ಮೈಸೂರು-ಕುಶಾಲನಗರ ಹೈವೇ: 3,530 ಕೋಟಿ ರೂ ವೆಚ್ಚದ ಹೆದ್ದಾರಿ ಅಭಿವೃದ್ಧಿಗೆ ಚಾಲನೆ ನೀಡಲಿರುವ ಪ್ರಧಾನಿ
ಫ್ರಧಾನಿ ಮೋದಿ ಮೈಸೂರು-ಕುಶಾಲನಗರ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಭೂಮಿ ಪೂಜೆ ಮಾಡಲಿದ್ದು, 3,530 ಕೋಟಿ ರೂ. ವೆಚ್ಚದ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮಂಡ್ಯ, ಮಾರ್ಚ್ 9: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾರ್ಚ್ 12ರಂದು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಮೈಸೂರು-ಕುಶಾಲನಗರ ನಾಲ್ಕು ಪಥದ ಹೆದ್ದಾರಿ ಅಭಿವೃದ್ಧಿಗೆ ಚಾಲನೆ ನೀಡುತ್ತಾರೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿರುವ ಮೋದಿಯವರು ಬಳಿಕ ಹೆಲಿಕಾಪ್ಟರ್ ಮೂಲಕ ಮಂಡ್ಯದ ಪಿಇಎಸ್ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬರಲಿದ್ದಾರೆ. ನಗರದ ಪ್ರವಾಸಿ ಮಂದಿರಕ್ಕೆ ಬೆಳಗ್ಗೆ ಸುಮಾರು 11.35ಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ನಂದಾ ಚಿತ್ರಮಂದಿರದವರೆಗೆ ಮೋದಿಯವರು ರೋಡ್‌ಶೋ ನಡೆಸಲಿದ್ದಾರೆ.

ರಸ್ತೆಯ ಎರಡೂ ಕಡೆಗಳಲ್ಲೂ ಸ್ಟೀಲ್ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು, ಎರಡೂ ಬದಿಯಲ್ಲೂ ಜನರು ನಿಂತು ಮೋದಿಯವರನ್ನು ನೋಡಲಿದ್ದಾರೆ. ಮಂಡ್ಯ ವಿಧಾನ ಸಭಾ ಕ್ಷೇತ್ರದಿಂದ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ರಸ್ತೆ ಬದಿಯಲ್ಲಿ ಮೋದಿಯವರನ್ನು ವೀಕ್ಷಿಸಲಿದ್ದಾರೆ. ನಗರದ ಹೊರ ವಲಯದಲ್ಲಿರುವ ಅಮರಾವತಿ ಹೊಟೇಲ್ ಸಮೀಪ ಹೆದ್ದಾರಿಗೆ ತಲುಪುವ ಮೋದಿಯವರ ಕಾರು, ನಂತರ ಹೆದ್ದಾರಿಯಲ್ಲೇ ಮುಂದೆ ಸಾಗಲಿದೆ ಎಂದು ವಿವರಿಸಿದರು.
ಗೆಜ್ಜಲಗೆರೆಗೂ ಮುನ್ನ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ನಿಗದಿಪಡಿಸಿರುವ ಸ್ಥಳದಲ್ಲಿ ಜಾನಪದ ಕಲಾ ತಂಡಗಳು, ಸುಮಾರು 500ಕ್ಕೂ ಹೆಚ್ಚು ಮಂದಿ ಕಲಾವಿದರು ಮೋದಿಯವರನ್ನು ತಮ್ಮ ಕಲಾವೈಭವದ ಪ್ರದರ್ಶನ ನೀಡಿ ಸ್ವಾಗತಿಸಲಿದ್ದಾರೆ. ಬಳಿಕ 50 ಮೀಟರ್ ದೂರ ಕಾಲ್ನಡಿಗೆಯಲ್ಲೇ ಸಾಗುವ ಮೋದಿಯವರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ವೇದಿಕೆಗೆ ಆಗಮಿಸಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿಯವರು ಮೈಸೂರು-ಕುಶಾಲನಗರ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಭೂಮಿ ಪೂಜೆ ಮಾಡಲಿದ್ದು, ಈ ಹೆದ್ದಾರಿ ಮಂಡ್ಯ ಜಿಲ್ಲೆಯಲ್ಲೂ ಸ್ವಲ್ಪ ದೂರ ಸಾಗಲಿದೆ. ಸುಮಾರು 3,530 ಕೋಟಿ ರೂ. ವೆಚ್ಚದ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಮಂಡ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 3ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಂಸದರಾದ ಸದಾನಂದಗೌಡ, ಡಿ.ಕೆ. ಸುರೇಶ್, ಸುಮಲತಾ ಹಾಗೂ ನಾನು ನಾಲ್ವರು ಈ ಭಾಗದ ಸಂಸದರಿದ್ದೇವೆ. ಹೀಗಾಗಿ ಶಿಷ್ಟಾಚಾರದಂತೆ ಶಾಸಕರ ಹೆಸರನ್ನೂ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಕಳುಹಿಸಲಾಗುವುದು. ಅಲ್ಲಿಂದ ಯಾವ ಸೂಚನೆ ಬರುವುದೋ ಅವರಿಗೆ ವೇದಿಕೆಯಲ್ಲಿ ಆದ್ಯತೆ ನೀಡಲಾಗುವುದು ಎಂದರು.
ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಿಗೆ ಯಾವ ಹೆಸರಿಗಳನ್ನೂ ಇಟ್ಟಿಲ್ಲ. ಉತ್ತರ ಪ್ರದೇಶದಲ್ಲಿ ಯಮುನಾ ಮತ್ತು ಗಂಗಾ ನದಿಗಳು ಹರಿಯುವುದರಿಂದ ಯಮುನಾ ಎಕ್ಸ್‌ಪ್ರೆಸ್ ಮತ್ತು ಗಂಗಾ ಎಕ್ಸ್‌ಪ್ರೆಸ್ ಎಂಬುದಾಗಿ ಹೆಸರನ್ನು ಇಡಲಾಗಿದೆ ಎಂದರು.
ಮೈಸೂರು-ಬೆಂಗಳೂರು ಹೆದ್ದಾರಿಗೆ ಕಾವೇರಿ ಹೆಸರು
ಕೆಲವರು ಮೈಸೂರು-ಬೆಂಗಳೂರು ಹೆದ್ದಾರಿಗೆ ಮೈಸೂರು ಅರಸರ ಹೆಸರಿಡುವಂತೆ ಸಲಹೆ ನೀಡಿದ್ದಾರೆ. ಈಗಾಗಲೇ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲಾಗಿದೆ. ಅದೂ ಕೂಡ ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಪರಿವರ್ತನೆಯಾಗಲಿದೆ. ಇನ್ನು ರೈಲು ನಿಲ್ದಾಣಕ್ಕೂ ಚಾಮರಾಜ ಒಡೆಯರ್ ಹೆಸರನ್ನಿಡಲಾಗಿದೆ. ಹೀಗಾಗಿ ನಾನು ಈ ಭಾಗದ ಜೀವನಾಡಿಯಾಗಿರುವ ಕಾವೇರಿ ತಾಯಿಯ ಹೆಸರನ್ನು ಸೂಚಿಸಿದ್ದೆ. ಈ ಭಾಗದ ಜನತೆ ಒಪ್ಪುವುದಾದರೆ ಕಾವೇರಿ ಎಕ್ಸ್‌ಪ್ರೆಸ್ ಹೈವೆ ಹೆಸರಿಡಲು ಯಾವುದೇ ಅಡ್ಡಿ ಇಲ್ಲ ಎಂದು ವಿವರಿಸಿದರು.
ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದ ಅಂಗವಾಗಿ ಅಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಮೈಸೂರಿನಿಂದ ಬೆಂಗಳೂರು ಅಥವಾ ಮೈಸೂರು ಕಡೆಗೆ ಹೋಗುವವರಿಗೆ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದರು.
ಮಂಡ್ಯದಲ್ಲಿ ರೋಡ್ ಶೋಗೆ ವಾಹನಗಳಲ್ಲಿ ಬರುವ ಜನರಿಗೆ ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಬಸ್‌ಗಳ ನಿಲುಗಡೆಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ. ಇನ್ನು ಕಾರ್ಯಕ್ರಮ ನಡೆಯುವ ಗೆಜ್ಜಲಗೆರೆ ಬಳಿ ವೇದಿಕೆ ಹಿಂಭಾಗದಲ್ಲಿ ಸುಮಾರು 40 ಎಕರೆಗೂ ಅಧಿಕ ಜಮೀನು ಇದ್ದು, ಈ ಸ್ಥಳದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯೇ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ವಿವರಿಸಿದರು.












Click it and Unblock the Notifications