ಹಲ್ಲು ಮುರಿದನೆಂದು ಪ್ರಾಣವನ್ನೇ ತೆಗೆದವರು ಅರೆಸ್ಟ್
ಮಂಡ್ಯ, ಅಕ್ಟೋಬರ್ 24: ಹಾಡಹಗಲೇ ಯುವಕನನ್ನು ಅಟ್ಟಾಡಿಸಿಕೊಂಡು, ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದ ಐವರು ಹಂತಕರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮದ್ದೂರಿನ ಶಿವಪುರದ ಪ್ರವೀಣ್ ಅಲಿಯಾಸ್ ಕಡ್ಡಿ (26), ಮಠದದೊಡ್ಡಿ ಗ್ರಾಮದ ಎಂ.ಎನ್. ನಿರಂಜನ್ ಅಲಿಯಾಸ್ ಡಾಲಿ (23), ಕ್ಯಾತಘಟ್ಟ ಗ್ರಾಮದ ಕೆ.ಪಿ. ಕಾರ್ತೀಕ್ (19), ಮಂಡ್ಯದ ಇಂದಿರಾನಗರ ಕಾಲೋನಿಯ ಜೆ. ಅನಂತಕುಮಾರ್ (23), ಸಾವುಕಾರ್ ಚನ್ನೇಗೌಡ ಬಡಾವಣೆಯ ಕೆ.ಪಿ. ಸಚಿನ್‌ಗೌಡ (20) ಎಂಬುವರೇ ಬಂಧಿತರು. ಇವರು ನವೀನ್ ಕುಮಾರ್ ಎಂಬಾತನನ್ನು ಹಲಗೂರು ವೃತ್ತದಲ್ಲಿ ಹಾಡಹಗಲೇ ಅಟ್ಟಾಡಿಸಿಕೊಂಡು ಸಿನಿಮಾ ಮಾದರಿಯಲ್ಲಿ ಕೊಲೆಗೈದಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು.
ಐದು ಮಂದಿ ಕಳೆದ ಶನಿವಾರ ಕ್ಷುಲ್ಲಕ ಕಾರಣಕ್ಕೆ ನವೀನ್‌ಕುಮಾರ್ ಅಲಿಯಾಸ್ ಕುಟ್ಟಿ (32) ಎಂಬಾತನನ್ನು ಅಟ್ಟಾಡಿಸಿಕೊಂಡು ಹತ್ಯೆಗೈದು ಬಳಿಕ ಪರಾರಿಯಾಗಿದ್ದರು. ಇವರು ಮಚ್ಚು ಹಿಡಿದು ಬೈಕ್ ನಲ್ಲಿ ತೆರಳುತ್ತಿದ್ದುದನ್ನು ಕಂಡ ಜನ ಬೆಚ್ಚಿ ಬಿದ್ದಿದ್ದರು. ಆರೋಪಿಗಳ ಬಂಧನಕ್ಕಾಗಿ ಸಿಪಿಐ ಮಂಜುನಾಥ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಹತ್ಯೆಗೀಡಾದ ನವೀನ್ ಅಲಿಯಾಸ್ ಕುಟ್ಟಿ ಮದ್ದೂರು ಸಮೀಪದ ಶಿವಪುರದ ಬಳಿ ಪ್ರವೀಣ್ ಅಲಿಯಾಸ್ ಕಡ್ಡಿ ಮೇಲೆ ಹಲ್ಲೆ ನಡೆಸಿ ಹಲ್ಲು ಮುರಿದಿದ್ದನಂತೆ. ಈ ಬಗ್ಗೆ ಯುವಕರೇ ಪಂಚಾಯಿತಿ ನಡೆಸಿ ಅದಕ್ಕೆ ಸಂಬಂಧಿಸಿದಂತೆ ಮುರಿದ ಹಲ್ಲನ್ನು ಕಟ್ಟಿಸಿಕೊಡುವಂತೆ ನವೀನ್‌ಗೆ ಸೂಚಿಸಿದ್ದರು. ಅದಕ್ಕೆ ನವೀನ್ ಒಪ್ಪಿಕೊಂಡಿದ್ದನಾದರೂ ಆ ನಂತರ ಅವರಿಗೆ ಸಿಗದೆ ಓಡಾಡುತ್ತಿದ್ದನು. ಹೀಗಾಗಿ ತನ್ನ ಹಲ್ಲು ಮುರಿದುದಕ್ಕೆ ಪ್ರತಿಕಾರವಾಗಿ ಪ್ರವೀಣ್ ತನ್ನ ಗೆಳೆಯರೊಂದಿಗೆ ಸೇರಿ ನವೀನ್ ಹತ್ಯೆಗೆ ಸಂಚು ರೂಪಿಸಿದ್ದಾನೆ.
ಕಳೆದ ಶನಿವಾರ (ಅ.19) ನವೀನ್ ಹಲಗೂರು ವೃತ್ತದ ಬಳಿ ಮಾರಿಗುಡಿ ಬೀದಿಯಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬೈಕ್ ನಲ್ಲಿ ಬಂದ ಹಂತಕರು ಆತನ ಮೇಲೆ ಹಲ್ಲೆ ಮಾಡಿದ್ದರು. ಈ ಸಂದರ್ಭ ಆತ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದನಾದರೂ ಹತ್ಯೆಗೈದು ಪರಾರಿಯಾಗಿದ್ದರು.
ಹತ್ಯೆಗೆ ಬಳಸಿದ್ದ ಆಯುಧಗಳನ್ನು ಈಗ ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ್ ತಿಳಿಸಿದ್ದಾರೆ.












Click it and Unblock the Notifications