Preetham Gowda: ಪ್ರೀತಂಗೌಡ v/s ಹೆಚ್‌ಡಿ ಕುಮಾರಸ್ವಾಮಿ ನಡುವಿನ ಫೈಟ್- ಮಂಡ್ಯದಲ್ಲಿ ಫ್ಲೆಕ್ಸ್‌ಗಳಿಗೆ ಬಿತ್ತು ಬೆಂಕಿ
ಮಂಡ್ಯ ಆಗಸ್ಟ್ 8: ಮಂಡ್ಯದಲ್ಲಿ ಹಾಸನ ಮಾಜಿ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಫ್ಲೆಕ್ಸ್‌ಗಳಿಗೆ ಬೆಂಕಿ ಹಚ್ಚಿದ ಘಟನೆ ಕಳೆದ ದಿನ ತಡರಾತ್ರಿ ನಡೆದಿದೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ನಡೆದ ಜೆಡಿಎಸ್ ಹಾಗೂ ಬಿಜೆಪಿ ಪಾದಯಾತ್ರೆಯಲ್ಲಿ ಕಳೆದ ದಿನ (ಆಗಸ್ಟ್ 7) ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ಇದರ ಪರಿಣಾಮ ಮಂಡ್ಯದಲ್ಲಿ ಇಬ್ಬರು ಬೆಂಬಲಿಗರ ನಡುವಿನ ವಾರ್ ತಾರಕಕ್ಕೇರಿದೆ.

ಈ ಕಾರಣಕ್ಕೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹಾಕಲಾಗಿದ್ದ ಪ್ರೀತಂ ಗೌಡ ಇದ್ದ ಫ್ಲೆಕ್ಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ನಿನ್ನೆ ಮಂಡ್ಯದಲ್ಲಿ ಜೆಡಿಎಸ್, ಬಿಜೆಪಿ ಪಾದಯಾತ್ರೆ ಸಂಚರಿಸುತ್ತಿದ್ದ ಹಿನ್ನೆಲೆ ಕೆಲ ಬೃಹತ್ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು. ಆದರೆ ಬೆಳಗಾಗುವ ಹೊತ್ತಿಗೆ ಈ ಫ್ಲೆಕ್ಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಎಲ್ಲೆಡೆ ಫ್ಲೆಕ್ಸ್‌ಗಳು ಸುಟ್ಟು ಕರಕಲಾಗಿರುವ ದೃಶ್ಯಗಳು ಕಂಡು ಬಂದಿವೆ. ಬುಧವಾರ ಪಾದಯಾತ್ರೆ ವೇಳೆ ಆಗಿದ್ದೇನು?
ಪಾದಯಾತ್ರೆ ವೇಳೆ ಆಗಿದ್ದೇನು?
ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣ ಖಂಡಿಸಿ ಹಾಗೂ ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಎಂಟು ದಿನಗಳ ಕಾಲ ನಡೆಯಲಿರುವ ಈ ಪಾದಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಯೇ ಬಿಜೆಪಿ ಹಾಗೂ ಜೆಡಿಎಸ್‌ನ ಪ್ರಮುಖ ಬೇಡಿಕೆಯಾಗಿದೆ. ಆದರೆ ವಿಚಿತ್ರವೆಂದರೆ ಪಾದಯಾತ್ರೆ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಆದರೂ ಪ್ರೀತಂ ಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ನಡುವಿನ ಫೈಟ್ ಶುರುವಾಗಿದೆ.
ಹೌದು... ಬುಧವಾರ ಐದನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆಯಲ್ಲಿ ಪ್ರೀತಂ ಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ. ನಿನ್ನೆ ಪಾದಯಾತ್ರೆ ವೇಳೆ ಬೆಂಬಲಿಗರು ಮಂಡ್ಯದಲ್ಲಿ ಪ್ರೀತಂಗೌಡರನ್ನ ಹೊತ್ತು ಕುಣಿದಿದ್ದರು. ಪ್ರೀತಂಗೌಡ ಬೆಂಬಲಿಗರ ವರ್ತನೆಗೆ ಕುಮಾರಸ್ವಾಮಿ ಬೆಂಬಲಿಗರು ಕಿಡಿಕಾರಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಬಿಗಡಾಯಿಸಿತ್ತು.

