ಶ್ರೀರಂಗಪಟ್ಟಣ ದಸರಾ ಅದ್ಧೂರಿ ಮೆರವಣಿಗೆ: ಹೇಗಿತ್ತು ಐತಿಹಾಸಿಕ ಕ್ಷಣದ ವೈಭವ
ಮಂಡ್ಯ, ಅಕ್ಟೋಬರ್ 16: ದಸರಾದ ಮೂಲ ನೆಲೆಯಾದ ಪಾರಂಪರಿಕ ಹಾಗೂ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ಸೋಮವಾರ ವಿಜೃಂಣೆಯಿಂದ ನಡೆದ ನಾಡಹಬ್ಬ ದಸರಾ ಉತ್ಸವವನ್ನು ಸಹಸ್ರಾರು ಜನರು ಸಾಕ್ಷೀಕರಿಸಿದರು. ಜಂಬೂ ಸವಾರಿಯು ದಸರಾದ ಗತವೈವ ಸಾರಿತು. ಮೈಸೂರಿಗೂ ಮುನ್ನ ವಿಜೃಂಣೆಯಿಂದ ನಡೆದ ಶ್ರೀರಂಗಪಟ್ಟಣ ದಸರಾ ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು.
15ನೇ ವರ್ಷದ ದಸರಾ ಮಹೋತ್ಸವಕ್ಕೆ ಪಟ್ಟಣದ ಹೊರವಲಯದ ಕಿರಂಗೂರು ಸರ್ಕಲ್‌ನಲ್ಲಿನ ದಸರಾ ಮಂಟಪದಲ್ಲಿ ಶ್ರೀಚಾಮುಂಡೇಶ್ವರಿ ಮತ್ತು ಶಮೀವೃಕ್ಷ(ಬನ್ನಿ ಮರ)ಕ್ಕೆ ಸೋಮವಾರ ಮಧ್ಯಾಹ್ನ 2.30 ರಿಂದ 3.15ರವರೆಗೆ ಸಲ್ಲುವ ಮಕರ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಧ್ಯಾಹ್ನ 3.25 ಅಂಬಾರಿ ಹೊತ್ತ ಚಾಮುಂಡೇಶ್ವರಿ ತಾಯಿಗೆ ಮೈಸೂರಿನ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಪುಷ್ಪಾಭಿಷೇಕ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಎ.ಬಿ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಕ್ ತನ್ವೀರ್ ಆಸಿಫ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀರಂಗಪಟ್ಟಣ ದಸರಾ ಅದ್ಧೂರಿ ಮೆರವಣಿಗೆ
ಮೆರವಣಿಗೆಯಲ್ಲಿ ತಾಯಿ ಚಾಮುಂಡೇಶ್ವರಿ ಅಂಬಾರಿ ಹೊತ್ತು ಮಹೇಂದ್ರ ಮುಂದೆ ಸಾಗಿತು. ವರಲಕ್ಷ್ಮೀ ಹಾಗೂ ವಿಜಯ ಜೊತೆಗೆ ಹೆಜ್ಜೆ ಹಾಕಿತು.

ಮೆರವಣಿಗೆಯಲ್ಲಿ ಪೊಲೀಸ್ ಬ್ಯಾಂಡ್, ಅಶ್ವದಳ, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆ ಕೋಲಾಟ, ಗಾರುಡಿ ಗೊಂಬೆ, ತಮಟೆ, ಕಂಸಾಳೆ, ಡೊಳ್ಳು ಕುಣಿತ, ಸೋಮನ ಕುಣಿತ, ಒನಕೆ ಕುಣಿತ, ರಂಗದ ಕುಣಿತ, ಕೋಳಿ ನೃತ್ಯ, ಕಹಳೆ, ನಾಸಿಕ್ ಡೋಲ್, ದೊಡ್ಡ ಆಂಜನೇಯ, ಪಟ್ಟದ ಕುಣಿತ, ಯಕ್ಷಗಾನ ನೃತ್ಯ, ಹುಲಿವೇಷ, ಹಾಲಕ್ಕಿ ಸುಗ್ಗಿ ಕುಣಿತ, ಕೇರಳ ಚಂಡೆ, ಜಗ್ಗಲಿಗೆ, ಮಹಿಳಾ ಡೊಳ್ಳು ಕುಣಿತ ಕಲಾ ತಂಡಗಳು ಭಾಗವಹಿಸಿ ವಿಶೇಷ ಮೆರಗು ನೀಡಿತು.
ಸ್ಥಬ್ದ ಚಿತ್ರಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗೃಹಲಕ್ಷಿ ಯೋಜನೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಸ್ಥಬ್ದ ಚಿತ್ರ, ಅರೋಗ್ಯ ಇಲಾಖೆ ವತಿಯಿಂದ ಹೃದಯಘಾತ ತ್ವರಿತ ಚಿಕಿತ್ಸೆಗೆ ಸ್ಟೆಮಿ ಯೋಜನೆ ಕುರಿತು ಸ್ಥಬ್ದ ಚಿತ್ರ, ರೇಷ್ಮೆ ಇಲಾಖೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ವತಿಯಿಂದ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಸ್ಥಬ್ದ ಚಿತ್ರ ಪ್ರದರ್ಶಿಸಲಾಯಿತು.
ಜಂಬೂಸವಾರಿ ಸಾಗುತ್ತಿದ್ದ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಹಸ್ರಾರು ಜನರು ತಮ್ಮ ಮೊಬೈಲ್‌ಗಳ ಮೂಲಕ ಮೆರವಣಿಗೆಯ ದೃಶ್ಯಗಳ ಫೋಟೋ, ವೀಡಿಯೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದರು. ಆನೆಗಳು ಹತ್ತಿರ ಬರುತ್ತಿದ್ದಂತೆ ಮುಗಿಬಿದ್ದು ಫೋಟೋ ತೆಗೆಯುತ್ತಿದ್ದರು. ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು.

