ಕೆಆರ್‌ಎಸ್ ಜಲಾಶಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್
ಮಂಡ್ಯ, ಏಪ್ರಿಲ್ 25: ಶ್ರೀಲಂಕಾದ ಕೊಲಂಬೋದಲ್ಲಿ ಉಗ್ರರು ಚರ್ಚ್ ಹಾಗೂ ಹೋಟೆಲ್‌ಗಳ ಮೇಲೆ ಸರಣಿ ಬಾಂಬ್ ಸ್ಫೋಟಿಸಿದ ಬೆನ್ನಲ್ಲೇ ಕೆ.ಆರ್.ಎಸ್ ಜಲಾಶಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಕೆ.ಆರ್.ಎಸ್ ಜಲಾಶಯ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದಿನಕ್ಕೆ ಮೂರ್ನಾಲ್ಕು ಬಾರಿ ತಪಾಸಣೆ ಮಾಡಲಾಗುತ್ತಿದೆ. ಅಲ್ಲದೆ ಜಲಾಶಯಕ್ಕೆ ಭೇಟಿ ನೀಡುವ ಪ್ರವಾಸಿಗರ ಮೇಲೆಯೂ ನಿಗಾವಹಿಸಲಾಗುತ್ತಿದ್ದು, ತಪಾಸಣೆ ನಡೆಸಿ ಬಿಡಲಾಗುತ್ತಿದೆ.

ಇನ್ನು ಮಂಡ್ಯ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಆಯಾ ಕಟ್ಟಿನ ಜಾಗಗಳಲ್ಲಿಯೂ ಪೊಲೀಸ್ ಭದ್ರತೆ ಮಾಡಲಾಗಿದೆ. ಪ್ರವಾಸಿಗರು ತೆರಳುವ ಮಳವಳ್ಳಿ ತಾಲೂಕಿನ ಶಿಂಷಾ ಬ್ಲಫ್, ಪ್ರಮುಖ ದೇವಾಲಯಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ತಪಾಸಣೆ ಮಾಡಲಾಗುತ್ತಿದ್ದು ಎಲ್ಲೆಡೆ ಹೈ ಅಲರ್ಟ್ ಮಾಡಲಾಗಿದೆ.

ಭದ್ರತೆ ಕುರಿತಂತೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ಡಿ. ಅವರ ನೇತೃತ್ವದಲ್ಲಿ ಶ್ವಾನದಳ, ಬಾಂಬ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಯಾವುದೇ ಆತಂಕದ ವಾತಾವರಣ ಇಲ್ಲ. ಆದರೂ ಬಸ್, ರೈಲ್ವೇ ನಿಲ್ದಾಣ, ಚರ್ಚ್, ಮಸೀದಿ, ದೇವಸ್ಥಾನಗಳು, ಸಿನಿಮಾ ಮಂದಿರಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.












Click it and Unblock the Notifications