ಗಣಿ ಅಧಿಕಾರಿಗೆ ಬೆದರಿಕೆ ಹಾಕಿದ ಸಂಸದ ಪುಟ್ಟರಾಜು ವಿರುದ್ಧ ಪ್ರತಿಭಟನೆ
ಮಂಡ್ಯ, ನವೆಂಬರ್ 18 : ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಬೇಕಾದ ಸಂಸದ ಸಿ.ಎಸ್. ಪುಟ್ಟರಾಜು ಜಿಲ್ಲಾಧಿಕಾರಿ ಎದುರೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಬೆದರಿಕೆ ಹಾಕಿರುವುದನ್ನು ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ (ನ.18) ಮಂಡ್ಯದ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪಾಂಡವಪುರ ತಾಲೂಕು ಬೇಬಿ ಬೆಟ್ಟದ ಸುತ್ತ ಎರಡು ತಿಂಗಳ ನಿಷೇಧಾಜ್ಞೆ ಜಾರಿಯಲ್ಲಿದೆ. ಸಂಸದರಿಗೆ ಸೇರಿದ ಹಲವು ಗಣಿಗಾರಿಕೆಗಳಿಗೆ ಕಡಿವಾಣ ಬಿದ್ದಿರುವುದರಿಂದ ನ.೧೩ ರಂದು ಜಿಲ್ಲಾಧಿಕಾರಿ ಮತ್ತು ಪಾಂಡವಪುರ ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಸಮ್ಮುಖದಲ್ಲಿ ನಡೆಯುತ್ತಿದ್ದ ಸಭೆಗೆ ಬಂದು ಜಿಲ್ಲಾಧಿಕಾರಿ ಎದುರಲ್ಲೇ ಹಿರಿಯ ಭೂ ವಿಜ್ಞಾನಿ ಅವರಿಗೆ ಬೆದರಿಕೆ ಹಾಕಿ ದರ್ಪ ಪ್ರದರ್ಶಿಸಿದ್ದು ಇದು ಒಂದು ಸಂಸದರಾಗಿ ನಡೆದುಕೊಳ್ಳುವಂತಹ ರೀತಿಯಲ್ಲ ಎಂದು ಕಾರ್ಯಕರ್ತರು ಹೇಳಿದರು.

ಜಿಲ್ಲೆಯ ಸಮಸ್ಯೆ ಬಗ್ಗೆ ಗಮನ ಹರಿಸದ ಸಂಸದರು ಅಕ್ರಮ ಗಣಿಗಾರಿಕೆಗೆ ಅಡ್ಡಿಯಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವುದು ಅವರ ಕಾರ್ಯ ವೈಖರಿಯನ್ನು ತೋರುತ್ತದೆ. ಅಧಿಕಾರಿಗೆ ಬೆದರಿಕೆ ಹಾಕಿ ಸಾವಿರಾರು ಜನ ಸೇರಿಸಿ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡಿಸುತ್ತೇವೆ ಎಂದೆಲ್ಲಾ ಸವಾಲ್ ಹಾಕಿರುವದಷ್ಟೇ ಎಲ್ಲದೆ ಕಾನೂನಿನಿಗಿಂತ ತಾವೇ ದೊಡ್ಡವರು ಎಂಬಂತೆ ನಡೆದುಕೊಂಡಿದ್ದರು ಎಂದು ಆರೋಪಿಸಿದರು.












Click it and Unblock the Notifications