ಅಲ್ಲದೆ ಪ್ರೀತಂ ಗೌಡ ಅವರು ಎಸ್‌ಡಿ ಕುಮಾರಸ್ವಾಮಿ ಬೆಂಬಲಿಗರ ಮೇಲೆ ಕೈ ಮಾಡಿದ್ದಾರೆನ್ನುವ ಆರೋಪ ಕೇಳಿ ಬಂದಿದೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಪ್ರೀತಂ ಗೌಡ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. 'ಗೌಡರ ಗೌಡ ಪ್ರೀತಂಗ ಗೌಡ' ಎಂಬ ಘೋಷಣೆ ಕೂಗುವ ಮೂಲಕ ಪ್ರೀತಂ ಗೌಡ ಅವರಿಗೆ ಠಕ್ಕರ್ ಕೊಟ್ಟಿದ್ದಾರೆ.
ಅಲ್ಲದೆ ಪಾದಯಾತ್ರೆ ನಂತರ ತಡರಾತ್ರಿ ಪ್ರೀತಂಗೌಡ ಫೋಟೋ ಇದ್ದ ಫ್ಲೆಕ್ಸ್ ಗಳಿಗೆ ಬೆಂಕಿ ಹಚ್ಚಲಾಗಿದೆ. ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತ ಫ್ಲೆಕ್ಸ್ ಗಳಿಗೆ ಬೆಂಕಿ ಇಟ್ಟು ಆಕ್ರೋಶ ಹೊರಹಾಕಲಾಗಿದೆ.
ಪಾದಯಾತ್ರೆ ಸಿಎಂ ವಿರುದ್ಧನಾ? ಹೆಚ್‌ಡಿಕೆ ವಿರುದ್ಧನಾ?
ಮೈತ್ರಿ ಪಕ್ಷಗಳ ಪಾದಯಾತ್ರೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ನಡೆದ ಘರ್ಷಣೆ ಹೀಗೊಂದು ಅನುಮಾನವನ್ನು ಹುಟ್ಟುಹಾಕಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡ ಪಾದಯಾತ್ರೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು ಪಕ್ಷಕ್ಕೆ ಭಾರೀ ಇರುಸುಮುರುಸು ಉಂಟು ಮಾಡಿದೆ.
ಹಾಸನ ಪೆನ್‌ಡ್ರೈವ್ ಹಂಚಿದ ಆರೋಪವನ್ನು ಪ್ರೀತಂ ಗೌಡ ಅವರ ಮೇಲೆ ಹಾಕಿರುವ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಪ್ರೀತಂ ಗೌಡ ಅವರೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ಬಳಿಕ ಅವರು ಪಾದಯಾತ್ರೆಯಲ್ಲಿ ಭಾಗಿಯಾದರೂ ಆ ಸಮಯದಲ್ಲಿ ಪ್ರೀತಂಗೌಡ ಎಲ್ಲೂ ಕೂಡ ಕಾಣಿಸಿಕೊಂಡಿಲ್ಲ.
ಅಂದರೆ ಎಚ್‌ಡಿ ಕುಮಾರಸ್ವಾಮಿ ಪಾದಯಾತ್ರೆಯಲ್ಲಿ ಇರುವ ಸಮಯದಲ್ಲಿ ಪ್ರೀತಂ ಗೌಡ ಗೈರಾಗಿರುವುದು ಕಂಡುಬಂದಿದೆ. ಇದು ಪ್ರೀತಂ ಗೌಡ ಹಾಗೂ ಎಚ್‌ಡಿ ಕುಮಾರಸ್ವಾಮಿ ನಡುವಿನ ವೈಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಆದರೆ ಪಾದಯಾತ್ರೆಯಲ್ಲಿ ಪ್ರೀತಂ ಗೌಡ ಹಾಗೂ ಎಚ್‌ಡಿ ಕುಮಾರಸ್ವಾಮಿ ಬೆಂಬಲಿಗರ ನಡುವೆ ಘರ್ಷಣೆಯಾಗಿದ್ದು ಪಾದಯಾತ್ರೆ ನಡೆಯುತ್ತಿರುವುದು ಯಾರ ವಿರುದ್ಧ ಎನ್ನುವ ಅನುಮಾನ ಮೂಡಿಸಿದೆ. ಇದು ಮೈತ್ರಿ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಇದು ಯಾವ ಹಂತಕ್ಕೆ ಹೋಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications