ಸುಮ್ನೆ ಮಾತಾಡ್ಬೇಡಿ, ದಾಖಲೆ ಇದ್ರೆ ಬಿಡುಗಡೆ ಮಾಡಿ ಸ್ವಾಮಿ: HDKಗೆ ಚಲುವರಾಯಸ್ವಾಮಿ ಸವಾಲು
ಮತ್ತೆ ನಾನು ಎಂದೂ ಗೆಲ್ಲುವುದಿಲ್ಲ ಎಂದು ಅವರು ಅಂದುಕೊಂಡಿದ್ದರು. ಮಂಡ್ಯದ ಜನ ನನ್ನ ಪಾಪದ ಹುಡುಗ ಎಂದು ಗೆಲ್ಲಿಸಿಬಿಟ್ಟಿದ್ದಾರೆ. ನಾನು ಈಗ ಮಂತ್ರಿ ಆಗಿದ್ದೇನೆ. ಅದನ್ನು ಹೇಗೆ ಅವರು ಸಹಿಸಿಕೊಳ್ಳುತ್ತಾರೆ?, ಅವರಿಗೆ ಕಷ್ಟ ಆಗುತ್ತದೆ. ನಾವು ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.
ನಮ್ಮ ಬೆಳವಣಿಗೆಯನ್ನು ಸಹಿಸುವುದಕ್ಕೆ ಆಗದಿರುವಂತಹ ಪ್ರವೃತ್ತಿ ಇರುವವರು. ನಮಗೇನೂ ಅವರ ಮೇಲೆ ದ್ವೇಷ ಇಲ್ಲ. ಆದರೆ ಅವರಿಗೇ ನಮ್ಮನ್ನು ಕಂಡರೆ ಆಗುವುದಿಲ್ಲ. ಇವರು ಯಾರನ್ನೂ ಕೂಡ ಸಹಿಸಲ್ಲ ಎಂಬುದನ್ನು ಹಳೇ ಮೈಸೂರು ಭಾಗದ ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ನಾನು ಒಕ್ಕಲಿಗ ನಾಯಕ ಎಂಬ ಕಾರಣಕ್ಕೆ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಎಚ್‌ಡಿಕೆ ಅವರ ಬೇಳೆಕಾಳು ಬೇಯಲ್ಲ
ದೇವೇಗೌಡರು ಹಿರಿಯರು, ಪ್ರಧಾನಿ ಆಗಿದ್ದವರು. ನಾವೆಲ್ಲಾ ಅವರನ್ನು ಪ್ರೀತಿ ಮಾಡುತ್ತೇವೆ. ಆದರೆ ಕುಮಾರಸ್ವಾಮಿ ದೇವೇಗೌಡರ ಹೆಸರನ್ನು ತರದೆ ರಾಜಕೀಯ ಮಾಡುವುದಕ್ಕೆ ಆಗುವುದೇ ಇಲ್ಲ. ಅದಕ್ಕಾಗಿ ನಿತ್ಯ ದೇವೇಗೌಡರ ಹೆಸರನ್ನು ತರುತ್ತಾರೆ. ಸದನದಲ್ಲಿ ದೇವೇಗೌಡರ ಹೆಸರನ್ನು ನಾವು ಬಳಸಿಲ್ಲ.
ದೇವೇಗೌಡರ ಹೆಸರನ್ನು ಬಳಸುವವರೇ ಎಚ್.ಡಿ. ಕುಮಾರಸ್ವಾಮಿಯವರು. ಗೌಡರ ಹೆಸರನ್ನು ತೆಗೆಯದಿದ್ದರೆ ಅವರ ಬೇಳೆಕಾಳು ಬೇಯಲ್ಲ ಅನ್ನುವುದು ಅವರಿಗೂ ಗೊತ್ತಿದೆ. ಆದ್ದರಿಂದಲೇ ನಿತ್ಯ ದೇವೇಗೌಡರ ಹೆಸರನ್ನು ಬಳಸಿಯೇ ಮಾತು ಪ್ರಾರಂಭಿಸುತ್ತಾರೆ ಎಂದು ಟಾಂಗ್ ನೀಡಿದರು.
ಇತ್ತೀಚೆಗಷ್ಟೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ನವರು ಮಾಡಿರುವ ಷಡ್ಯಂತ್ರಗಳನ್ನು ಬಿಚ್ಚಿಡುತ್ತೇನೆ ಎಂದು ಪೆನ್‌ಡ್ರೈವ್ ತೋರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಪಸಿದ್ದರು. ಆದರೆ ಇದೇ ವಿಚಾರವಾಗಿ ಎಚ್.ಡಿ.ಕೆಗೇ ಒಬ್ಬರಾದ ಮೇಲೆ ಒಬ್ಬ ಕಾಂಗ್ರೆಸ್ ನಾಯಕರು ಟಾಂಗ್ ಕೊಡುತ್ತಲೇ ಇದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ನಾವು ಬಹಳಷ್ಟು ಡ್ರೈವ್ ನೋಡಿದ್ದೇವೆ. ನಾನು ಕಿವಿಯಲ್ಲಿ ಕೇಳಿದ್ದನ್ನು ನಂಬುವುದಿಲ್ಲ. ಕಣ್ಣಾರೆ ನೋಡಿದ್ದನ್ನು ಮಾತ್ರ ನಂಬುತ್ತೇನೆ. ಅವರ ಬಳಿ ದಾಖಲೆ ಇದ್ದರೆ ಬಹಿರಂಗಪಡಿಸಲಿ ಎಂದು ಸವಾಲೆಸೆದಿದ್ದರು. ಹಾಗೆಯೇ ಇಂದು ಚಲುವರಾಯಸ್ವಾಮಿ ಅವರು ಕೂಡ ಸವಾಲಾಕಿದ್ದಾರೆ. ಹಾಗಾದರೆ ಎಚ್.ಡಿ.ಕೆ ಅವರ ಮುಂದಿನ ನಿಲುವು ಏನಾಗಿರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications