Bajrang Dal: ಯಾವುದೇ ಸಂಘಟನೆ ಬ್ಯಾನ್ ಮಾಡುವುದು ಇಷ್ಟವಿಲ್ಲ: ಅಚ್ಚರಿಯ ಹೇಳಿಕೆ ಕೊಟ್ಟ ರಮ್ಯಾ
ಕಾಂಗ್ರೆಸ್ ಪ್ರಣಾಳಿಕೆ ಸದ್ಯ ಬಿಜೆಪಿಗೆ ದೊಡ್ಡ ಅಸ್ತ್ರವಾಗಿದೆ. ತಾವು ಅಧಿಕಾರಕ್ಕೆ ಬಂದರೆ ಸಮಾಜದಲ್ಲಿ ಶಾಂತಿಯನ್ನು ಕದಡುವ ಬಜರಂಗದಳ, ಪಿಎಫ್‌ಐ ಸೇರಿದಂತೆ ಯಾವುದೇ ಅಲ್ಪಸಂಖ್ಯಾತ ಅಥವಾ ಬಹುಸಂಖ್ಯಾತ ಸಂಘಟನೆಗಳು ಉಲ್ಲಂಘಿಸಿದರೂ ನಿಷೇಧ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿತ್ತು.
ಈ ಅಂಶವನ್ನೇ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಹಿಂದೂ ವಿರೋಧಿ, ಅದಕ್ಕೆ ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎನ್ನುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿವೆ. ಇನ್ನು ಬಜರಂಗದಳ ಬ್ಯಾನ್ ಮಾಡುವ ಬಗ್ಗೆ ಕಾಂಗ್ರೆಸ್‌ನ ಮಾಜಿ ಸಂಸದೆ, ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ಬನ್ನೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಿಷೇಧ ಹೇರುವುದು ಎನ್ನುವುದು ನನಗೆ ವೈಯಕ್ತಿಕವಾಗಿ ಒಪ್ಪಿಗೆಯಿಲ್ಲ, ಒಂದು ಸಂಘಟನೆ ಬ್ಯಾನ್ ಮಾಡಿದರೆ ಇನ್ನೊಂದು ಬರುತ್ತದೆ. ದ್ವೇಷ ಭಾಷಣ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನು ಅವಕಾಶ ಕೊಟ್ಟಿದೆ. ಪೊಲೀಸರು ಜವಾಬ್ದಾರಿಯಿಂದ ದ್ವೇಷ ಭಾಷಣ ಮಾಡುವವರ ವಿರುದ್ಧ ದೂರು ದಾಖಲಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಕೂಡ ಹೇಳಿದೆ. ಅದನ್ನು ಸಮರ್ಥವಾಗಿ ಜಾರಿ ಮಾಡಬೇಕು ಅಷ್ಟೆ, ನಿಷೇಧ ಹೇರುವುದರಿಂದ ಉಪಯೋಗ ಇಲ್ಲ" ಎಂದರು.
ಮಾತು ಮುಂದುವರೆಸಿದ ಅವರು, "ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ, ಕಾನೂನು ಪಾಲನೆ ಮಾಡಬೇಕು, ಕಠಿಣ ಕಾನೂನು ಜಾರಿ ಮಾಡುತ್ತೇವೆ ಎನ್ನುವ ಬದಲು, ಬಜರಂಗದಳ ಬ್ಯಾನ್ ಎಂದು ಹೇಳಿದ್ದಾರೆ ಎನಿಸುತ್ತದೆ, ನಾನಿನ್ನೂ ಪ್ರಣಾಳಿಕೆ ನೋಡಿಲ್ಲ, ಈ ಬಗ್ಗೆ ಕೇಳಿದ್ದೇನೆ ಅಷ್ಟೆ, ಇದನ್ನು ಬದಲಾವಣೆ ಮಾಡಿ ಸ್ಪಷ್ಟವಾಗಿ ಬರೆಯಬೇಕು ಎಂದಿದ್ದಾರೆ."
ಕಾಂಗ್ರೆಸ್ ಗೆಲ್ಲುತ್ತದೆ ಎಂದ ರಮ್ಯಾ
ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕಿಯಾಗಿರುವ ರಮ್ಯಾ ಸದ್ಯ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಮಂಡ್ಯದಲ್ಲಿ ಚುನಾವಣಾ ಪ್ರಚಾರ ಮಾಡಿದ ಅವರು, ಗುರುವಾರ ವರುಣಾದಲ್ಲಿ ಸಿದ್ದರಾಮಯ್ಯ ಪರವಾಗಿ ಮತಯಾಚನೆ ಮಾಡಲಿದ್ದಾರೆ.
ಪ್ರಚಾರದಲ್ಲಿ ಜನರ ಸ್ಪಂದನೆ ಬಗ್ಗೆ ಮಾತನಾಡಿದ ಅವರು, "ಹೋದ ಕಡೆಯಲ್ಲೆಲ್ಲಾ ಜನ ತುಂಬಾ ಪ್ರೀತಿ, ಗೌರವ ಕೊಟ್ಟಿದ್ದಾರೆ. ಕಾಂಗ್ರೆಸ್ ಈ ಬಾರಿ ಗೆಲ್ಲುವ ವಿಶ್ವಾಸದವಿದೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲ್ಲೋದು ನಿಶ್ಚಿತ. ಅವರು ದೊಡ್ಡ ನಾಯಕ, ಸಿಎಂ ಆಗಿದ್ದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ" ಎಂದರು. ಲಿಂಗಾಯತ ಸಿಎಂ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿ, ಅವರು ಬಸವರಾಜ ಬೊಮ್ಮಾಯಿ ಬಗ್ಗೆ ಹೇಳಿದ್ದಾರೆ ಅಷ್ಟೆ ಎಂದಿದ್ದಾರೆ.












Click it and Unblock the Notifications