ಸಿದ್ದರಾಮಯ್ಯ ಸೋಲಿಸುವುದು ಸಿದ್ಧ; ಸವಾಲು ಹಾಕಿದ ಬಿಜೆಪಿ ಅಧ್ಯಕ್ಷರು
ಮಂಡ್ಯ, ನವೆಂಬರ್ 04; 'ಸಿದ್ದರಾಮಣ್ಣ ನೀವು ಎಲ್ಲೇ ಚುನಾವಣೆಗೆ ನಿಂತರೂ ನಿಮ್ಮನ್ನು ಸೋಲಿಸಿಯೇ ಸಿದ್ಧ. ನಿಮ್ಮನ್ನು ನಿರುದ್ಯೋಗಿ ಮಾಡಲು ನಾವು ಬದ್ಧ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲು ಹಾಕಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಶುಕ್ರವಾರ 'ಜನಸಂಕಲ್ಪ ಯಾತ್ರೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಸಿದ್ದರಾಮಣ್ಣ ಟಿಪ್ಪು ಜಯಂತಿ ಮಾಡಿ ಈ ನಾಡಿನ ಜನರಿಗೆ ಅನ್ಯಾಯ ಮಾಡಿ ನೀವು ಮತಾಂಧರಿಗೆ ಅವಕಾಶ ಮಾಡಿಕೊಟ್ಟಿರಲ್ಲ. ಟಿಪ್ಪು ಜಯಂತಿ ಮಾಡಿ ಈ ರಾಜ್ಯದಲ್ಲಿ ಹಿಂದೂ- ಮುಸ್ಲಿಮರನ್ನು ಒಡೆದಿರಲ್ಲ ನೀವು?" ಎಂದು ಪ್ರಶ್ನಿಸಿದರು.
"ಈ ರಾಜ್ಯದಲ್ಲಿ ಜನನಾಯಕ, ಖಳ ನಾಯಕ ಮತ್ತು ಕಣ್ಣೀರ ನಾಯಕ ಎಂಬ ಮೂರು ಮಾದರಿಯ ನಾಯಕರಿದ್ದಾರೆ. ಜನರು ಅಧಿಕಾರ ಕೊಟ್ಟಾಗ ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ, ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿದ ನಾಯಕ, ಹಾಲಿಗೆ ಬೆಂಬಲ ಬೆಲೆ ಮತ್ತಿತರ ಜನಪರ ಯೋಜನೆಗಳ ಮೂಲಕ ಜನರ ಕಣ್ಣೀರನ್ನು ಒರೆಸಿದವರು ಯಡಿಯೂರಪ್ಪನವರು" ಎಂದರು.

"ರಾಜ್ಯದಲ್ಲಿ ಬೇಡವಾದ ಟಿಪ್ಪು ಜಯಂತಿ ಮಾಡಿ, ಹಿಂದೂ ಮುಸ್ಲಿಮರನ್ನು ಒಡೆದು ಹಾಕಿ, ಜನರ ಹತ್ಯೆಗೆ ಕಾರಣರಾದವರು ಸಿದ್ದರಾಮಣ್ಣ, ಪಿಎಫ್‍ಐ ಚಟುವಟಿಕೆಗೆ ಬೆಂಗಾವಲಾಗಿ ನಿಂತು ಹಿಂದೂಗಳ ಹತ್ಯೆ ಮಾಡಿದ 2 ಸಾವಿರ ಜನ ಪಿಎಫ್‍ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿಸಿದವರು" ಎಂದು ನಳಿನ್ ಕುಮಾರ್ ಕಟೀಲ್ ಟೀಕಿಸಿದರು.
"ಸಿದ್ದರಾಮಣ್ಣ ಗೋಹತ್ಯೆಗೆ ಬೆಂಗಾವಲಾಗಿ ನಿಂತವರು. ಅವರ ಕಾಲಘಟ್ಟದಲ್ಲಿ 3 ಸಾವಿರ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಠ್ಠಲ ಅರಭಾವಿ ಎಂಬ ರೈತರು ಬೆಳಗಾವಿ ಅಧಿವೇಶನ ನಡೆಯುತ್ತಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ರೈತರ ಮನೆಗೆ ಹೋಗಿ ಪರಿಹಾರ ಕೊಡದ ಹಾಗೂ ಅವರ ಕುಟುಂಬದ ಕಣ್ಣೀರು ಒರೆಸದ ರಾಜಕಾರಣಿ ಅವರು" ಎಂದು ಕಿಡಿಕಾರಿದರು.
"24 ಹಿಂದೂ ಕಾರ್ಯಕರ್ತರ ಕೊಲೆ ಆದಾಗ ಸಿದ್ದರಾಮಣ್ಣ ಕಣ್ಣೀರು ಹಾಕಿಲ್ಲ. ಅವರ ಅಧಿಕಾರಾವಧಿಯಲ್ಲಿ ಎಲ್ಲೆಡೆ ಕೊಲೆಗಳು ಆಗುತ್ತಿದ್ದವು. ಆತಂಕವಾದಿಗಳ ವಿಜೃಂಭಣೆ, ಪಿಎಫ್‍ಐ ಹೆಸರಿನಲ್ಲಿ ಚಟುವಟಿಕೆ ಹೆಚ್ಚಾಗಿತ್ತು. ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್‍ಗೆ ಚೂರಿಯಿಂದ ಇರಿದರೆ ಅವರನ್ನು ಬಂಧಿಸಲು ತಾಕತ್ತಿರದ ಸಿಎಂ ಸಿದ್ದರಾಮಣ್ಣ ಎಂದರಲ್ಲದೆ, ಇವತ್ತು ಪಿಎಫ್‍ಐ ನಿಷೇಧಿಸಿ ಮತಾಂಧರನ್ನು ಜೈಲಿಗಟ್ಟುವ ಕಾರ್ಯವನ್ನು ನರೇಂದ್ರ ಮೋದಿಜಿ ಸರಕಾರ ಮಾಡಿದೆ" ಎಂದರು.

ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ; "ಅಧಿಕಾರ ಇಲ್ಲದಾಗ ಕುಮಾರಣ್ಣ ಕಣ್ಣೀರು ಹಾಕಿ ಸ್ಥಾನಗಳನ್ನು ಗೆಲ್ಲುವಂತೆ ಮಾಡಿದವರು. ಮಂಡ್ಯದ ಜನರು ಕುಟುಂಬವಾದವನ್ನು ದೂರ ಇಟ್ಟು ಮುಂದೆ ರಾಷ್ಟ್ರೀಯವಾದದ ಪಕ್ಷ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ" ಎಂದು ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿರು.
"ಸಿದ್ದರಾಮಣ್ಣ ಮತ್ತು ಕುಮಾರಣ್ಣ 2018ರಲ್ಲಿ ಅಧಿಕಾರಕ್ಕಾಗಿ ಅನೈತಿಕ ಸಂಬಂಧ ಮಾಡಿದರು. ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಮಾಡುವ ತಾಕತ್ತಿದ್ದರೆ ಅದು ಯಡಿಯೂರಪ್ಪರ ನೇತೃತ್ವದ ಬೊಮ್ಮಾಯಿ ಸರಕಾರಕ್ಕೆ ಮಾತ್ರ ಸಾಧ್ಯ ಎಂದು ಕರ್ನಾಟಕದ ಜನತೆ ನಿಶ್ಚಯ ಮಾಡಿದ್ದಾರೆ. ಮೀಸಲಾತಿ ಹೆಚ್ಚಿಸಿ ಎಸ್‍ಸಿ, ಎಸ್‍ಟಿಗಳ ಕಣ್ಣೀರನ್ನು ಬಸವರಾಜ ಬೊಮ್ಮಾಯಿ ಒರೆಸಿದ್ದಾರೆ. ಅನೇಕ ಜನಪರ ಕಾರ್ಯಕ್ರಮಗಳನ್ನು ನಮ್ಮ ಪಕ್ಷ ಜಾರಿಗೊಳಿಸಿದ್ದು, ರೈತ ವಿದ್ಯಾನಿಧಿಯನ್ನು ಪ್ರಕಟಿಸಿದ ದೇಶದ ಏಕೈಕ ಸಿಎಂ ಬಸವರಾಜ ಬೊಮ್ಮಾಯಿ" ಎಂದು ಬಣ್ಣಿಸಿದರು.
