ಕೆ. ಆರ್. ಪೇಟೆಯಲ್ಲಿ ಜೆಡಿಎಸ್ ಮರುಸ್ಥಾಪನೆಗೆ ಗೌಡ್ರ ಮೊಮ್ಮಕ್ಕಳ ಪಣ!
ಮಂಡ್ಯ, ಮಾರ್ಚ್ 13; ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಕೆ. ಆರ್. ಪೇಟೆ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಅದು ಜೆಡಿಎಸ್ ನಾಯಕರ ನಿದ್ದೆಗೆಡಿಸಿದ್ದಂತು ನಿಜ. ಹೀಗಾಗಿಯೇ ಆ ಕ್ಷೇತ್ರದಲ್ಲಿ ಮರಳಿ ಜೆಡಿಎಸ್ ಅನ್ನು ಪ್ರತಿಷ್ಠಾಪಿಸಲು ದೇವೇಗೌಡರ ಮೊಮ್ಮಕ್ಕಳು ಪಣತೊಟ್ಟಿರುವುದು ಹೊಸ ಬೆಳವಣಿಗೆಯಾಗಿದೆ.
ರಾಜ್ಯ ರಾಜಕಾರಣದಲ್ಲಿ ಮಂಡ್ಯ ಜಿಲ್ಲೆ ವಿಶೇಷವಾಗಿ ಗಮನಸೆಳೆಯುತ್ತದೆ. ಇಲ್ಲಿನ ರಾಜಕಾರಣದತ್ತ ಎಲ್ಲರೂ ಕುತೂಹಲದ ನೋಟ ಹರಿಸುತ್ತಾರೆ. ಕಳೆದ ಲೋಕಸಭಾ ಚುನಾವಣೆ ಇಡೀ ಭಾರತದ ಗಮನಸೆಳೆದಿತ್ತು. ಹೀಗಿರುವಾಗ ಮುಂದಿನ ವಿಧಾನಸಭಾ ಚುನಾವಣೆ ಯಾವ ರೀತಿಯ ಪರಿಣಾಮ ಬೀರಬಹುದು? ಎಂಬ ಕಾತರ ಎಲ್ಲರಲ್ಲೂ ಇದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದು ಬೀಗಿದ್ದು ಮಾತ್ರವಲ್ಲದೆ, ಜೆಡಿಎಸ್‌ನ ಭದ್ರಕೋಟೆ ಎಂಬುದನ್ನು ಸಾರಿ ಹೇಳಿತ್ತು. ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸುವುದು ಅಷ್ಟು ಸುಲಭವಾಗಿರಲಿಲ್ಲ. ಕಾರಣ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದರು. ಜೊತೆಗೆ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬರ ಕಾಣಿಸಿಕೊಂಡಿತ್ತು. ಹಾಗಾಗಿ ಬೆಳೆ ಬೆಳೆಯಲಾರದ ರೈತ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದನು. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕಿಂತ ಹೆಚ್ಚಿನ ಕೆಲಸವನ್ನು ಜೆಡಿಎಸ್ ಮಾಡಿತ್ತು. ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಕುಮಾರಸ್ವಾಮಿ ವೈಯಕ್ತಿಕ ಪರಿಹಾರ ನೀಡುವ ಮೂಲಕ ರೈತರ ಕಣ್ಣೀರು ಒರೆಸುವ ಕೆಲಸಕ್ಕೆ ಮುಂದಾಗಿದ್ದರು. ಅದರ ಪರಿಣಾಮ ಜೆಡಿಎಸ್ 7 ಕ್ಷೇತ್ರಗಳಲ್ಲಿಯೂ ವಿಜಯ ಸಾಧಿಸಿತ್ತು.

ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿದ್ದರು
ಆ ನಂತರ ಎಲ್ಲವೂ ಸರಿಯಾಗಿಯೇ ಇತ್ತು ಮಂಡ್ಯದ ಜನರ ಋಣ ತೀರಿಸುವ ಸಲುವಾಗಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ಒಂದಷ್ಟು ಯೋಜನೆಗಳನ್ನು ಮಂಡ್ಯಕ್ಕೆ ನೀಡಿದ್ದರು. ಇದರಲ್ಲಿ ಒಂದಷ್ಟು ದೂರಾಲೋಚನೆಯೂ ಇತ್ತು. ಅದಾಗಲೇ ಕುಮಾರಸ್ವಾಮಿ ಅವರು ಒಂದು ವಿಚಾರದಲ್ಲಿ ಫಿಕ್ಸ್ ಆಗಿದ್ದರು. ಅದೇನೆಂದರೆ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿರುವುದರಿಂದ 2019 ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್‌ನ ಬೆಂಬಲವೂ ಇರುವುದರಿಂದ ಸುಲಭವಾಗಿ ಗೆಲ್ಲಬಹುದೆಂದು ನಂಬಿದ್ದರು.

ಜೆಡಿಎಸ್ ಕೈ ತಪ್ಪಿದ ಕೆ. ಆರ್. ಪೇಟೆ
2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸುಮಲತಾ ಅಂಬರೀಶ್ ಕಣಕ್ಕಿಳಿಯದೆ ಹೋಗಿದ್ದರೆ ನಿಖಿಲ್ ಕುಮಾರಸ್ವಾಮಿ ಸುಲಭವಾಗಿ ಗೆಲ್ಲಬಹುದಾಗಿತ್ತು. ಆದರೆ ಏನೆಲ್ಲ ಆಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಲೋಕಸಭಾ ಚುನಾವಣೆ ಬಳಿಕ ಮಂಡ್ಯದಲ್ಲಿ ಒಂದಷ್ಟು ಬೆಳವಣಿಗೆಗಳು ಜೆಡಿಎಸ್‌ಗೆ ಹೊಡೆತ ನೀಡಿದ್ದಂತು ಸತ್ಯ. ತದನಂತರ ರಾಜಕೀಯದಲ್ಲಿ ಆದ ಏರುಪೇರುಗಳಿಂದ ಕೆ. ಆರ್. ಪೇಟೆ ಶಾಸಕ ಡಾ. ನಾರಾಯಣ ಗೌಡ ಜೆಡಿಎಸ್ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆಯಾದರು. ಅಷ್ಟೇ ಅಲ್ಲದೆ ಉಪಚುನಾವಣೆಯಲ್ಲಿ ಬಿಜೆಪಿ ಸೇರಿ ಗೆದ್ದು ಶಾಸಕ ಮಾತ್ರವಲ್ಲದೆ ಸಚಿವರೂ ಆದರು.

ಜೋಡೆತ್ತುಗಳಾಗಿ ಹೋರಾಟಕ್ಕೆ ಸಿದ್ಧತೆ
ಈ ಬೆಳವಣಿಗೆ ಜೆಡಿಎಸ್‌ನ ನಾಯಕರಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ ಎನ್ನುವುದಂತು ಸತ್ಯ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಡಾ. ನಾರಾಯಣ ಗೌಡರನ್ನು ಸೋಲಿಸಿ ಕೆ. ಆರ್. ಪೇಟೆ ಕ್ಷೇತ್ರವನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ಸೆಳೆದುಕೊಳ್ಳಲು ಈಗಿನಿಂದಲೇ ತಯಾರಿ ನಡೆಸಿದ್ದಾರೆ ಎನ್ನುವುದು ಜೆಡಿಎಸ್ ಇತ್ತೀಚೆಗೆ ಕೆ. ಆರ್. ಪೇಟೆ ಕ್ಷೇತ್ರದಲ್ಲಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮ ಮತ್ತು ನಾಯಕರು ನೀಡುತ್ತಿರುವ ಹೇಳಿಕೆಗಳಿಂದ ಗೊತ್ತಾಗುತ್ತಿದೆ.
ಡಾ. ನಾರಾಯಣ ಗೌಡರನ್ನು ಸೋಲಿಸಲು ತಂತ್ರ ಆರಂಭಿಸಲಾಗಿದೆ. ಅದರ ಜವಬ್ದಾರಿಯನ್ನು ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಹಿಸಿಕೊಳ್ಳುವ ಸಾಧ್ಯತೆಯಿದೆ. ಇದನ್ನು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಡಾ. ಸೂರಜ್ ರೇವಣ್ಣ ಅವರು ಕ್ಷೇತ್ರಕ್ಕಾಗಿ ನಾನು ಮತ್ತು ಸಹೋದರ ಜೋಡೆತ್ತುಗಳಂತೆ ದುಡಿಯುವುದಾಗಿ ಬಹಿರಂಗವಾಗಿಯೇ ಘೋಷಣೆ ಮಾಡಿದ್ದರು. ಸಹೋದರ ಅಂದರೆ ಪ್ರಜ್ವಲ್ ರೇವಣ್ಣ ಅಥವಾ ನಿಖಿಲ್ ಕುಮಾರಸ್ವಾಮಿಯೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.

