ಜಪಾನ್‌ನಲ್ಲಿ ಕನ್ನಡದ ಕಂಪು: ಸಕ್ಕರೆನಾಡು ಮಂಡ್ಯ ವಿದ್ಯಾರ್ಥಿಗಳ ವಿಶೇಷ ಸಾಧನೆ!
ಮಂಡ್ಯ, ಮೇ 27: ಸಕ್ಕರೆ ನಾಡಿನ ವಿದ್ಯಾರ್ಥಿಗಳಿಬ್ಬರು ದೂರದ ಜಪಾನ್‌ನ ಇಥಮಿ ನಗರದಲ್ಲಿ ಕನ್ನಡದ ಕಂಪು ಪಸರಿಸುವ ಮೂಲಕ ಜಿಲ್ಲೆಯ ಸಂಸ್ಕೃತಿಯ ಕೀರ್ತಿ ಪತಾಕೆಯನ್ನು ಹಾರಿಸಿ ಅಲ್ಲಿನ ವಿದ್ಯಾರ್ಥಿ ಮತ್ತು ಶಿಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ.
ಮಂಡ್ಯ ತಾಲೂಕು ಸಿದ್ದಯ್ಯನಕೊಪ್ಪಲು ಬಳಿ ಇರುವ ರಿಪಬ್ಲಿಕ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಜಪಾನ್‌ನಲ್ಲಿ ನಡೆದ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಸಂಸ್ಕೃತಿ ವಿನಿಮಯ ಮಾಡಿಕೊಂಡು ಜೂ. 2ರಂದು ತಾಯ್ನಾಡಿಗೆ ವಾಪಸ್ಸಾಗಲಿದ್ದಾರೆ.

ರಿಪಬ್ಲಿಕ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸ್ಟೀವನ್ ಹಾಗೂ 8ನೇ ತರಗತಿ ವಿದ್ಯಾರ್ಥಿನಿ ಧನ್ಯ ಜಿ.ಗೌಡ ಮಂಡ್ಯದ ಸೊಗಡಿನ ಜೊತೆಗೆ ರಾಜ್ಯ, ದೇಶ, ಸಂಸ್ಕೃತಿ, ಆಚಾರ, ವಿಚಾರ ಪರಿಚಯ ಮಾಡುವ ಮೂಲಕ ಸಕ್ಕರೆ ನಾಡಿನ ಹಿರಿಮೆ ಗರಿಮಯೆನ್ನು ಜಪಾನ್‌ನ ಮಕ್ಕಳೊಂದಿಗೆ ವಿನಿಮಯ ಮಾಡಿಕೊಂಡಿಕೊಳ್ಳುವ ಸಲುವಾಗಿ ಏ. 23ರಂದು ಜಪಾನ್‌ಗೆ ತೆರಳಿದ್ದರು.
ಕರ್ನಾಟಕದ ಸಂಸ್ಕೃತಿ, ಆಚಾರ, ವಿಚಾರ, ಭಾಷೆ, ಊಟ, ತಿಂಟಿ, ಉಡುಗೆ, ತೊಡುಗೆ, ಕಲೆ, ಕನ್ನಡದ ಸೊಗಡು ಭಾಷೆಗಿರುವ ಇತಿಹಾಸ ಸೇರಿದಂತೆ ಹಲವಾರು ವಿಚಾರಗಳನ್ನು ಜಪಾನ್ ಸೇರಿದಂತೆ ಹಲವು ವಿಚಾರಗಳನ್ನು ಜಪಾನ್‌ನ ಮಕ್ಕಳೊಂದಿಗೆ ಹಂಚಿಕೊಂಡಿದ್ದಾರೆ.

ಜಪಾನ್‌ನ ಇಥಮಿ ನಗರದಲ್ಲಿ ನಡೆದ ಅಂತರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ‌್ಯಕ್ರಮದಲ್ಲಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿ, ಅಲ್ಲಿನ ಮನೆಗಳಲ್ಲಿ ಸಂಪ್ರದಾಯದಂತೆ ಅವರ ಸಾಂಪ್ರದಾಯಿಕ ಬಟ್ಟೆ ತೊಟ್ಟು ಆ ವಿದ್ಯಾರ್ಥಿಗಳ ಮನೆಯಲ್ಲಿ ಉಳಿದುಕೊಂಡು ಅವರ ಸಂಸ್ಕೃತಿ, ಆಚಾರ, ವಿಚಾರ ಕಲಿಯುವ ಪ್ರಯತ್ನ ಮಾಡುವುದರೊಂದಿಗೆ ಕನ್ನಡದ ಕಂಪನ್ನೂ ಅವರಿಗೆ ಕಲಿಪಿಸಿಕೊಡುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಶಾಲೆಯ ಅಧ್ಯಕ್ಷ ಮಂಜು ತಿಳಿಸಿದ್ದಾರೆ.
ಕನ್ನಡದ ಸಂಸ್ಕೃತಿ ಹಾಗೂ ಮಂಡ್ಯದ ಸೊಗಡನ್ನು ಅರ್ಥಪೂರ್ಣವಾಗಿ ಜಪಾನ್‌ನಲ್ಲಿ ನಮ್ಮ ವಿದ್ಯಾಥಿ ದಗಳು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ವಿದ್ಯಾರ್ಥಿನಿಗಳ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಪಾನಿನ ತಂತ್ರಗಾರಿಕೆ, ವಿಧ್ಯಾಬ್ಯಾಸದ ಗುಣಮಟ್ಟವನ್ನು ಮಕ್ಕಳು ಅರಿತುಕೊಂಡಿದ್ದಾರೆ. ಇದರಿಂದ ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಕಲಿಕೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಇಥಮಿ ಶಾಲೆಯ ವಿವಿಧ ತರಗತಿಯ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಅವಕಾಶ ದೊರಕಿದ್ದು, ಅಲ್ಲಿನ ಮಕ್ಕಳೊಂದಿಗೆ ಬೆರೆತು ನಮ್ಮ ಕನ್ನಡದ ಸಂಸ್ಕೃತಿಯ ಬಗ್ಗೆಯೂ ವಿವರಿಸಿ ಹೇಳಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ, ತಂತ್ರಜ್ಞಾನ, ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಪ್ರಮುಖ ವೇದಿಕೆಯಾಗಿದೆ. ಇದರ ಜೊತೆಗೆ ಕನ್ನಡದ ಸಂಸ್ಕೃತಿಯನ್ನು ಅಲ್ಲಿನ ಮಕ್ಕಳಿಗೆ ಹೇಳಿ ಅಲ್ಲಿನ ಸಂಸ್ಕೃತಿ ಕಲಿಯುವ ಉದ್ದೇಶವಾಗಿತ್ತು ಎಂದು ಅವರು ವಿವರಿಸಿದ್ದಾರೆ.
ಸಾಕಷ್ಟು ಶಾಲೆಯ ಪೈಪೋಟಿಯ ನಡುವೆ ಅಂತರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ರಿಪಬ್ಲಿಕ್ ಸೆಂಟ್ರಲ್ ಶಾಲೆಯ ಮಕ್ಕಳು ಆಯ್ಕೆಯಾದದ್ದು ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದಕ್ಕೆ ಖುಷಿ ನೀಡಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ ವಿದೇಶದಲ್ಲಿ ಕನ್ನಡದ ಕಂಪನ್ನು ಪಸರಿಸುವ ಮೂಲಕ ಜಿಲ್ಲೆ ಮತ್ತು ದೇಶಕ್ಕೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಕೀರ್ತಿ ತಂದಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ರಿಪಬ್ಲಿಕ್ ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ ಎಂದು ಶಿಕ್ಷಕ ವೃಂದ ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications