ಮಂಡ್ಯದಲ್ಲಿ ಆರ್. ಅಶೋಕ್ ವಿರುದ್ಧ "ಗೋ ಬ್ಯಾಕ್" ಪೋಸ್ಟರ್ ಅಭಿಯಾನ, ವೈರಲ್
ಮಂಡ್ಯದಲ್ಲಿ ಕಂದಾಯ ಸಚಿವ ಆರ್. ಅಶೋಕ್ ವಿರುದ್ಧ ಕೆಲವರು ಗೋ ಬ್ಯಾಕ್ ಪೋಸ್ಟರ್ ಅನ್ನು ಅಂಟಿಸಲು ಕಾರಣ ಏನೆಂದು ತಿಳಿಯಿರಿ.
ಮಂಡ್ಯ, ಜನವರಿ, 26: ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನಮಾನ ನೀಡಿರುವುದಕ್ಕೆ ಕೆಲವರು ಅಸಮಾಧಾನಗೊಂಡಿದ್ದು, ಗೋ ಬ್ಯಾಕ್ ಜೊತೆ, ಬಾಯ್ಕಾಟ್ ಅಭಿಯಾನ ಆರಂಭಿಸಿದ್ದಾರೆ.
"ಗೋ ಬ್ಯಾಕ್ ಅಶೋಕ್" ಎಂದು ಪೋಸ್ಟರ್, ಫೇಸ್‌ಬುಕ್‌ಲ್ಲಿ ಪೋಸ್ಟ್ ಮಾಡಲಾಗಿತ್ತು. ಇದೀಗ ಗೋಡೆಗಳ ಮೇಲೂ ಪೋಸ್ಟರ್ ಅಭಿಯಾನ ಪ್ರಾರಂಭವಾಗಿದೆ. ಪೋಸ್ಟರ್‌ನಲ್ಲಿ ಬಾಯ್ಕಟ್, ಗೋ ಬ್ಯಾಕ್ ಅಶೋಕ್ ಎಂಬ ಸಾಲು ಕಂಡುಬಂದಿದೆ. ಅಶೋಕ್ ಅವರು ಹೊಂದಾಣಿಕೆ ರಾಜಕೀಯ ಮಾಡುತ್ತಾರೆ. ಅಶೋಕ್‌ರಿಂದ ಮಂಡ್ಯದಲ್ಲಿ ಬಿಜೆಪಿ ಬೆಳೆಯಲ್ಲ. ಅಶೋಕ್ ಗೋ ಬ್ಯಾಕ್ ಎಂಬ ಕೂಗು ವ್ಯಾಪಕವಾಗಿದೆ. ಮಂಡ್ಯದ ಆರ್.ಪಿ. ರಸ್ತೆ, ಸ್ಟೇಡಿಯಂ ರಸ್ತೆಯ ಗೋಡೆ ಮೇಲೆ ಪೋಸ್ಟರ್ ಅಂಟಿಸಲಾಗಿದೆ.
ಏಳೂ ಕ್ಷೇತ್ರಗಳಲ್ಲೂ ತ್ರಿಕೋನ ಸ್ಪರ್ಧೆ
ಮಂಡ್ಯದ ಏಳೂ ಕ್ಷೇತ್ರದಲ್ಲಿ ಸಮಬಲದ ತ್ರಿಕೋನ ಸ್ಪರ್ಧೆಯ ರಣತಂತ್ರ ರೂಪಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಹೇಳಿದರು. ಗಣರಾಜ್ಯೋತ್ಸವ ಸಮಾರಂಭದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಮಬಲದ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಗೆಲ್ಲುತ್ತದೆ. ರಾಜ್ಯಾದ್ಯಂತ ಬೇರೆ ಪಕ್ಷದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

ಮೋದಿ-ಅಮಿತ್ ಶಾ ಬಂದ ಕಡೆಯಲ್ಲೆಲ್ಲಾ ಸರ್ಕಾರ ಬರುತ್ತದೆ. ಸೌತ್ ಇಂಡಿಯಾದ ಗೇಟ್ ಇದು. ನಮ್ಮ ನಾಯಕರು ಯಾರೂ ಸಹ ಬಿಟ್ಟುಕೊಡಲು ಸಾಧ್ಯವಿಲ್ಲ. ನಮ್ಮ ಸರ್ವೆಯಲ್ಲಿ ಕಾಂಗ್ರೆಸ್ 70 ದಾಟಿಲ್ಲ. ಜೆಡಿಎಸ್ 20 ದಾಟಿಲ್ಲ. ಇಬ್ಬರೂ ಸೇರಿ ಒಟ್ಟು 90 ದಾಟಲ್ಲ. ಉಳಿದೆಲ್ಲವೂ ಬಿಜೆಪಿಗೆ ಬರುತ್ತದೆ. ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್, ಕಾಂಗ್ರೆಸ್‌ಗೆ ಭಯ
ನನ್ನ ಮೇಲೆ ಷಡ್ಯಂತ್ರ ರೂಪಿಸುವುದಕ್ಕೆ ಯಾರಿಗೂ ಧೈರ್ಯ ಇಲ್ಲ. ಅಶೋಕ್ ಯಾವ ಹೊಂದಾಣಿಕೆ ರಾಜಕಾರಣ ಮಾಡುವುದಿಲ್ಲ. ಇದು ನಮ್ಮ ಪಕ್ಷದ ಸಂಸ್ಕೃತಿಯೂ ಅಲ್ಲ. ಉಸ್ತುವಾರಿ ಸಚಿವರಾಗಿ ಮಂಡ್ಯಕ್ಕೆ ಬರುತ್ತಿದ್ದಂತೆ 2 ಸಾವಿರ ಬೈಕ್ ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಇದರಿಂದಲೇ ತಿಳಿಯುವುದಿಲ್ಲವೇ, ಮಂಡ್ಯಕ್ಕೆ ಈಗ ಒಂದು ಶಕ್ತಿ ಬಂದಿದೆ. ಪ್ರಬಲವಾಗಿ ಬಂದಾಗ ಈ ರೀತಿಯಾಗಿ ಅಪಪ್ರಚಾರ ಬರುತ್ತದೆ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಮ್ಮ ಕಾರ್ಯಕರ್ತರನ್ನು ಜೊತೆಯಾಗಿ ಕರೆದೊಯ್ಯುವ ಕೆಲಸ ಮಾಡುತ್ತೇನೆ. ಈ ಮೂಲಕ ಬಹಳಷ್ಟು ಬದಲಾವಣೆ ತರುತ್ತೇನೆ. ಇದುವರೆಗೂ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ನಾನು ಬಂದಿರುವುದಕ್ಕೆ ಕೆಲವರಿಗೆ ಭಯ ಹುಟ್ಟಿದೆ. ಬೇರೆ ಪಕ್ಷದವರು ಎತ್ತಿಕಟ್ಟುತ್ತಿದ್ದಾರೆ. ನಮ್ಮ ಪಕ್ಷದವರು ಯಾರೂ ಈ ರೀತಿ ಮಾಡುವುದಿಲ್ಲ. ನನ್ನ ಮೇಲೆ ಷಡ್ಯಂತ್ರ ರೂಪಿಸುವ ಧೈರ್ಯ ಯಾರಿಗೂ ಇಲ್ಲ ಎಂದು ಹೇಳಿದರು.












Click it and Unblock the Notifications