯಲ್ಲಿ ಅಧ್ಯಯನ ನಡೆಸಲಾಗಿದೆ. ವರದಿ ಸಿದ್ದಪಡಿಸಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ಗೆ ನೀಡಲಾಗುತ್ತದೆ. ಬಳಿಕ ಸಭೆ ನಡೆಸಿ, ಕಾವೇರಿ ಆರತಿಯ ದಿನಾಂಕ ಹಾಗೂ ಸ್ಥಳ ನಿಗದಿಪಡಿಸಲಾಗುವುದು" ಎಂದು ಹೇಳಿದ್ದಾರೆ.

ಗಂಗಾರತಿ ವೀಕ್ಷಣೆ ಮಾಡಲು ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ನರೇಂದ್ರ ಸ್ವಾಮಿ, ಶಿವಲಿಂಗೇಗೌಡ, ರಮೇಶ್ ಬಂಡಿ ಸಿದ್ದೇಗೌಡ, ಉದಯ್ ಗೌಡ, ರವಿಕುಮಾರ್, ಬಾಲಕೃಷ್ಣ ಮಾಗಡಿ, ದರ್ಶನ್ ನಾರಾಯಣ್, ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಸ್ಟಾರ್ ಚಂದ್ರು, ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ತೆರಳಿದ್ದರು.
ಹರಿದ್ವಾರ, ವಾರಣಾಸಿಯಲ್ಲಿ ಐತಿಹಾಸಿಕ ಗಂಗಾರತಿಯನ್ನು ಕಾಂಗ್ರೆಸ್ ನಾಯಕರ ನಿಯೋಗ ಪರಿಶೀಲನೆ ನಡೆಸಿದೆ. ಐತಿಹಾಸಿಕ ಗಂಗಾರತಿಯ ವೀಕ್ಷಣೆ ನಡೆಸಿ ನಿಯೋಗ ವಾಪಸ್ ಆಗಿದೆ. ಎರಡು ದಿನಗಳ ಈ ಅಧ್ಯಯನ ಪ್ರವಾಸದಲ್ಲಿ ನಿಯೋಗವು ಗಂಗಾರತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದೆ.
ಸಚಿವ ಎನ್. ಚಲುವರಾಯಸ್ವಾಮಿ, "ಹರಿದ್ವಾರದ ಗಂಗಾರತಿಗೆ 108 ವರ್ಷದ ಇತಿಹಾಸವಿದ್ದು, ಕೋಪರೇಟಿವ್ ಆಕ್ಟ್ ಅಡಿ ಸೊಸೈಟಿ ಮಾಡಿ ಗಂಗಾರತಿ ನಡೆಸುತ್ತಿದ್ದಾರೆ. ಕಾಶಿಯಲ್ಲಿ ಟ್ರಸ್ಟ್ ಮೂಲಕ 35 ವರ್ಷಗಳಿಂದ ಗಂಗಾರತಿ ನಡೆಯುತ್ತಿದೆ. ನಾಡಿನ ಜನತೆಯ ಜೀವನಾಡಿಯಾಗಿರುವ ಕಾವೇರಿಯನ್ನು ದೇವರ ರೂಪದಲ್ಲಿ ಪೂಜಿಸುತ್ತೇವೆ. ಭಾಗಂಡಲದಿಂದ ಹಿಡಿದು ವಿವಿಧ ಸ್ಥಳಗಳಲ್ಲಿ ಆರತಿ ಮಾಡುವ ಬಗ್ಗೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.
ದಸರಾ ಸಮಯದಲ್ಲಿಯೇ ಕಾವೇರಿ ಆರತಿ: ಈ ಬಾರಿ ಉತ್ತಮ ಮಳೆಯಾದ ಕಾರಣ ಕಾವೇರಿ ನದಿ ತುಂಬಿ ಹರಿಯುತ್ತಿದೆ. ದಸರಾ ಸಮಯಲ್ಲಿಯೇ ಮಂಡ್ಯದಲ್ಲಿ ಜೀವನದಿ ಕಾವೇರಿಗೆ ಆರತಿ ಬೆಳಗುವ ನಿರೀಕ್ಷೆ ಇದೆ. ದಿನಾಂಕದ ಕುರಿತು ಇನ್ನೂ ಅಂತಿಮ ತೀರ್ಮಾನವನ್ನು ಮಾಡಿಲ್ಲ.
ಮೈಸೂರು ದಸರಾಕ್ಕೆ ಮುಂಚಿತವಾಗಿ ಶ್ರೀರಂಗಪಟ್ಟಣ ದಸರಾ ನಡೆಯಲಿದೆ. ಈ ಸಮಯದಲ್ಲಿಯೇ ಮಂಡ್ಯ ಜನರ ಜೀವನಾಡಿ ಕಾವೇರಿ ನದಿಗೆ ಆರತಿಯನ್ನು ಬೆಳಗಲಾಗುತ್ತದೆ ಎಂಬ ಮಾಹಿತಿ ಇದೆ. ಅಕ್ಟೋಬರ್ 4 ರಿಂದ 7 ವರೆಗೆ ಶ್ರೀರಂಗಪಟ್ಟಣ ದಸರಾವನ್ನು ಅರ್ಥಪೂರ್ಣವಾಗಿ ಆಚರಿಸುವ ಕುರಿತು ಈಗಾಗಲೇ ತೀರ್ಮಾನ ಮಾಡಲಾಗಿದೆ.
ರಾಜ್ಯದಲ್ಲಿ ಈಗಾಗಲೇ ಗಂಗಾರತಿ ಮಾದರಿಯಲ್ಲಿ ತುಂಗಾ ನದಿಗೆ ಆರತಿಯನ್ನು ಮಾಡಲಾಗಿದೆ. ಈಗ ಮಂಡ್ಯದಲ್ಲಿ ಕಾವೇರಿ ನದಿಗೆ ಆರತಿ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಾವೇರಿ ಆರತಿ ಎಲ್ಲಿ ನಡೆಯಲಿದೆ?, ದಿನಾಂಕ ಯಾವುದೂ ಎಂದು ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತದೆ.
ಕೊಡಗು ಜಿಲ್ಲೆಯಲ್ಲಿ ಹುಟ್ಟುವ ಕಾವೇರಿ ನದಿ ಬಳಿಕ ತಮಿಳುನಾಡು ಸೇರುತ್ತದೆ. ಎರಡೂ ರಾಜ್ಯಗಳಲ್ಲಿ ನದಿಯನ್ನು ದೇವರಂತೆ ಪೂಜಿಸಲಾಗುತ್ತದೆ. ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಆಗಾಗ ಉಭಯ ರಾಜ್ಯಗಳ ನಡುವೆ ವಿವಾದವೂ ಉಂಟಾಗುತ್ತದೆ.
ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ನಡೆಯುತ್ತದೆ. ತೀರ್ಥೋದ್ಭವ ಸಂದರ್ಭದಲ್ಲಿ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು ಕಾವೇರಿ ಮಾತೆಗೆ ನಮಿಸಲು ಆಗಮಿಸುತ್ತಾರೆ. ಈ ವರ್ಷ ಅಕ್ಟೋಬರ್ 17ರಂದು ಬೆಳಗ್ಗೆ 7.40 ಗಂಟೆಗೆ ಪವಿತ್ರ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿಯಾಗಿದೆ.












Click it and Unblock the Notifications