ಮಂಡ್ಯ ರಾಜಕಾರಣ, ಬದಲಾವಣೆ ಆಯ್ತು ರಮ್ಯಾ ಕ್ಷೇತ್ರ?
Recommended Video

ಮಂಡ್ಯ, ನವೆಂಬರ್ 15 : ಅಂಬರೀಶ್, ರಮ್ಯಾ ನಡುವೆ ಶೀತಲ ಸಮರ ಉಂಟಾಗುವುದನ್ನು ತಪ್ಪಿಸಲು ಕರ್ನಾಟಕ ಕಾಂಗ್ರೆಸ್ ಸಂಧಾನ ಸೂತ್ರವೊಂದನ್ನು ಸಿದ್ಧಪಡಿಸಿದೆ. ರಮ್ಯಾ ಅವರಿಗೆ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸುವ ಸಾಧ್ಯತೆ ಇದೆ.
ಎರಡು ದಿನಗಳಿಂದ ಮಂಡ್ಯದ ರಾಜಕೀಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಅಂಬರೀಶ್, ಮಾಜಿ ಸಂಸದೆ ರಮ್ಯಾ ಪ್ರಯತ್ನ ನಡೆಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಅಂಬರೀಶ್ ಜೆಡಿಎಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿಯನ್ನು ಜಿಲ್ಲಾ ಜೆಡಿಎಸ್ ಘಟಕ ತಳ್ಳಿ ಹಾಕಿದೆ. ಅಂಬರೀಶ್ ಮತ್ತು ರಮ್ಯಾ ನಡುವಿನ ಶೀತಲ ಸಮರದಿಂದಾಗಿ ಪಕ್ಷಕ್ಕೆ ಆಗುವ ಹಾನಿ ತಪ್ಪಿಸಲು ಕಾಂಗ್ರೆಸ್ ಸೂತ್ರವೊಂದನ್ನು ಸಿದ್ಧಪಡಿಸಿದೆ.
ಮೇಲುಕೋಟೆ ಕ್ಷೇತ್ರದ ಸದ್ಯದ ಶಾಸಕರು ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ. ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ರೈತ ಸಂಘ ಪ್ರಬಲವಾಗಿದೆ. ರಮ್ಯಾ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಿ ಕ್ಷೇತ್ರವನ್ನು ವಶಕ್ಕೆ ಪಡೆದುಕೊಳ್ಳುವುದು ಕಾಂಗ್ರೆಸ್ ತಂತ್ರವಾಗಿದೆ...

ಸೇಡು ತೀರಿಸಿಕೊಳ್ಳಲು ಅವಕಾಶ
ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ಅವರು 2018ರ ವಿಧಾನಸಭೆ ಚುನಾವಣೆಗೆ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅವರು ಎದುರಾಳಿಯಾಗಿ ರಮ್ಯಾ ಅವರನ್ನು ಕಣಕ್ಕಿಳಿಸಿದರೆ, 2014ರ ಲೋಕಸಭೆ ಚುನಾವಣೆ ಸೋಲಿನ ಸೇಡನ್ನು ರಮ್ಯಾ ಅವರು ತೀರಿಸಿಕೊಳ್ಳಬಹುದು ಎಂಬುದು ಒಂದು ವಾದ.

ಕಳೆದ ಬಾರಿ ಪುಟ್ಟರಾಜು ಸೋತಿದ್ದರು
ಸಿ.ಎಸ್.ಪುಟ್ಟರಾಜು ಅವರು 2013ರ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, 10 ಸಾವಿರಕ್ಕೂ ಅಧಿಕ ಮತಗಳಿಂದ ಪುಟ್ಟರಾಜು ಅವರನ್ನು ಸೋಲಿಸಿದ್ದರು.

ಮಂಡ್ಯ ಕ್ಷೇತ್ರಕ್ಕಾಗಿ ಜಟಾಪಟಿ
ಮಂಡ್ಯ ಕ್ಷೇತ್ರದಿಂದ 2018ರ ಚುನಾವಣೆಗೆ ಸ್ಪರ್ಧಿಸಲು ರಮ್ಯಾ ಮತ್ತು ಅಂಬರೀಶ್ ಬಯಸಿದ್ದಾರೆ. ಇಬ್ಬರು ನಾಯಕರ ಶೀತಲ ಸಮರದಿಂದ ಜಿಲ್ಲಾ ಕಾಂಗ್ರೆಸ್‌ಗೆ ಆಗುವ ಹಾನಿ ತಪ್ಪಿಸಲು ರಮ್ಯಾ ಅವರಿಗೆ ಮೇಲುಕೋಟೆ ಕ್ಷೇತ್ರದಲ್ಲಿ ಟಿಕೆಟ್ ನೀಡಲು ಚಿಂತನೆ ನಡೆದಿದೆ.

ಹಿಂದೆ ಪಾಂಡವಪುರ ಕ್ಷೇತ್ರದಲ್ಲಿತ್ತು
ಹಿಂದೆ ಪಾಂಡವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಮೇಲುಕೋಟೆ ಕ್ಷೇತ್ರ ಪುನರ್ ವಿಂಗಡನೆಯಾದ ನಂತರ ಮೇಲುಕೋಟೆ ವಿಧಾನಸಭಾ ಕ್ಷೇತ್ರವಾಯಿತು. ಎರಡು ಬಾರಿ ಇಲ್ಲಿ ಸಿ.ಎಸ್.ಪುಟ್ಟರಾಜು, ಕೆ.ಕೆಂಪೇಗೌಡ ಅವರು ಜಯಗಳಿಸಿದ್ದಾರೆ. ಮೂರು ಚುನಾವಣೆಗಳಲ್ಲಿ ಸೋತಿದ್ದ ಪುಟ್ಟಣ್ಣಯ್ಯ ಅವರು 2013ರಲ್ಲಿ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದ ಮೇಲೆ ಈಗ ಕಾಂಗ್ರೆಸ್ ಕಣ್ಣು ಬಿದ್ದಿದೆ.

3ನೇ ಸ್ಥಾನಕ್ಕೆ ಕುಸಿದಿದ್ದ ಕಾಂಗ್ರೆಸ್
2013ರ ಚುನಾವಣೆಯಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಜಯಗಳಿಸಿದ್ದರು. 80,041 ಮತಗಳನ್ನು ಪಡೆದು ಅವರು ಸಿ.ಎಸ್.ಪುಟ್ಟರಾಜು ಅವರನ್ನು ಸೋಲಿಸಿದ್ದರು. ಸಿ.ಎಸ್.ಪುಟ್ಟರಾಜು ಅವರು 70,193 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಎಲ್.ಡಿ.ರವಿ 2,314 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ಕುಸಿದಿದ್ದರು.












Click it and Unblock the Notifications