ಶ್ರೀರಂಗಪಟ್ಟಣದಲ್ಲಿ ಅಂಬಾರಿ ಹೊತ್ತು ಸಾಗಿದ ಮಹೇಂದ್ರ
ಮೈಸೂರು ದಸರಾ ಉತ್ಸವದಲ್ಲಿ ಚಿನ್ನದ ಅಂಬಾರಿಯ ಜಂಬೂ ಸವಾರಿ ನಡೆಯುತ್ತದೆ. ಆದರೆ, ಮೂಲನೆಲೆ ಶ್ರೀರಂಗಪಟ್ಟಣದಲ್ಲಿ ಕೆಲ ಕ್ಷಣಗಳು ಮಾತ್ರ ನಡೆದ ಮರದ ಅಂಬಾರಿ(ಔದಾ)ಯ ಜಂಬೂ ಸವಾರಿ ನೋಡಿ ಜನರು ಸಂಭ್ರಮಿಸಿದರು. ಶಕ್ತಿದೇವತೆ ಶ್ರೀಚಾಮುಂಡೇಶ್ವರಿ ಆಸೀನಳಾಗಿದ್ದ ಅಂಬಾರಿಯು ಆನೆಯ ಹೆಗಲನ್ನೇರುತ್ತಿದ್ದಂತೆ ಜನರು ಭಕ್ತಿಭಾವದಿಂದ ಕೈಮುಗಿದು ಧನ್ಯತಾಭಾವ ಪ್ರದರ್ಶಿಸಿದರು.
ಮೈಸೂರು ಅರಮನೆಗೆ ಸೇರಿದ ಮರದ ಅಂಬಾರಿಯನ್ನು ಹಿಂದಿನಿಂದಲೂ ಮೈಸೂರು ದಸರಾ ಜಂಬೂ ಸವಾರಿ ತಾಲೀಮು ವೇಳೆ ಬಳಸಲಾಗುತ್ತದೆ. ಇದೇ ಅಂಬಾರಿಯ ಬಳಕೆ ಶ್ರೀರಂಗಪಟ್ಟಣ ದಸರಾದಲ್ಲೂ ಚಾಲ್ತಿಯಲ್ಲಿದೆ. ಈ ಹಿಂದೆ ಆನೆ ದ್ರೋಣ' ಇದ್ದ ಸಮಯದಲ್ಲಿ ಸುಮಾರು 280-300 ಕೆ.ಜಿ. ತೂಕದ ಈ ಅಂಬಾರಿ(ಮರದ ಔದ)ಯನ್ನು ತೇಗದ ಮರದಿಂದ ನಿರ್ಮಿಸಿ, ಅದಕ್ಕೆ ಚಿನ್ನದ ಬಣ್ಣವನ್ನು ಲೇಪನ ಮಾಡಲಾಗಿದೆ. ಅಂಬಾರಿ ಹೊತ್ತ ಮಹೇಂದ್ರ ಗಜಗಾಂಭೀರ್ಯದಿಂದ ಮುಂದೆ ಸಾಗುತ್ತಿದ್ದರೆ, ವರಲಕ್ಷ್ಮೀ ಹಾಗೂ ವಿಜಯ ಜೊತೆಗೆ ಹೆಜ್ಜೆ ಹಾಕಿದವು.












Click it and Unblock the Notifications