ಅಧಿಕಾರ ಹಿಡಿದ ಗಂಟೆಯೊಳಗೆ ಪಂಚರತ್ನ ಕಾರ್ಯಕ್ರಮ ಜಾರಿಗೊಳಿಸದಿದ್ರೆ ಜೆಡಿಎಸ್ ವಿಸರ್ಜನೆ: ಕುಮಾರಸ್ವಾಮಿ
ಮಂಡ್ಯ, ಡಿಸೆಂಬರ್, 22: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದದಿಂದ ಅಧಿಕಾರ ಹಿಡಿದ ಕೇವಲ ಒಂದು ಗಂಟೆಯೊಳಗೆ ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತೇನೆ. ಕೊಟ್ಟ ಮಾತನ್ನು ತಪ್ಪಿದರೆ ಜಾತ್ಯತೀತ ಜನತಾದಳವನ್ನು ವಿಸರ್ಜಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಶಪಥ ಮಾಡಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಬಡವರು, ರೈತಾಪಿ ಜನರ ಬದುಕು ಹಸನಾಗಿಸಲು ಪಂಚರತ್ನ ಯೋಜನೆ ಅತ್ಯವಶ್ಯಕವಾಗಿದೆ. ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಇಲ್ಲ. ರೈತರನ ಬದುಕು ಅತಂತ್ರವಾಗಿದೆ. ಬೆಲೆ ಏರಿಕೆ, ಮಕ್ಕಳ ಶಿಕ್ಷಣ, ಅನಾರೋಗ್ಯ ಸಮಸ್ಯೆ, ವಸತಿ ಸೇರಿದಂತೆ ಹಲವಾರು ಸವಾಲುಗಳು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ರೈತ ಎಂದಿಗೂ ಸಾಲಗಾರರಾಗದ ರೀತಿಯಲ್ಲಿ ಕಾರ್ಯಕ್ರಮ ರೂಪಿಸುವುದೇ ನನ್ನ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ಕಳೆದ 2018ರ ಚುನಾವಣೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದಂತೆ ಎಲ್ಲ ವರ್ಗದ 28 ಸಾವಿರ ಕೋಟಿ ಮನ್ನಾ ಮಾಡಿದ್ದೇನೆ. ಈ ಬರೀ ಸಾಲ ಮನ್ನಾ ಮಾಡುವ ಯೋಜನೆ ರೂಪಿಸಿಲ್ಲ. ಬದಲಾಗಿ ರೈತರನ್ನೇ ಸಾಲಗಾರರಾಗದಂತೆ ಕಾರ್ಯಕ್ರಮ ರೂಪಿಸಿ 25 ಸಾವಿರ ಕೋಟಿ ಯೋಜನೆ ತಯಾರಿಸಿದ್ದೇನೆ. ಇದೆಲ್ಲವೂ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಹೊಂದಾಣಿಕೆಯಿಂದ ಸಾಧ್ಯವಾಗುವುದಿಲ್ಲ. ಆದ್ದರಿಂದ ಜಾತ್ಯತೀತ ಜನತಾ ದಳಕ್ಕೆ 123 ಸ್ಥಾನ ಗೆಲ್ಲಿಸಿ ಪೂರ್ಣಾವ ಸರ್ಕಾರವನ್ನು ರೂಪಿಸಲು ಅವಕಾಶ ಮಾಡಿಕೊಡಿ ಎಂದು ಕೋರಿದರು.

ಹೊಸ ಕಾರ್ಖಾನೆಗಾಗಿ 400 ಕೋಟಿ ರೂ. ಘೋಷಣೆ
ಮೈಶುಗರ್ ಪುನಶ್ಚೇತನಕ್ಕೆ 100 ಕೋಟಿ ಕೊಟ್ಟಿದ್ದೆ. ಹೊಸ ಕಾರ್ಖಾನೆಗಾಗಿ 400 ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದ್ದೆ. ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 9 ಸಾವಿರ ಕೋಟಿ ರೂಪಾಯಿ ನೀಡಿದ್ದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಏಕ ವ್ಯಕ್ತಿ ಸಂಪುಟದಲ್ಲಿ ಸ್ವಕ್ಷೇತ್ರ ಶಿಕಾರಿಪುರಕ್ಕೆ 200 ಕೋಟಿ ಬದಲಿಗೆ 600 ಕೋಟಿ ಹೆಚ್ಚುವರಿ ಅನುದಾನವನ್ನು ತೆಗೆದುಕೊಂಡರು. ಮಂಡ್ಯ ಜಿಲ್ಲೆಗೆ ನೀಡಿದ್ದ 9 ಸಾವಿರ ಕೋಟಿ ಅನುದಾನವನ್ನು ಬೇರೆ ಬೇರೆ ಯೋಜನೆಗಳಿಗೆ ವರ್ಗಾವಣೆ ಮಾಡಿದ್ದಾರೆ. 7 ಕ್ಕೆ 7 ಜಾತ್ಯತೀಯ ಜನತಾದಳದ ಶಾಸಕರನ್ನು ಗೆಲ್ಲಿಸಿದವರಿಗೆ ಏನು ಮಾಡಿದ್ದಾರೆ ಎಂದು ನಾನು ಉತ್ತರ ಕೊಡುವುದಿಲ್ಲ. ನೀವೇ ಉತ್ತರ ಕೊಡಿ ಎಂದು ಹೇಳಿದರು.

ಮಂಡ್ಯ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ
ಹೇಳಿ ಕೇಳಿ ಮಂಡ್ಯ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆಯಾಗಿದೆ. ಎಂದಿಗೂ ಇಲ್ಲಿ ಬಿಜೆಪಿಗರಿಗೆ ಪ್ರವೇಶ ನೀಡಿರಲಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ತವರು ಜಿಲ್ಲೆಯಲ್ಲಿ 4 ಸ್ಥಾನಗಳನ್ನು ನೀಡುವಂತೆ ಕೇಳುತ್ತಿದ್ದಾರೆ. ಯಾವ ನೈತಿಕತೆ ಇದೆ ಇವರಿಗೆ. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಭಿವೃದ್ಧಿಗೆ ನಯಾಪೈಸೆಯನ್ನೂ ಕೊಟ್ಟಿಲ್ಲ. ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಸಚಿವ ನಿರಾಣಿಗೆ ಕೊಟ್ಟಿದ್ದಾರೆ. ಅವರು ಇನ್ನೂ 28 ಕೋಟಿ ರೂಪಾಯಿ ಪಾವತಿ ಮಾಡಿಲ್ಲ. ಹೀಗಿದ್ದರೂ ಮತ ಕೇಳುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಹಣ ಬಲ ಮತ್ತು ಕುತಂತ್ರದಿಂದ ಗೆದ್ದಿದ್ದಾರೆ. ಈ ಬಾರಿ ಯಾವುದೇ ಕಾರಣಕ್ಕೂ ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದರು.

ದಿನದ 20 ಗಂಟೆಗಳ ಕಾಲ ಕಠಿಣ ಕೆಲಸ
ಜಾತಿ ಮನಸುಗಳು ಆಂತರಿಕವಾಗಿ ಕೆಲಸ ಮಾಡುತ್ತವೆ. ಚುನಾವಣೆ ಕಾಲಘಟ್ಟದಲ್ಲಿ ಆಯಾ ಜಾತಿಗಳು ರಾಜಕೀಯ ಪಕ್ಷಗಳಿಗೆ ಮತಗಳಾಗಿ ಪರಿವರ್ತನೆ ಮಾಡಿಕೊಳ್ಳುವ ಲೆಕ್ಕಾಚಾರವಿದೆ. ನಿಮಗೆ ಜಾತಿ ಮುಖ್ಯವೋ, ಬದುಕು ಮುಖ್ಯವೋ ಎಂಬುದನ್ನು ನೀವೇ ನಿರ್ಧರಿಸಿ. ಕಳೆದ ನವೆಂಬರ್ 8 ರಿಂದ ಪಂಚರತ್ನ ರಥಯಾತ್ರೆ ಪ್ರಾರಂಭಿಸಿದ್ದೇವೆ. ದಿನದ 20 ಗಂಟೆಗಳ ಕಾಲ ಕಠಿಣ ಕೆಲಸವನ್ನು ಮಾಡುತ್ತಿದ್ದೇನೆ. ನನಗೆ ಅಕಾರ ಮುಖ್ಯವಲ್ಲ, ಜನರ ಬದುಕು ಮುಖ್ಯವಾಗಿದೆ. ಅವರ ಸಮಸ್ಯೆಗಳು ಬಗೆಹರಿಯಬೇಕೆಂಬುದು ನನ್ನ ಉದ್ದೇಶವಾಗಿದೆ. ಈಗಾಗಲೇ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಆದರೆ, ಸರ್ಕಾರ ರೈತರ ಕಷ್ಟಗಳನ್ನು ಪರಿಹರಿಸಲು ಮುಂದಾಗಿಲ್ಲ. ಕಳೆದ ಬಾರಿ ಮಂಡ್ಯ ಜಿಲ್ಲೆಯೊಂದರಲ್ಲೇ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಸಹಾಯಕ್ಕೆ ಬರಲಿಲ್ಲ. ಆದರೆ, ಜೆಡಿಎಸ್ ವತಿಯಿಂದ ನಾನು ಕೈಲಾದಷ್ಟು ಸಹಾಯ ಮಾಡಿದ್ದೇನೆ ಎಂದರು.

ಸರ್ಕಾರದ ವಿರುದ್ಧ ಎಚ್.ಡಿ.ಕೆ ವಾಗ್ದಾಳಿ
ಈ ಸರ್ಕಾರಕ್ಕೆ ಏನು ಹೇಳಿದರೂ ಉಪಯೋಗವಿಲ್ಲ. ಕಬ್ಬು ಮತ್ತು ಹಾಲಿಗೆ ಬೆಂಬಲ ನೀಡುವಂತೆ ಕಳೆದ 44 ದಿನಗಳಿಂದ ರೈತರು ಧರಣಿ ನಡೆಸುತ್ತಿದ್ದರೂ ಕೂಡ ಸರ್ಕಾರ ಸ್ಪಂದಿಸುತ್ತಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದರೆ ಪ್ರತಿಭಟನೆಗೆ ಅವಕಾಶ ನೀಡುತ್ತಿರಲಿಲ್ಲ. ಸಭೆ ಕರೆದು ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೆ. 2018ರ ಚುನಾವಣೆಯಲ್ಲಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂಬ ಕಾರಣಕ್ಕೆ 7ಕ್ಕೆ ಏಳೂ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ನೀವು ಗೆಲ್ಲಿಸಿದ್ದೀರಿ. 1994ರಲ್ಲಿ ಎಚ್.ಡಿ.ದೇವೇಗೌಡ ಅವರಿಗೆ 8 ಸ್ಥಾನ ಹಾಗೂ 1999ರಲ್ಲಿ ಎಸ್.ಎಂ.ಕೃಷ್ಣ ಅವರಿಗೆ 8ಕ್ಕೆ ಎಂಟೂ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೀರಿ. ಮುಂಬರುವ 2023ರ ಚುನಾವಣೆಯಲ್ಲಿ ಪಂಚರತ್ನ ಯಾತ್ರೆಯನ್ನು ಜಾರಿಗೆ ತರಲು 7ಕ್ಕೆ ಏಳೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಶಾಸಕರಾದ ಎಂ.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ನಗರಸಭೆ ಉಪಾಧ್ಯಕ್ಷೆ ಇಷ್ರತ್ ಫಾತಿಮಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್.ಎನ್. ಯೋಗೇಶ್, ಮುಖಂಡ ಕೆ.ಎಸ್. ವಿಜಯ್ ಆನಂದ್, ನಗರಸಭೆ ಸದಸ್ಯೆ ಮೀನಾಕ್ಷಿ ಪುಟ್ಟಸ್ವಾಮಿ, ಮಾಜಿ ಅಧ್ಯಕ್ಷೆ ಅಂಬುಜಮ್ಮ, ಜೆಡಿಎಸ್ ತಾಲೂಕು ಅಧ್ಯಕ್ಷ ತಿಮ್ಮೇಗೌಡ, ನಗರ ಘಟಕದ ಅಧ್ಯಕ್ಷ ಸಿ.ಪಿ. ಗೌರೀಶ್, ಬೂದನೂರು ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications