ರೈಲ್ವೇ ಪೊಲೀಸರ ನಿರ್ಲಕ್ಷ್ಯ: ಸಕಾಲದಲ್ಲಿ ಚಿಕಿತ್ಸೆ ಸಿಗದೇ ರೈಲಿನಲ್ಲೇ ವ್ಯಕ್ತಿ ಸಾವು
ಮಂಡ್ಯ, ಮೇ 29: ಮೈಸೂರಿನಲ್ಲಿ ರೈಲು ಹತ್ತಿದ ಪ್ರಯಾಣಿಕರೊಬ್ಬರು ಮೂರ್ಛೆ ರೋಗಕ್ಕೆ ಒಳಗಾಗಿದ್ದು ಸಕಾಲದಲ್ಲಿ ಚಿಕಿತ್ಸೆ ಸಿಗದೇ ರೈಲಿನಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ.
ಮೈಸೂರಿನ ರಮಾಬಾಯಿನಗರದ ಪಿ. ಸ್ವಾಮಿ(83) ವೃತ್ತ ವ್ಯಕ್ತಿ ಎಂದು ಗುರುತಿಸಲಾಗಿದೆ. ಬೆಂಗಳೂರಿಗೆ ಹೋಗಲು ಮೈಸೂರಿನಲ್ಲಿ ಪ್ಯಾಸೆಂಜರ್ ರೈಲು ಹತ್ತಿದ್ದ ಸ್ವಾಮಿ ಅವರು, ರೈಲು ಮೈಸೂರು ನಿಲ್ದಾಣ ಬಿಡುವ ಮುನ್ನವೇ ಮೂರ್ಛೆರೋಗಕ್ಕೆ (ಫಿಟ್ಸ್ ) ಒಳಗಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಆಗ ರೈಲಿನ ಭೋಗಿಯಲ್ಲಿದ್ದ ಸಹ ಪ್ರಯಾಣಿಕರು, ಅಲ್ಲೇ ಇದ್ದ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಜೊತೆಗೆ ರೈಲು ನಿಲ್ದಾಣದಲ್ಲಿದ್ದ ನರ್ಸ್ ಒಬ್ಬರನ್ನು ಭೋಗಿಗೆ ಕರೆ ತಂದಿದ್ದಾರೆ. ಆದರೆ ಸ್ವಾಮಿ ಅವರನ್ನು ಪರೀಕ್ಷಿಸಿದ ಏನು ಹೇಳದೇ ಅಲ್ಲಿಂದ ಹೊರಟಿದ್ದಾರೆ. ಬಳಿಕ ರೈಲು ನಿಲ್ದಾಣ ಬಿಟ್ಟಿದೆ. ಮಾರ್ಗ ಮಧ್ಯೆ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ನಿಲ್ದಾಣಗಳಲ್ಲೂ ಅಸ್ವಸ್ಥಗೊಂಡಿದ್ದ ಸ್ವಾಮಿಯವರನ್ನು ಚಿಕಿತ್ಸೆಗಾಗಿ ಕೆಳಗಿಳಿಸಿಕೊಳ್ಳಲು ಸ್ಥಳೀಯ ರೈಲ್ವೆ ಪೊಲೀಸರು ಹಿಂದೇಟು ಹಾಕಿದ್ದಾರೆ.
ಪಾಂಡವಪುರ ನಿಲ್ದಾಣದಲ್ಲೂ ಪ್ರಯಾಣಿಕರು ಗಲಾಟಿ ಮಾಡಿದ್ದು, ನಂತರ ಚಿಕ್ಕಬ್ಯಾಡರಹಳ್ಳಿ ರೈಲು ನಿಲ್ದಾಣಕ್ಕೆ ರೈಲು ಆಗಮಿಸಿದಾಗ ಪ್ರಯಾಣಿಕರು ರೈಲ್ವೆ ಪೊಲೀಸರೊಂದಿಗೆ ನ್ನಷ್ಟು ಗಲಾಟೆ ಮಾಡಿದ್ದಾರೆ. ಮುಂದಿನ ಯಲಿಯೂರು ನಿಲ್ದಾಣಕ್ಕೆ ರೈಲು ತಲುಪುವಷ್ಟರಲ್ಲಿ ಅಲ್ಲಿಗೆ ಆಂಬುಲೆನ್ಸ್ ಬರಲಿದೆ ಎಂದು ರೈಲ್ವೇ ತಿಳಿಸಿ ಜಾರಿಕೊಂಡಿದ್ದಾರೆ. ಆದರೆ ರೈಲು ಯಲಿಯೂರು ನಿಲ್ದಾಣ ತಲುಪಿದಾಗಲು ಅಲ್ಲಿಗೆ ಯಾವುದೇ ಆಂಬುಲೆನ್ಸ್ ಬಂದಿರಲಿಲ್ಲ. ಇಷ್ಟೆಲ್ಲಾ ಬೆಳವಣಿಗೆ ನಡೆಯುವ ಹೊತ್ತಿಗೆ ಸ್ವಾಮಿಯವರು ಮೂರ್ಛೆರೋಗಕ್ಕೆ ಒಳಗಾಗಿ ಒಂದು ತಾಸಿಗೂ ಹೆಚ್ಚು ಕಾಲವಾಗಿತ್ತು. ಇದರಿಂದ ಅವರು ರೈಲಿನಲ್ಲೇ ಮೃತಪಟ್ಟಿದ್ದಾರೆ.
ನಂತರ ಮಧ್ಯಾಹ್ನ 3:40ರ ಸಮಯದಲ್ಲಿ ಮಂಡ್ಯ ನಿಲ್ದಾಣಕ್ಕೆ ರೈಲು ತಲುಪಿದಾಗ ನಿಲ್ದಾಣದ ಪೊಲೀಸರೊಂದಿಗೆ ಗಲಾಟೆ ಮಾಡಿ ಮಾತಿನ ಚಕಮಕಿ ನಡೆಸಿದ್ದಾರೆ. ಜೊತೆಗೆ ಪೊಲೀಸರನ್ನು ಮನಬಂದಂತೆ ನಿಂದಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ರೈಲ್ವೆ ಪೊಲೀಸರ ನಿರ್ಲಕ್ಷದಿಂದಾಗಿಯೇ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ. ಇದಕ್ಕೆ ರೈಲ್ವೆ ಪೊಲೀಸರ ಕಾರಣ ಎಂದು ಆರೋಪಿಸಿದರು. ಸಹ ಪ್ರಯಾಣಿಕರು ಮೃತ ಸ್ವಾಮಿಯವರ ಮೃತ ದೇಹವನ್ನು ರೈಲಿನಿಂದ ಕೆಳಗಿಳಿಸಿಕೊಂಡು ಫ್ಲಾಟ್ ಫಾರ್ಮ್ ನಂಬರ್ 3ರಲ್ಲಿ ಮಲಗಿಸಿದರು.
ರೈಲು ನಿಲ್ದಾಣ ಬಿಡುತ್ತಿದ್ದಂತೆ ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಮೃತ ಸ್ವಾಮಿಯವರ ಮೃತದೇಹ ಪ್ಲಾಟ್ ಫಾರಂನಲ್ಲಿ ಅನಾಥವಾಗಿ ಬಿದ್ದಿತ್ತು. ರೈಲು ನಿಲ್ದಾಣದ ಮಾಸ್ಟರ್ ಮೆಮೋ ಕೊಡುವುದು ತಡವಾದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಕೂಡ ಶವವನ್ನು ಮುಟ್ಟಿರಲಿಲ್ಲ. ಮೆಮೋ ನೀಡಿದ ಬಳಿಕವಷ್ಟೇ ಮಹಜರು ಮಾಡಿ, ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು.
ಮೃತ ವ್ಯಕ್ತಿಯ ಶರ್ಟ್ ಜೇಬಿನಲ್ಲಿ ದೊರೆತ ದಾಖಲೆಗಳ ಆಧಾರದ ಮೇಲೆ, ಆತನು ಮೈಸೂರಿನ ರಮಾಬಾಯಿನಗರ ನಿವಾಸಿ ಸ್ವಾಮಿ ಎಂಬುದು ಖಚಿತವಾಯಿತು. ಬಳಿಕ ಸಂಬಂಧಿಕರಿಗೆ ಮಾಹಿತಿ ನೀಡಿ ಅವರನ್ನು ಮಂಡ್ಯ ನಗರಕ್ಕೆ ಕರೆಸಿಕೊಂಡು ಶವ ಪರೀಕ್ಷೆ ನಡೆಸಿದ ಬಳಿಕ ಮೃತದೇಹ ವಾರಸುದಾರರ ವಶಕ್ಕೆ ನೀಡಲಾಯಿತು.
ನಾವು ಪಾಂಡವಪುರ ನಿಲ್ದಾಣದಲ್ಲಿ ರೈಲನ್ನು ಹತ್ತಿದಾಗ ಪ್ರಯಾಣಿಕರೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ಸ್ಟೇಷನ್ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಪೊಲೀಸರ ಭರವಸೆಯಂತೆ ಯಲಿಯೂರು ನಿಲ್ದಾಣಕ್ಕೆ ಆಂಬುಲೆನ್ಸ್ ಬರಲಿಲ್ಲ. ಮೈಸೂರಿನಲ್ಲೇ ಅಂಬುಲೆನ್ಸ್ ವ್ಯವಸ್ಥೆ ಮಾಡಿ ಚಿಕಿತ್ಸೆ ಕೊಡಿಸಿದ್ದರೆ ಈ ವ್ಯಕ್ತಿ ಬದುಕುತ್ತಿದ್ದರೇನೊ. ಆದರೆ ಪೊಲೀಸರ ನಿರ್ಲಕ್ಷ, ಅಸಹಕಾರದಿಂದ ಪ್ರಾಣ ಹೋಗಿದೆ.












Click it and Unblock the Notifications