ಅಪ್ಪನ ಆಸ್ಪತ್ರೆ ಬಿಲ್ ಪಾವತಿಸದೆ ಮಗ ಆತ್ಮಹತ್ಯೆ, ಇತ್ತ ಅಪ್ಪನೂ ಸಾವು
ಮಂಡ್ಯ, ಸೆಪ್ಟೆಂಬರ್ 27: ಅನಾರೋಗ್ಯ ಪೀಡಿತ ಅಪ್ಪನ ಆಸ್ಪತ್ರೆ ಬಿಲ್ ಪಾವತಿಸಲಾಗದ ಅಸಹಾಯಕ ಮಗ ನೇಣಿಗೆ ಕೊರಳೊಡ್ಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಗ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಆಸ್ಪತ್ರೆಯ ಬೆಡ್ ಮೇಲೆ ಅಪ್ಪನೂ ಪ್ರಾಣ ಬಿಟ್ಟಿದ್ದಾನೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದ ಮಂಜು (25) ಅವರು ಅನಾರೋಗ್ಯ ಪೀಡಿತರಾಗಿದ್ದ ತನ್ನ ತಂದೆ ಈರಣ್ಣ ಶೆಟ್ಟಿ (50) ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು.
ಕೆಲವು ದಿನಗಳಿಂದ ವೈದ್ಯರು ಚಿಕಿತ್ಸೆ ನೀಡಿದ್ದರು, ಈ ನಡುವೆ ಆಸ್ಪತ್ರೆ ಬಿಲ್ 2 ಲಕ್ಷ ರೂಪಾಯಿ ದಾಟಿತ್ತು. ಆದರೆ ಇರುವುದೆಲ್ಲವನ್ನೂ ಈಗಾಗಲೇ ಅಪ್ಪನ ಚಿಕಿತ್ಸೆಗೆ ವ್ಯಯ ಮಾಡಿದ್ದ ಮಂಜು ಆಸ್ಪತ್ರೆ ಬಿಲ್ ಕಟ್ಟಲಾಗದೆ ಸೆಪ್ಟೆಂಬರ್ 26ರ ರಾತ್ರಿ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತನ್ನ ಚಿಕಿತ್ಸೆಗೆ ಹಣ ಹೊಂದಿಸಲಾಗದ ಅಸಹಾಯಕತೆಯಲ್ಲಿ ಪ್ರಾಣವನ್ನೇ ತೆತ್ತ ಮಗನ ನೆನೆದು ಇತ್ತ ಆಸ್ಪತ್ರೆಯ ಹಾಸಿಗೆಯ ಮೇಲಿದ್ದ ಅಪ್ಪ ಈರಣ್ಣ ಶೆಟ್ಟಿ ಸಹ ಜೀವ ಬಿಟ್ಟಿದ್ದಾರೆ.
ಈ ಹೃದಯ ಕಲುಕುವ ವಿಷಯ ತಿಳಿದ ಬೂಕನಕೆರೆ ಗ್ರಾಮಸ್ಥರೇ ಆಸ್ಪತ್ರೆ ಬಿಲ್ ಪಾವತಿಸಿ ಈರಣ್ಣ ಅವರ ಶವವನ್ನು ಮನೆಗೆ ತಂದಿದ್ದಾರೆ. ಅಪ್ಪ-ಮಗ ಇಬ್ಬರನ್ನೂ ಒಟ್ಟಿಗೆ ಸಂಸ್ಕಾರ ಮಾಡಲಾಗುತ್ತಿದೆ. ಕುಟುಂಬದ ಆಧಾರವಾಗಬೇಕಿದ್ದ ಇಬ್ಬರನ್ನೂ ಕಳೆದುಕೊಂಡ ಆ ಕುಟುಂಬದ ದುಃಖ ಅರಣ್ಯ ರೋದನವಾಗಿದೆ.












Click it and Unblock the Notifications