ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಬಗ್ಗೆ ಸಂಸದೆ ಸುಮಲತಾ ಹೇಳಿದ್ದೇನು?
Recommended Video
ಮಂಡ್ಯ, ಜೂನ್ 11 : 'ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ' ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಸಂಸದೆಯಾದ ಬಳಿಕ ಮೊದಲ ಬಾರಿಗೆ ಮಂಡ್ಯದಲ್ಲಿ ಮಂಗಳವಾರ ಸುಮಲತಾ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಕೀಲಾರ ಗ್ರಾಮದಲ್ಲಿ ನಡೆದ 'ಸ್ವಚ್ಛ ಮೇವ ಜಯತೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
'ನನ್ನಿಂದ ನಿಮಗೆ ಯಾವುದೇ ವಿವಾದಾತ್ಮಕ ಹೇಳಿಕೆ ಸಿಗುವುದಿಲ್ಲ. ಚುನಾವಣೆ ವೇಳೆ ಯಾರ ಬಗ್ಗೆಯೂ ಕೀಳಾಗಿ ಮಾತನಾಡಿಲ್ಲ, ಈಗಲೂ ಸಹ ಮಾತನಾಡುವುದಿಲ್ಲ. ಜನರು ಜವಾಬ್ದಾರಿ ಕೊಟ್ಟಿದ್ದಾರೆ. ಕೆಲಸ ಮಾಡಿಕೊಂಡು ಹೋಗುತ್ತೇನೆ' ಎಂದು ಹೇಳಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪುನಃ ಗ್ರಾಮ ವಾಸ್ತವ್ಯ ಆರಂಭಿಸಲಿದ್ದಾರೆ. 'ನನ್ನ ಗ್ರಾಮ ವಾಸ್ತವ್ಯ ಯೋಜನೆಯನ್ನು ಜೂನ್ 21ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲ್ಲೂಕಿನಲ್ಲಿ, 22ರಂದು ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ಪುನರಾರಂಭಿಸುತ್ತಿದ್ದೇನೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದ್ದಾರೆ.

ರಾಜಕಾರಣ ಮಾಡುವ ಸಮಯವಲ್ಲ
'ಜನರು ಜವಾಬ್ದಾರಿ ಕೊಟ್ಟಿದ್ದಾರೆ, ಕೆಲಸ ಮಾಡಿಕೊಂಡು ಹೋಗುತ್ತೇನೆ. ಇದು ರಾಜಕಾರಣ ಮಾಡುವ ಸಮಯವಲ್ಲ. ಟೀಕೆಗಳಿಗೆ ಉತ್ತರ ಕೊಡುತ್ತಾ ಕಾಲ ಹರಣ ಮಾಡುವುದಿಲ್ಲ. ನನ್ನಿಂದ ಯಾವುದೇ ವಿವಾದಾತ್ಮಕ ಹೇಳಿಕೆ ನಿಮಗೆ ಸಿಗುವುದಿಲ್ಲ' ಎಂದು ಸಂಸದೆ ಸುಮಲತಾ ಹೇಳಿದರು.

ಪ್ರಜಾಪ್ರಭುತ್ವದ ದೇಗುಲ
ಮೊದಲ ಬಾರಿ ಸಂಸದೆಯಾಗಿ ಸಂಸತ್ ಭವನ ಪ್ರವೇಶಿಸಿದ ಬಗ್ಗೆ ಮಾತನಾಡಿದ ಸುಮಲತಾ ಅವರು, 'ಅದೊಂದು ಪ್ರಜಾಪ್ರಭುತ್ವದ ದೇಗುಲ. ಅಲ್ಲಿಗೆ ಹೋದಾದ ಆದಂತಹ ಸಂತಸವನ್ನು ಹೇಳಲು ಆಗುತ್ತಿಲ್ಲ' ಎಂದರು.

ಮಂಡ್ಯದಲ್ಲಿ ಈಗಾಗಲೇ ಮನೆ ಇದೆ
'ಎಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಮಂಡ್ಯದಲ್ಲಿ ಈಗಾಗಲೇ ನನ್ನ ಮನೆ ಇದೆ. ಪ್ರತಿ ತಾಲೂಕಿಗೂ ಭೇಟಿ ಕೊಡುತ್ತೇನೆ. ವಾರಕ್ಕೆ ಮೂರು ದಿನ ಮಂಡ್ಯದಲ್ಲಿ ವಾಸ್ತವ್ಯ ಹೂಡುತ್ತೇನೆ' ಎಂದು ಸುಮಲತಾ ಅವರು ಹೇಳಿದರು.

ಸಿಬ್ಬಂದಿ ನೇಮಕ ಮಾಡುವೆ
'ಸಭೆಗಳು ಅಥವ ದೆಹಲಿಯಲ್ಲಿ ಇದ್ದಾಗ ಫೋನ್ ಕರೆ ಸ್ವೀಕಾರ ಮಾಡಲು ಆಗುವುದಿಲ್ಲ. ಮುಂದೆ ಮಂಡ್ಯದಲ್ಲಿ ಕಚೇರಿ ಮಾಡಿ ಜನರ ಸಮಸ್ಯೆ ಆಲಿಸಲು ಸಿಬ್ಭಂದಿ ನೇಮಕ ಮಾಡುವೆ' ಎಂದು ಸುಮಲತಾ ಅಂಬರೀಶ್ ಹೇಳಿದರು.












Click it and Unblock the Notifications