"ಮುಂದಿನ ದಿನಗಳಲ್ಲಿ ಇಲ್ಲಿ ಕುಟುಂಬ ರಾಜಕಾರಣವನ್ನು ಮಂಡ್ಯದ ಜನತೆ ದೂರ ಇಟ್ಟು ಬಿಜೆಪಿಯ ಕಮಲವನ್ನು ಅರಳಿಸುವ ವಿಶ್ವಾಸ ಇದೆ. ಮಂಡ್ಯದಲ್ಲಿ ಕುಟುಂಬ ರಾಜಕಾರಣದ ಅಂಗಡಿ ಬಂದ್ ಆಗಿ ಬಿಜೆಪಿ ಎಲ್ಲಾ ಕ್ಷೇತ್ರಗಳನ್ನು ಗೆದ್ದುಕೊಳ್ಳಲಿದೆ" ಎಂದು ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

"ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಮುಕ್ತ ಮತ್ತು ಬಿಜೆಪಿ ಸಹಿತ ಆಡಳಿತಕ್ಕೆ ದಿನಗಳು ಸನ್ನಿಹಿತವಾಗಿವೆ. ಮತಾಂಧ ಮತ್ತು ಹಿಂದೂಗಳ ಮತಾಂತರ ಮಾಡಿದ್ದ ಟಿಪ್ಪುವಿನ ಸಂಹಾರ ಮಾಡಿದ ನಾಡಿಗೆ ನಾನು ಬಂದಿದ್ದೇನೆ. ಟಿಪ್ಪು ಜಯಂತಿ ಮಾಡಿದ ಕುತಂತ್ರ ರಾಜಕಾರಣಿ ಇದೀಗ ಅತಂತ್ರ ಸ್ಥಿತಿಯಲ್ಲಿದ್ದಾರೆ, ಟಿಪ್ಪುವಿಗೆ ಸನ್ಮಾನ ಮಾಡಿದ್ದಕ್ಕೆ ಜನರ ಶಾಪ ಅವರಿಗೆ ತಟ್ಟುತ್ತಿದೆ. ವಿಧಾನಸಭಾ ಕ್ಷೇತ್ರ ಅವರಿಗೆ ಸಿಗುತ್ತಿಲ್ಲ" ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.
"ಭಾರತ ಜಗತ್ತಿನ ಎತ್ತರಕ್ಕೆ ಏರುತ್ತಿದೆ. ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ನರೇಂದ್ರ ಮೋದಿಜಿ ಅವರು ದೇಶದ ಮಾತ್ರವಲ್ಲದೆ ಜಗತ್ತಿನ ನಾಯಕರಾಗಿ ಹೊರಹೊಮ್ಮಿದ್ದಾರೆ. ನರೇಂದ್ರ ಮೋದಿಜಿ ಭಾರತ್ ಜೋಡೋ ಮಾಡಿದ್ದಾರೆ. ಅಯೋಧ್ಯೆ, ಕಾಶಿ ಮತ್ತಿತರ ಕಡೆ ಹಿಂದೂಗಳಿಗೆ ಬಿಜೆಪಿ ಗೌರವ ಸಲ್ಲಿಸಿದರೆ, ಕಾಂಗ್ರೆಸ್ ಪಕ್ಷವು ಟಿಪ್ಪುವಿಗೆ ಗೌರವ ನೀಡುತ್ತ ಸಾಗಿತು" ಎಂದು ಟೀಕಿಸಿದರು.
"ಬಾದಾಮಿಯ ಜನ ಓಡಿಸಿದ್ದಾರೆ. ಚಾಮರಾಜನಗರದಲ್ಲಿ ಸೋಲಿಸಿದ್ದಾರೆ. ಕೋಲಾರದಲ್ಲಿ ಜಾಗ ಹುಡುಕುತ್ತಿದ್ದಾರೆ. ಮೈಸೂರಿಗೆ ಬರಬೇಡಿ ಎಂದುದ ಹೇಳಿದ್ದಾರೆ. ಬಾದಾಮಿಯಲ್ಲಿ ಸಿದ್ದರಾಮಣ್ಣ ಸ್ಪರ್ಧಿಸಿದರೆ ಜನರು ಇಡುಗಂಟು ಕಳಕೊಳ್ಳುವಂತೆ ಮಾಡುತ್ತಾರೆ" ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.












Click it and Unblock the Notifications