ಮರಳಿ ಪಡೆಯಲು ಬೇಕಾದ ತಯಾರಿ
ನಿಖಿಲ್ ಕುಮಾರಸ್ವಾಮಿಗಂತೂ ತಮ್ಮ ಸೋಲಿನ ನೋವು ಇನ್ನೂ ಕಾಡುತ್ತಲೇ ಇದೆ. ಸೋಲಿಗೆ ಸ್ವಪಕ್ಷದ ಕೆಲವು ಮುಖಂಡರ ಪಾತ್ರವಿದೆ ಎಂಬುದು ಅವರಿಗೆ ಗೊತ್ತಿಲ್ಲದೆ ಏನಲ್ಲ. ಹಾಗಾಗಿಯೇ ಅವರು ಮಂಡ್ಯದತ್ತ ಹೆಚ್ಚಿನ ಗಮನಹರಿಸುತ್ತಿದ್ದು, ಸೋಲಿಗೆ ಪ್ರತಿಕಾರ ತೀರಿಸಲು ಬೇಕಾದ ತಂತ್ರವನ್ನು ಮಾಡುವ ಲಕ್ಷಣಗಳು ಕಾಣಿಸುತ್ತಿವೆ. ಅವರ ಮನದಲ್ಲಿ ಕಹಿ ನೆನಪುಗಳಿದ್ದು ಅದನ್ನು ಸಂದರ್ಭ ಸಿಕ್ಕಾಗಲೆಲ್ಲ ಹೊರ ಹಾಕುತ್ತಿದ್ದಾರೆ. ಹಾಗಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕೆ. ಆರ್. ಪೇಟೆ ಕ್ಷೇತ್ರದಿಂದ ಯಾರು ಕಣಕ್ಕಿಳಿಯುತ್ತಾರೆ? ಎಂಬುದೇ ರಹಸ್ಯವಾಗಿದೆ.
ಆದರೆ ದೇವೇಗೌಡರ ಮೊಮ್ಮಕ್ಕಳು ಮಾತ್ರ ಜೆಡಿಎಸ್ ಭದ್ರಕೋಟೆಯಿಂದ ಕಳಚಿ ಹೋದ ಕೆ. ಆರ್. ಪೇಟೆ ಕ್ಷೇತ್ರವನ್ನು ಮರಳಿ ಪಡೆಯಲೇ ಬೇಕೆಂಬ ಹಠಕ್ಕೆ ಬಿದ್ದಿದ್ದು, ಆ ಮೂಲಕ ಸೇಡು ತೀರಿಸಿಕೊಳ್ಳುವ ತಯಾರಿ ಈಗಿನಿಂದಲೇ ಶುರುವಾಗಿದ್ದು ಮುಂದೆ ಏನಾಗುತ್ತದೆ? ಎಂಬುದನ್ನು ಕಾಲವೇ ಹೇಳಬೇಕಾಗಿದೆ.












Click it and Unblock the Notifications