ಇಬ್ಬರು ಗೌಡರ ನಡುವಿನ ಮೇಲಾಟಕ್ಕೆ ಬ್ರೇಕ್ ಹಾಕಿದ ನಿಖಿಲ್ ಕುಮಾರಸ್ವಾಮಿ
ಮಂಡ್ಯ, ನ 27: ಜಿಲ್ಲೆಯ ಇಬ್ಬರು ಪ್ರಭಾವೀ ರಾಜಕೀಯ ಮುಖಂಡರಾದ ಸುರೇಶ್ ಗೌಡ ಮತ್ತು ಎಲ್.ಆರ್. ಶಿವರಾಮೇಗೌಡರ ನಡುವಿನ ಮೇಲಾಟಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬ್ರೇಕ್ ಹಾಕಿದ್ದಾರೆ.
"ಮುಂದಿನ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಅವರೇ, ಈ ಬಗ್ಗೆ ಕಾರ್ಯಕರ್ತರಿಗೆ ಯಾವುದೇ ಸಂದೇಹ ಬೇಡ ಮತ್ತು ಗೊಂದಲವೂ ಬೇಡ"ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ನಾನು ಕೂಡಾ ಸ್ಪರ್ಧಿಸುತ್ತೇನೆ ಎಂದು ಶಿವರಾಮೇಗೌಡ್ರು ಹೇಳಿದ ನಂತರ, ಇವರು ಮತ್ತು ಸುರೇಶ್ ಗೌಡ್ರ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಈ ವಿದ್ಯಮಾನದಿಂದ ಸುರೇಶ್ ಗೌಡ ಬೇಸರ ವ್ಯಕ್ತಪಡಿಸಿದ್ದರು. ಈಗ, ಸುರೇಶ್ ಗೌಡ ಅವರೇ ಅಭ್ಯರ್ಥಿ ಎಂದು ನಿಖಿಲ್ ಹೇಳುವ ಮೂಲಕ, ಶಿವರಾಮೇಗೌಡ್ರಿಗೆ ನಿಖಿಲ್ ಟಾಂಗ್ ನೀಡಿದ್ದಾರೆ.

"ನನಗೆ ಕೆಲವೊಂದು ಫ್ಯಾಷನ್ ಇದೆ. ಈಗ,ಸಿನಿಮಾ ರಂಗದಲ್ಲಿ ನಾನು ಗುರುತಿಸಿಕೊಂಡಿದ್ದೇನೆ. ರಾಜಕೀಯದಲ್ಲೇ ಮೇಲೆ ಬರಬೇಕೆಂದಿದ್ದರೆ, ಯಾವತ್ತೋ ಶಾಸಕನಾಗುತ್ತಿದ್ದೆ. ನನ್ನ ತಂದೆಯವರ ಹೆಸರಿನಲ್ಲಿ ತುಂಬಾ ಜನ ಶಾಸಕರಾಗಿದ್ದಾರೆ"ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
"ದೇವೇಗೌಡರದ್ದು ಕುಟುಂಬ ರಾಜಕಾರಣ ಎಂದು ಹೇಳುವವರು, ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ಪುತ್ರರೂ ರಾಜಕೀಯದಲ್ಲಿ ಇದ್ದಾರೆ ಎನ್ನುವುದನ್ನು ಮರೆತಿದ್ದಾರೆಯೇ" ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
Recommended Video
"ಪಕ್ಷ ನನಗೊಂದು ಜವಾಬ್ದಾರಿಯನ್ನು ನೀಡಿದೆ. ಮುಂದೆ ಚುನಾವಣೆಗೆ ನಿಲ್ಲಬೇಕೋ, ಬೇಡವೇ ಎನ್ನುವುದನ್ನು ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಿರ್ಧರಿಸುತ್ತಾರೆ. ರಾಮನಗರ ಮತ್ತು ಮಂಡ್ಯ ಜಿಲ್ಲೆಯ ಯುವಕರು ನಾನು ಅಲ್ಲಿಂದ ಸ್ಪರ್ಧಿಸಬೇಕೆಂದು ಬಯಸುತ್ತಿದ್ದಾರೆ"ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications