ಮಾ.25ರಂದು ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಗೆ ತೀರ್ಮಾನ
Recommended Video

ಮಂಡ್ಯ, ಮಾರ್ಚ್ 19: ಸುಮಲತಾ ಅವರು ಮಂಡ್ಯ ಲೋಕ ಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕುರಿತು ಅಧಿಕೃತ ಘೋಷಣೆ ಮಾಡಿದ ಬೆನ್ನಲ್ಲೇ ಚುನಾವಣಾ ಕಣ ರಂಗೇರಿದ್ದು, ಜೆಡಿಎಸ್ ಅಭ್ಯರ್ಥಿ ನಿಖಲ್ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಿದ್ದು, ಮಾ.25ರ ಸೋಮವಾರ ತಮ್ಮ ಉಮೇದುವಾರಿಕೆ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಮಂಗಳವಾರ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ರೋಡ್ ಶೋ ನಡೆಸಿದ ನಿಖಿಲ್ ಗೆ ಸಚಿವ ಡಿ.ಸಿ. ತಮ್ಮಣ್ಣ, ದೇವರಾಜ ಅರಸು ನಿಗಮದ ಅಧ್ಯಕ್ಷ, ಶಾಸಕ ಅನ್ನದಾನಿ ಸಾಥ್ ನೀಡಿದ್ದಾರೆ. ಮತಯಾಚನೆ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ತಂದೆ ಕುಮಾರಸ್ವಾಮಿ ಹಾಗೂ ತಾತ ಎಚ್.ಡಿ. ದೇವೇಗೌಡರ ಹೆಸರಿನಲ್ಲಿ ಮತ ಯಾಚಿಸಿದ್ದು ವಿಶೇಷವಾಗಿತ್ತು.
ಈ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಗ ಅಂತ ನನಗೆ ಮತ ಕೊಡಿ. ಅಪ್ಪನಂತೆ ಅಭಿವೃದ್ಧಿ ಕೆಲಸ ಮಾಡುತ್ತೇನೆ.ಜೆಡಿಎಸ್- ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ಮಾಡಿ ನನ್ನ ಅಭ್ಯರ್ಥಿ ಮಾಡಲಾಗಿದೆ. ದೇವೇಗೌಡ, ಕುಮಾರಸ್ವಾಮಿ ಹಾದಿಯಲ್ಲಿ ನಾನು ನಡೆಯುತ್ತೇನೆ ಎಂದು ಮನವಿ ಮಾಡುವ ಮೂಲಕ ಗಮನಸೆಳೆದರು. ಮುಂದೆ ಓದಿ..

ಕುಮಾರಸ್ವಾಮಿ ಮಗ ಅಂತ ಮತ ಕೊಡಿ
"2004ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗಿದ್ದ ಕುಮಾರಸ್ವಾಮಿಗೆ ಮಳವಳ್ಳಿ ಜನ ದೇವೇಗೌಡರ ಮಗ ಅಂತ ಮತ ಕೊಟ್ರಿ. ಈಗ ಕುಮಾರಸ್ವಾಮಿ ಮಗ ಅಂತ ನನಗೆ ಮತ ಕೊಡಿ" ಎಂದು ನಿಖಿಲ್ ರೋಡ್ ಶೋನಲ್ಲಿ ಜನತೆಗೆ ಮನವಿ ಮಾಡಿದರು.

ದರ್ಶನ್, ಯಶ್ ವಿರುದ್ಧ ಗೋ ಬ್ಯಾಕ್ ಘೋಷಣೆ
ಇನ್ನೊಂದೆಡೆ ಹಲಗೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ನಟರಾದ ದರ್ಶನ್, ಯಶ್ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗಿದ್ದು ಕಂಡು ಬಂದಿದೆ. ಈ ಹಿಂದೆ ನಿಖಿಲ ಗೋ ಬ್ಯಾಕ್ ಎಂಬ ಅಭಿಯಾನ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು.

ಜಿದ್ದಾಜಿದ್ದಿನ ಪ್ರಚಾರಕ್ಕೆ ಚಾಲನೆ
ಇದೀಗ ಜೆಡಿಎಸ್ ಕಾರ್ಯಕರ್ತರು ಗೋ ಬ್ಯಾಕ್ ಘೋಷಣೆ ಆರಂಭಿಸಿದ್ದು, ಹಲಗೂರಿನಲ್ಲಿ ಪ್ರಚಾರ ನಡೆಸುತ್ತಿದ್ದ ನಿಖಿಲ್ ಎದುರೇ ಗೋ ಬ್ಯಾಕ್ ದರ್ಶನ್, ಗೋ ಬ್ಯಾಕ್ ಯಶ್ ಎಂದು ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗುವ ಮೂಲಕ ಜಿದ್ದಾಜಿದ್ದಿನ ಪ್ರಚಾರಕ್ಕೆ ಚಾಲನೆ ನೀಡಿರುವುದು ಕಂಡು ಬಂದಿದೆ.

ಅವರೇ ಜೆಡಿಎಸ್ ಗೆ ಸ್ಟಾರ್ ಗಳು...
ಇನ್ನೊಂದೆಡೆ ಶಾಸಕಿ ಅನಿತಾಕುಮಾರಸ್ವಾಮಿ ಮಾತನಾಡಿ, ದೇವೇಗೌಡರು ತುಮಕೂರಿನಿಂದ ಸ್ಪರ್ಧೆ ಮಾಡುವ ಸುಳಿವನ್ನು ನೀಡಿದ್ದಾರೆ. ಎಲ್ಲ ಸ್ಟಾರ್‌ಗಳಿಗಿಂತ ಜಿಲ್ಲೆಯ ಜನತೆ ಇಷ್ಟಪಡುವುದು ದೇವೇಗೌಡ್ರು ಮತ್ತು ಕುಮಾರಸ್ವಾಮಿ ಅವರನ್ನು. ಹೀಗಾಗಿ ಅವರೇ ಜೆಡಿಎಸ್ ಗೆ ಸ್ಟಾರ್ ಗಳು, ನಮಗೆ ಬೇರೆ ಸ್ಟಾರ್ ಪ್ರಚಾರಕರು ಬೇಕಿಲ್ಲ ಎಂದು ಪರೋಕ್ಷವಾಗಿ ಸುಮಲತಾ ಅವರಿಗೆ ಟಾಂಗ್ ನೀಡಿದ್ದಾರೆ.












Click it and Unblock the Notifications