ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿಯನ್ನು ಕಳಿಸೋಣ; ಸಿದ್ದರಾಮಯ್ಯ
ಮಂಡ್ಯ, ಅಕ್ಟೋಬರ್ 28: "ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿಯವರನ್ನು ಮುಂಬಾಗಿಲಿನಿಂದ ಕಳುಹಿಸಿಬಿಡೋಣ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತದಾರಿಗೆ ಕರೆ ನೀಡಿದ್ದಾರೆ.
ಮಂಡ್ಯ ತಾಲ್ಲೂಕಿನ ತಿರುಮಲಾಪುರ ಗ್ರಾಮದಲ್ಲಿ ಶ್ರೀ ಹುಲಿಯೂರಮ್ಮ(ಹಳೇಊರಮ್ಮ) ದೇವಿ ದೇವಾಲಯ ಸೇವಾ ಸಮಿತಿ ಟ್ರಸ್ಟ್ ಸಹಯೋಗದಲ್ಲಿ ಶ್ರೀ ಹುಲಿಯೂರಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಉದ್ಘಾಟನಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, "ಪರಿಶಿಷ್ಠ ಜಾತಿ, ವರ್ಗ, ಹಿಂದುಳಿದವರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದೇವೆ. ಕೃಷಿ ಭಾಗ್ಯವನ್ನು ನಿಲ್ಲಿಸಿದ್ದಾರೆ. ಇವರು ಅಧಿಕಾರಕ್ಕೆ ಬಂದಿರುವುದೇ ಹಿಂಬಾಗಿಲಿನಿಂದ. ಹಿಂಬಾಗಿಲಿಂದ ಬಂದವರನ್ನು ಮುಂಬಾಗಿಲಿಂದಲೇ ಓಡಿಸೋಣ. ಇಂತಹವರು ಮತ್ತೆ ಅಧಿಕಾರಕ್ಕೆ ಬರಬೇಕೇ?" ಎಂದು ಪ್ರಶ್ನಿಸಿದರು.
"ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೆ, ಆದರೆ, ಯಾರಿಂದಲೂ ಚೀ, ಥೂ ಎಂದು ಅನ್ನಿಸಿಕೊಂಡು ಆಡಳಿತ ನಡೆಸಿಲ್ಲ, 165 ಭರವಸೆಗಳನ್ನು ನೀಡಿದ್ದೆವು, ಇದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. 30ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದ್ದೇವೆ, ಈ ಸಮಾಜದಲ್ಲಿರುವ ಎಲ್ಲ ಹಿಂದುಳಿದ ಬಡವರಿಗೆ ಅಂದರೆ, ಕೇವಲ ಕುರುಬರಿಗಷ್ಟೇ ಮಾಡಲಿಲ್ಲ, ಮುಸ್ಲಿಂ, ಒಕ್ಕಲಿಗರು, ಬ್ರಾಹ್ಮಣರು, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಜಾತಿ ಬಡವರಿಗೆ ಏಳು ಕೆ.ಜಿ.ಅಕ್ಕಿಯನ್ನು ಉಚಿತವಾಗಿ ನೀಡಿದೆವು, ಶಾಲಾ ಮಕ್ಕಳಿಗೆ ಉಚಿತವಾಗಿ ಹಲವು ಸೌಲಭ್ಯ, ರೈತರಿಗೆ 50,000 ಸಾಲ ಮನ್ನಾ ಮಾಡಿದೆವು ಇವೆಲ್ಲವನ್ನೂ ಕೇವಲ ಒಂದು ಜಾತಿಗೆ ನೀಡಲಿಲ್ಲ" ಎಂದು ಹೇಳಿದರು.

ವಿದ್ಯಾಸಿರಿ ಯೋಜನೆ ನಿಲ್ಲಿಸಿದ್ದಾರೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿದ್ಯಾರ್ಥಿ ವೇತನ ಕೊಡಲಿಲ್ಲ, ಇವರ ಯೋಗ್ಯತೆಗೆ, ಹಿಂದುಳಿದ ಜಾತಿ ಮಕ್ಕಳಿಗೆ ಪ್ರತಿ ತಿಂಗಳು ವಿದ್ಯಾಸಿರಿ ಯೋಜನೆಯನ್ನು 1,500 ಕೊಡುವುದನ್ನು ಜಾರಿಗೆ ತಂದಿದ್ದೆ, ಈಗ ಎಲ್ಲವನ್ನೂ ನಿಲ್ಲಿಸಿರುವ ಬಿಜೆಪಿಯವರಿಗೆ ಮೀಸಲಾತಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೊಸ ಕಾರ್ಖಾನೆ
ಮೈಷುಗರ್ ಕಾರ್ಖಾನೆಗೆ 50 ಕೋಟಿ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದರೂ ಕೊಡಲಿಲ್ಲ, ಅನೇಕ ಮನವಿಗಳನ್ನು ಮಾಡಿದರೂ ಸಹ ನೀಡಲಿಲ್ಲ, ಕಬ್ಬಿನ ಬೆಲೆ ಬಿದ್ದಿರುವಾಗ 1,800 ಕೋಟಿ ರೂ ನೀಡಿದ್ದೆ, ಈಗ ಹೆಚ್ಚಿನ ಬೆಲೆಗಾಗಿ ರೈತರು ಧರಣಿ ಮಾಡುತ್ತಿದ್ದಾರೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಕಾರ್ಖಾನೆಯನ್ನು ಆರಂಭಿಸಿ ರೈತರಿಗೂ ಅನುಕೂಲ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಕುಟಂಬಕ್ಕಷ್ಟೇ ಬೇಡಿಕೊಂಡರೆ ಒಳ್ಳೆಯದಾಗಲ್ಲ
ಶುದ್ಧ ಮನಸ್ಸಿನಿಂದ ಸ್ವಾರ್ಥ ಬಿಟ್ಟು ಇನ್ನೊಬ್ಬರಿಗಾಗಿ ನಾವು ಕೆಲಸ ಮಾಡಬೇಕು. ಆಗ ದೇವರು ಮೆಚ್ಚುತ್ತಾನೆ. ನಮಗೋಸ್ಕರ ಮಾಡಿಕೊಂಡರೆ ದೇವರು ಮೆಚ್ಚುವುದಿಲ್ಲ. ನಿಮ್ಮ ಕುಟಂಬಕ್ಕಷ್ಟೇ ಕೈಮುಗಿದು ಬೇಡಿಕೊಂಡರೆ ನಿಮ್ಮಪ್ಪನಾಣೆಗೂ ಒಳ್ಳೆಯದು ಮಾಡಲ್ಲ. ಬೇರೆಯವರಿಗೆ ಒಳ್ಳೆದಾಗಲಿ ಎಂದು ಕೇಳಿಕೊಂಡರೆ ನಿಮಗೆ ಒಳ್ಳೆಯದಾಗುತ್ತೆ ಎಂದು ಹೇಳಿದರು.

ನಾವು ಮಾಡುವ ಕೆಲಸದಲ್ಲಿ ದೇವರನ್ನು ಕಾಣಬೇಕು
ಕೇವಲ ದೇವಸ್ಥಾನ, ಪ್ರತಿಮೆಗಳನ್ನು ಸ್ಥಾಪನೆ ಮಾಡಿದರೆ ಸಾಲದು, ಎಲ್ಲರೂ ಸತ್ಯದಿಂದ ನಡೆದುಕೊಳ್ಳಬೇಕು. ಸತ್ಯವೇ ದೇವರು, ಸ್ವರ್ಗ ಎನ್ನುತ್ತೇವೆ. ನಿತ್ಯವೇ ನರಕ ಎಂದು ಕರೆಯುತ್ತೇವೆ. ಇವೆರಡೂ ಇಲ್ಲಿಯೇ ಇದೆ. ನಾವು ಮಾಡುವ ಕೆಲಸದಲ್ಲಿ ದೇವರನ್ನು ಕಂಡುಕೊಳ್ಳಬೇಕು. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಇದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವರಾದ ಎನ್. ಚಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ, ಸೇರಿದಂತೆ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.












Click it and Unblock the Notifications